ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಪಿಎಂ ಹೆಚ್​ಡಿಡಿ 
ದೇಶ

ಕಾಂಗ್ರೆಸ್ ಜೊತೆ ಬಲವಂತದ ಮದುವೆ, ಅದಕ್ಕೆ ವಿಚ್ಚೇದನ; ನಮ್ಮ ಜೊತೆ ಪ್ರೀತಿ, ಮೋದಿ ಜೊತೆ ಮದುವೆ ಎಂಬ ಖರ್ಗೆ ಹೇಳಿಕೆಗೆ ಹೆಚ್​ಡಿಡಿ ಹಾಸ್ಯ| H D Devegowda

ನವದೆಹಲಿ: ರಾಜ್ಯಸಭೆಯಲ್ಲಿ ಬುಧವಾರ(ಮಾ. 18) ಮಾತನಾಡುವ ವೇಳೆ ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡರ(H D Devegowda) ಕಾಲೆಳೆದಿದ್ದ ವಿಪಕ್ಷ ನಾಯಕ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅವರು ದೀರ್ಘಕಾಲದಿಂದ ನಮ್ಮ ಜೊತೆ ಪ್ರೀತಿಯಲ್ಲಿದ್ದು, ಅಂತಿಮವಾಗಿ ಮೋದಿಯನ್ನು ಮದುವೆಯಾದರು ಎಂದು ಉರ್ದು ಶಾಯಿರಿ ಮೂಲಕ ಹಾಸ್ಯ ಚಟಾಕಿ ಹಾರಿಸಿದ್ದರು. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಕುರಿತು ಪತ್ರ ಬರೆದು ಪ್ರತಿಕ್ರಿಯೆ ನೀಡಿರುವ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಹೆಚ್​.ಡಿ.ದೇವೇಗೌಡರು, ನನ್ನ ಆತ್ಮೀಯ ಮತ್ತು ದೀರ್ಘಕಾಲದ ಸ್ನೇಹಿತ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಸಂಸತ್ತಿನಲ್ಲಿ ನಾನು ಅವರೊಂದಿಗೆ(ಕಾಂಗ್ರೆಸ್) ಪ್ರೀತಿ ಹೊಂದಿದ್ದೇನೆ, ಆದರೆ ಅಂತಿಮವಾಗಿ ಮೋದಿಯವರನ್ನು(ಬಿಜೆಪಿ) ಅವರನ್ನು ವಿವಾಹವಾದೆ ಎಂದು ಹಾಸ್ಯ ಮಾಡಿದ್ದಾರೆ. ಅವರು ಮಾತನಾಡುವ ವೇಳೆ ನಾನು ಸದನದಲ್ಲಿ ಇರಲಿಲ್ಲ. ಯುಗಾದಿ ಹಬ್ಬದ ಸಂಬಂಧ ಬೆಂಗಳೂರಿಗೆ ಬರಬೇಕಾಯಿತು. ನಾನು ಯಾಕೆ ಆ ರೀತಿ ಮಾಡಿದೆ ಎಂಬುದು ನನ್ನ ಸ್ನೇಹಿತನಿಗೆ ಕಾರಣ ತಿಳಿದಿಲ್ಲ ಎಂದು ಹೇಳಿದ್ದಾರೆ.
ನನ್ನ ಸ್ನೇಹಿತನಿಗೆ ಅವರದೇ ಮದುವೆ ಭಾಷೆಯಲ್ಲಿ ಹೇಳಬೇಕಾದರೆ, ನಾವು ಕಾಂಗ್ರೆಸ್​​ನೊಂದಿಗೆ ಬಲವಂತದ ಮದುವೆಯಲ್ಲಿದ್ದೇವು, ಅದು ದುರುದ್ದೇಶಪೂರಿತವಾದ ಸಂಬಂಧವಾಗಿದ್ದರಿಂದ ವಿಚ್ಚೇದನ ನೀಡಬೇಕಾಯಿತು ಎಂದು ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ನಾವು ಕಾಂಗ್ರೆಸ್ ಮೈತ್ರಿಕೂಟವನ್ನು ತ್ಯಜಿಸಲಿಲ್ಲ ಎಂದಿರುವ ಹೆಚ್​ಡಿಡಿ, 2018ರಲ್ಲಿ ಕಾಂಗ್ರೆಸ್ ಗುಲಾಂ ನಬಿ ಆಜಾದ್ ಅವರನ್ನು ಕಳುಹಿಸಿ ಕುಮಾರಸ್ವಾಮಿಯವರನ್ನು ಸಿಎಂ ಹುದ್ದೆಗೆ ಆಹ್ವಾನಿಸಿತು. ನಾನು ಇದಕ್ಕೆ ಒಪ್ಪಲಿಲ್ಲ. ಖರ್ಗೆ ಅವರನ್ನು ಮಾಡಬೇಕೆಂದು ಎಲ್ಲರ ಸಮ್ಮುಖದಲ್ಲಿ ಹೇಳಿದ್ದೆ. ಸಿದ್ದರಾಮಯ್ಯ ಕೂಡ ಅಲ್ಲಿದ್ದರು. ಆದಾಗ್ಯೂ, ಆಜಾದ್ ಕುಮಾರಸ್ವಾಮಿಯವರ ನಾಯಕತ್ವವನ್ನು ಒತ್ತಾಯಿಸಿದರು. 
ಆದರೆ ಇಷ್ಟೆಲ್ಲಾ ಹಾಡು, ನೃತ್ಯ ಹಾಗೂ ಮದುವೆಯ ಬಳಿಕ, 2019ರಲ್ಲಿ ಏನಾಯ್ತು? ಅವರು ನಮ್ಮನ್ನು ಕೈಬಿಟ್ಟರು. ಎಷ್ಟು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಪಕ್ಷಾಂತರಗೊಂಡರು. ಅವರನ್ನು ಯಾರು ಕಳುಹಿಸಿದ್ರು ಎಂಬುದು ಈಗ ಎಲ್ಲರಿಗೂ ತಿಳಿದಿದೆ. ಆ ದಿನ ಪಕ್ಷಾಂತರಕ್ಕೆ ಪ್ರಚೋದನೆ ನೀಡಿದ ವ್ಯಕ್ತಿಯ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಂಡಿದ್ದರೆ, ಇಂದು ನನ್ನ ಸ್ನೇಹಿತ ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ಉತ್ತಮ ಸ್ಥಾನದಲ್ಲಿರುತ್ತಿದ್ದರು. ಆದ್ದರಿಂದ, ನೇರವಾಗಿ ಹೇಳುವುದಾದರೆ, ನಾನು ಕಾಂಗ್ರೆಸ್ ಮೈತ್ರಿಕೂಟವನ್ನು ತ್ಯಜಿಸಲಿಲ್ಲ. ಅವರೇ ದೂರ ಸರಿದರು. ವಿಚ್ಚೇದನದ ಬಳಿಕ ಹೆಚ್ಚು ಸ್ಥಿರವಾದ ಮೈತ್ರಿಕೂಟ ಹುಡುಕುವುದು ಬಿಟ್ಟು ನಮಗೆ ಬೇರೆ ದಾರಿಯಿರಲಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು? 

ಬುಧವಾರ ರಾಜ್ಯಸಭೆಯಿಂದ ನಿವೃತ್ತರಾದ ಹಿರಿಯ ನಾಯಕರ ಬಗೆಗಿನ ಅನುಭವಗಳನ್ನು ಹಂಚಿಕೊಳ್ಳುವ ತಮ್ಮ ಭಾಷಣದುದ್ದಕ್ಕೂ ರಾಜಕೀಯ ಜೀವನದ ಅನುಭವಗಳನ್ನು ಹಂಚಿಕೊಂಡ ಖರ್ಗೆ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರೊಂದಿಗಿನ ತಮ್ಮ ಸುದೀರ್ಘ 54 ವರ್ಷಗಳ ಒಡನಾಟವನ್ನು ನೆನಪಿಸಿಕೊಳ್ಳುತ್ತಾ, ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯ ಬಗ್ಗೆ ಉರ್ದು ಶಾಯರಿಯ ಶೈಲಿಯಲ್ಲಿ ಹಾಸ್ಯ ಚಟಾಕಿ ಹಾರಿಸಿದರು.
ವೋ ಮೊಹಬ್ಬತ್ ಹುಮಾರೆ ಸಾಥ್ ಕಿಯೇ, ಶಾದಿ ಮೋದಿ ಸಾಹಬ್ ಕೆ ಸಾಥ್ (ಅವರು ಪ್ರೀತಿ ಮಾಡಿದ್ದು ನಮ್ಮ ಜೊತೆ, ಆದರೆ ಮದುವೆಯಾಗಿದ್ದು ಮಾತ್ರ ಮೋದಿ ಸಾಹೇಬರ ಜೊತೆ!) ಎಂದು ಖರ್ಗೆ ಹೇಳಿದಾಗ ಸದನದಲ್ಲಿ ನಗುವಿನ ಅಲೆ ಎದ್ದಿತು. ಸ್ವತಃ ಪ್ರಧಾನಿ ಮೋದಿ ಅವರು ಕೂಡ ಖರ್ಗೆ ಅವರ ಈ ಮಾತುಗಳಿಗೆ ಜೋರಾಗಿ ನಕ್ಕಿದ್ದು ವಿಡಿಯೋದಲ್ಲಿ ಸೆರೆಯಾಗಿದೆ (ಏಜೆನ್ಸೀಸ್).