ದಿಶಾ ಸಾಲಿಯನ್ ಪ್ರಕರಣ ಮತ್ತು ಸಿಬಿಐ ಎಫ್‌ಐಆರ್ ಆರೋಪಗಳ ಕುರಿತು ಆದಿತ್ಯ ಠಾಕ್ರೆ ಪ್ರತಿಕ್ರಿಯೆ 
ದೇಶ

ದಿಶಾ ಸಾಲಿಯಾನ್​ ಪ್ರಕರಣ: ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ; ಆಕೆಯನ್ನು ಜೀವನದಲ್ಲೇ ಭೇಟಿಯಾಗಿಲ್ಲ, ಆದಿತ್ಯ ಠಾಕ್ರೆ ಗರಂ! Aditya Thackeray

ವಿನಾಯಕ ನಾಯಕ
ಮುಂಬೈ: ದಿಶಾ ಸಾಲಿಯನ್ ಸಾವು ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಶಿವಸೇನೆ (ಉದ್ಧವ್​ ಬಣ) ನಾಯಕ ಆದಿತ್ಯ ಠಾಕ್ರೆ (Aditya Thackeray) ತಮ್ಮ ಮೇಲೆ ಕೇಳಿ ಬಂದಿರುವ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಮಾಜಿ ಸೆಲೆಬ್ರಿಟಿ ಮ್ಯಾನೇಜರ್ ದಿಶಾ ಸಾಲಿಯನ್ ಅವರನ್ನು ತಾನು ಜೀವನದಲ್ಲಿ ಎಂದಿಗೂ ಭೇಟಿಯಾಗಿಲ್ಲ ಹಾಗೂ ಅವರೊಂದಿಗೆ ಯಾವುದೇ ಪರಿಚಯವಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪಕ್ಷದ ಹಿರಿಯ ನಾಯಕ ಸಂಜಯ್ ರಾವತ್, ಸಿಬಿಐ ದಾಖಲಿಸಿರುವ ಎಫ್‌ಐಆರ್ ಠಾಕ್ರೆ ಕುಟುಂಬವನ್ನು ಗುರಿಯಾಗಿಸಲು ನಡೆದಿರುವ ದೊಡ್ಡ ರಾಜಕೀಯ ಪಿತೂರಿ ಎಂದು ಆರೋಪಿಸಿದ ಮರುದಿನ ಆದಿತ್ಯ ಠಾಕ್ರೆ ಈ ಸ್ಪಷ್ಟನೆ ನೀಡಿದ್ದಾರೆ.

ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಯತ್ನ!

ಸುದ್ದಿಗಾರರೊಂದಿಗೆ ಮಾತನಾಡಿದ ಆದಿತ್ಯ ಠಾಕ್ರೆ, ಯಾವುದೇ ಸಾಕ್ಷ್ಯ ಅಥವಾ ಸಂಪರ್ಕವಿಲ್ಲದಿದ್ದರೂ ಕಳೆದ ಆರು ವರ್ಷಗಳಿಂದ ತಮ್ಮ ಹೆಸರನ್ನು ಈ ಪ್ರಕರಣದೊಂದಿಗೆ ಅನಗತ್ಯವಾಗಿ ತಳುಕು ಹಾಕಲಾಗುತ್ತಿದೆ ಎಂದು ಗರಂ ಆಗಿದ್ದಾರೆ. ತಮ್ಮ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಉದ್ದೇಶದಿಂದಲೇ ಇಂತಹ ಸುಳ್ಳು ಆರೋಪವನ್ನು ತಮ್ಮ ಮೇಲೆ ಹೊರಿಸಲಾಗುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ. 

ಮಾಧ್ಯಮ ವಿಚಾರಣೆ ವಿರುದ್ಧ ಆಕ್ರೋಶ

ಟಿವಿ ಚಾನೆಲ್‌ಗಳಲ್ಲಿ ನಡೆಯುವ ಚರ್ಚೆಗಳು ಅಥವಾ ಮಾಧ್ಯಮ ವಿಚಾರಣೆಗಳು ಎಂದಿಗೂ ಸತ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ, ಬದಲಾಗಿ ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲದ, ಅಧಿಕೃತ ತನಿಖಾ ಸಂಸ್ಥೆಗಳು ಈ ಪ್ರಕರಣದ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸಂಜಯ್ ರಾವತ್ ಗಂಭೀರ ಆರೋಪ
ಮಂಗಳವಾರ (ಸೆ.15) ಸುದ್ದಿಗಾರರೊಂದಿಗೆ ಮಾತನಾಡಿದ್ದ ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್, ಠಾಕ್ರೆ ಕುಟುಂಬದ ವರ್ಚಸ್ಸಿಗೆ ಮಸಿ ಬಳಿಯುವ ರಾಜಕೀಯ ಷಡ್ಯಂತ್ರದ ಭಾಗವಾಗಿಯೇ ಸಿಬಿಐ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಆರೋಪಿಸಿದ್ದರು. ಮುಂಬೈ ಪೊಲೀಸರು ಈ ಹಿಂದೆ ಸಮಗ್ರ ತನಿಖೆ ನಡೆಸಿ, ಈ ಪ್ರಕರಣಕ್ಕೂ ಆದಿತ್ಯ ಠಾಕ್ರೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದರು ಎಂಬುದನ್ನು ಅವರು ಹೇಳಿದ್ದಾರೆ. 
ಸೆಪ್ಟೆಂಬರ್ 2 ರಂದು ಬಾಂಬೆ ಹೈಕೋರ್ಟ್ ಈ ಪ್ರಕರಣದ ತನಿಖೆಗೆ ಆದೇಶಿಸಿದ ಬಳಿಕ ಸಿಬಿಐ ಎಫ್‌ಐಆರ್ ದಾಖಲಿಸಿಕೊಂಡಿದೆ. ನ್ಯಾಯಾಲಯದ ನಿರ್ದೇಶನದಂತೆ ಎಫ್‌ಐಆರ್‌ನಲ್ಲಿ ಯಾವುದೇ ನಿರ್ದಿಷ್ಟ ವ್ಯಕ್ತಿಯ ಹೆಸರನ್ನು ಆರೋಪಿಯಾಗಿ ನಮೂದಿಸಿಲ್ಲ ಎಂದು ವರದಿಯಾಗಿದೆ. ಆದರೂ, ಈ ದಾಖಲೆಯಲ್ಲಿ ಕೆಲವರ ಹೆಸರುಗಳ ಉಲ್ಲೇಖವಿರುವುದು ಮಹಾರಾಷ್ಟ್ರ ರಾಜಕಾರಣದಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿದೆ.

ಪ್ರಕರಣದ ಹಿನ್ನಲೆ

ಮುಂಬೈನ ಮಲಾಡ್ ಪ್ರದೇಶದಲ್ಲಿರುವ ಕಟ್ಟಡವೊಂದರಿಂದ ಬಿದ್ದು 28 ವರ್ಷದ ದಿಶಾ ಸಾಲಿಯನ್ ಜೂನ್ 8, 2020 ರಂದು ರಹಸ್ಯವಾಗಿ ಮೃತಪಟ್ಟಿದ್ದರು. ಆರಂಭದಲ್ಲಿ ಆಕಸ್ಮಿಕ ಸಾವು ಎಂದು ದಾಖಲಿಸಿಕೊಂಡಿದ್ದ ಮುಂಬೈ ಪೊಲೀಸರು, ತನಿಖೆಯ ಬಳಿಕ ಇದು ಆತ್ಮಹತ್ಯೆ ಎಂದು ತೀರ್ಮಾನಿಸಿದ್ದರು.
ಇದರ ಬೆನ್ನಲ್ಲೇ, ಕೇವಲ ಆರು ದಿನಗಳ ನಂತರ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಕೂಡ ಮೃತಪಟ್ಟಿದ್ದು, ಈ ಎರಡೂ ಸಾವುಗಳ ನಡುವೆ ಏನಾದರೂ ಸಂಬಂಧ  ಇರಬಹುದೇ ಎಂಬ ಅನುಮಾತ ವ್ಯಕ್ತವಾಗಿತ್ತು. 
ಮತ್ತೊಂದೆಡೆ, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಾತನಾಡಿ, ಸಿಬಿಐ ತನ್ನ ತನಿಖೆಯನ್ನು ಮುಕ್ತವಾಗಿ ನಡೆಸಲಿ ಎಂದಿದ್ದು, ತನಿಖೆ ನಡೆಯುತ್ತಿರುವಾಗ ಯಾರೂ ಕೂಡ ಅನಗತ್ಯ ಊಹಾಪೋಹಗಳನ್ನು ಹರಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಒಟ್ಟಿನಲ್ಲಿ, ದಿಶಾ ಸಾಲಿಯನ್ ಪ್ರಕರಣ ಮತ್ತೊಮ್ಮೆ ಮಹಾರಾಷ್ಟ್ರ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ್ದು, ಮುಂದಿನ ದಿನಗಳಲ್ಲಿ ಏನೆಲ್ಲಾ ಬೆಳವಣಿಗೆಗಳು ನಡೆಯಲಿವೆ ಎಂಬುದನ್ನು ಕಾದು ನೋಡಬೇಕಿದೆ, (ಏಜೆನ್ಸೀಸ್​).