ಕನ್ನಡ ಚಿತ್ರರಂಗದ ಹೆಮ್ಮೆಗೆ ಮತ್ತೊಂದು ಗರಿ: ಮೇರುನಟ ಅನಂತ ನಾಗ್‌ಗೆ ದಾದಾಸಾಹೇಬ್ ಫಾಲ್ಕೆ ಘೋಷಣೆ! Anant Nag

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೇರುನಟ ಅನಂತ ನಾಗ್
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೇರುನಟ ಅನಂತ ನಾಗ್
Published on
ಬೆಂಗಳೂರು: ಕನ್ನಡ, ಹಿಂದಿ, ಮರಾಠಿ ಸೇರಿದಂತೆ ಸುಮಾರು 300 ಕ್ಕೂ ಅಧಿಕ ಸಿನಿಮಾಗಳಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿರುವ ಸ್ಯಾಂಡಲ್​ವುಡ್​ ನಟ ಕನ್ನಡನಾಡಿನ ಹಿರಿಮೆ, ಹೆಮ್ಮೆಯಾದ ಅನಂತ​ ನಾಗ್ (Anant Nag)​ ಅವರಿಗೆ ಭಾರತದ ಸರ್ಕಾರ ಪ್ರತಿಷ್ಟಿತ ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿಯನ್ನು ಪ್ರಕಟಿಸಿದೆ. 
ಬುಧವಾರ (ಸೆ.16) ಪ್ರೆಸ್​ ಇನ್​ಫಾರ್​ಮೇಶನ್​  ಬ್ಯೂರೊ ಈ ಮಾಹಿತಿಯನ್ನು ಅಧಿಕೃತವಾಗಿ ಹಂಚಿಕೊಂಡಿದ್ದು, ಸೆಪ್ಟೆಂಬರ್​ನಲ್ಲಿ ಗುಜರಾತಿನಲ್ಲಿ ನಡೆಯಲಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರತಿಷ್ಟಿತ ಪ್ರಶಸ್ತಿಯನ್ನು ಅನಂತ ನಾಗ್​ ಅವರಿಗೆ ನೀಡಲಾಗುತ್ತದೆ ಎಂದು ಹೇಳಲಾಗಿದೆ.

ಪ್ರಧಾನಿ ಮೋದಿ ಹರ್ಷ!

ಅನಂತ ​ನಾಗ್ ಅವರಿಗೆ ಪ್ರತಿಷ್ಟಿತ ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿ ಘೋಷಣೆಯಾಗುತ್ತಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವಿಟ್​ ಮಾಡುವ ಮೂಲಕ ಹಿರಿಯ ನಟನಿಗೆ ಶುಭಕೋರಿದ್ದಾರೆ. 
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿರುವ ದಿಗ್ಗಜ ಅನಂತ ನಾಗ್ ಅವರಿಗೆ ಅಭಿನಂದನೆಗಳು ಎಂದಿರುವ ಪ್ರಧಾನಿ, ದಶಕಗಳ ಕಾಲ ತಮ್ಮ ಸಹಜ ಅಭಿನಯ, ಅದ್ಭುತ ಬಹುಮುಖಿ ಪ್ರತಿಭೆ ಮತ್ತು ಮೇಧಾವಿತನದ ಮೂಲಕ ಭಾರತೀಯ ಚಲನಚಿತ್ರರಂಗದ ಮೇಲೆ, ಅದರಲ್ಲೂ ವಿಶೇಷವಾಗಿ ಕನ್ನಡ ಚಿತ್ರರಂಗದ ಮೇಲೆ ಅಳಿಸಲಾಗದ ಛಾಪು ಮೂಡಿಸಿದ್ದಿರಿ. ನೀವು  ನಿರ್ವಹಿಸಿದ ಪ್ರತಿಯೊಂದು ಪಾತ್ರಕ್ಕೂ ಅಪರೂಪದ ಆಳ ಹಾಗೂ ನೈಜತೆಯನ್ನು ತಂದುಕೊಟ್ಟಿದ್ದಿರಿ. ನಿಜಕ್ಕೂ ಅತ್ಯುನ್ನತ ಕಲಾವಿದರೊಬ್ಬರಿಗೆ ಸಂದಿರುವ ಅತ್ಯಂತ ಸೂಕ್ತವಾದ ಗೌರವ ಇದಾಗಿದೆ ಎಂದು ಮೋದಿ ಟ್ವಿಟ್​ ಮಾಡಿದ್ದಾರೆ. 

ಅನಂತ್​ ನಾಗ್​ ಹಿನ್ನಲೆ

ಅನಂತ​ ನಾಗ್ (ಅನಂತ ನಾಗರಕಟ್ಟೆ) ಅವರು ಭಾರತೀಯ ಚಲನಚಿತ್ರ ರಂಗದ ಮೇರುನಟರಾಗಿದ್ದು, ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮ ಅಮೋಘ ಕೊಡುಗೆಯನ್ನು ನೀಡಿದ್ದಾರೆ. 1948ರ ಸೆಪ್ಟೆಂಬರ್ 4ರಂದು ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಜನಿಸಿದ ಇವರು, ರಂಗಭೂಮಿಯ ಮೂಲಕ ತಮ್ಮ ನಟನಾ ವೃತ್ತಿಯನ್ನು ಆರಂಭಿಸಿ, ನಂತರ ಕನ್ನಡ ಮತ್ತು ಹಿಂದಿ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. 
ಆರಂಭದಲ್ಲಿ ಮುಂಬೈನಲ್ಲಿ ಹವ್ಯಾಸಿ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ ಇವರು, 1971ರಲ್ಲಿ ತೆರೆಕಂಡ 'ಸಂಕಲ್ಪ' ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದರು. ನಂತರ ಶ್ಯಾಮ್ ಬೆನಗಲ್ ಅವರ 'ಅಂಕುರ್' ಸೇರಿದಂತೆ ಹಲವು ಮಹತ್ವದ ಸಿನಿಮಾಗಳಲ್ಲಿ ನಟಿಸಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದರು.

ಕನ್ನಡಕ್ಕೆ ಮರಳಿದ ಅನಂತ್​!

ಕನ್ನಡ ಚಿತ್ರರಂಗದಲ್ಲಿ ಕಮರ್ಷಿಯಲ್ ಹಾಗೂ ಕಲಾತ್ಮಕ ಚಿತ್ರಗಳೆರಡರಲ್ಲೂ ಸಮರ್ಥವಾಗಿ ನಟಿಸಿರುವ ಅನಂತ ನಾಗ್, 200ಕ್ಕೂ ಅಧಿಕ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರು ನಟಿಸಿದ 'ಬೆಳದಿಂಗಳ ಬಾಲೆ', 'ಗಣೇಶನ ಮದುವೆ', 'ಉದ್ಭವ', 'ಚಂದನದ ಗೊಂಬೆ', 'ಮುಕ್ತ ಮುಕ್ತ' ಮುಂತಾದ ಸಿನಿಮಾಗಳು ಮತ್ತು ಧಾರಾವಾಹಿಗಳು ಪ್ರೇಕ್ಷಕರ ಮನಸ್ಸಿನಲ್ಲಿ ಸದಾ ಉಳಿದುಕೊಂಡಿವೆ. 
ತಮ್ಮ ಮೃದು ಸ್ವಭಾವದ ನಟನೆ, ವಿಭಿನ್ನ ಹಾವಭಾವ ಮತ್ತು ಅತ್ಯುತ್ತಮ ಸಂಭಾಷಣಾ ಶೈಲಿಯಿಂದ ಕನ್ನಡಿಗರ ಆರಾಧ್ಯ ದೈವವಾಗಿರುವ ಇವರು, ನಾಯಕನಾಗಿ ಮಾತ್ರವಲ್ಲದೆ ಪೋಷಕ ನಟನಾಗಿಯೂ ಕೂಡ ಸಿನಿಮಾಗಳಲ್ಲಿ ಸಾಟಿಯಿಲ್ಲದ ಅಭಿನಯವನ್ನು ನೀಡುತ್ತಾ ಬಂದಿದ್ದಾರೆ.

ಪ್ರಶಸ್ತಿ ಹಾಗೂ ರಾಜಕೀಯ!

ಚಲನಚಿತ್ರ ರಂಗದಲ್ಲಿ ಇವರು ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಒಲಿದುಬಂದಿವೆ. ಅನಂತ​ನಾಗ್ ಅವರು ಹಲವಾರು ಫಿಲ್ಮ್‌ಫೇರ್ ಪ್ರಶಸ್ತಿಗಳು ಹಾಗೂ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದು ಹೆಮ್ಮೆಗೆ ಪಾತ್ರರಾಗಿದ್ದಾರೆ. 
ಕೇವಲ ನಟನೆಯಷ್ಟೇ ಅಲ್ಲದೆ, ಅವರು ರಾಜಕೀಯ ಕ್ಷೇತ್ರದಲ್ಲೂ ಗುರುತಿಸಿಕೊಂಡು ಕರ್ನಾಟಕ ಸರ್ಕಾರದ ಸಚಿವರಾಗಿ ಜನಪರ ಸೇವೆ ಸಲ್ಲಿಸಿದ್ದಾರೆ. ಸದ್ಯದಲ್ಲೂ ತಮ್ಮ ವಯಸ್ಸನ್ನು ಲೆಕ್ಕಿಸದೆ ವಿಭಿನ್ನ ಪಾತ್ರಗಳಲ್ಲಿ ನಟಿಸುವ ಮೂಲಕ ಇಂದಿನ ಯುವ ಪೀಳಿಗೆಯ ನಟರಿಗೂ ಸ್ಫೂರ್ತಿಯಾಗಿದ್ದಾರೆ ಮತ್ತು ಭಾರತೀಯ ಚಿತ್ರರಂಗದ ದಿಗ್ಗಜರ ಸಾಲಿನಲ್ಲಿ ಪ್ರಮುಖರಾಗಿ ಗೌರವಿಸಲ್ಪಡುತ್ತಿದ್ದಾರೆ, (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net