ಮೆಕ್ಕಾ ಮೇಲಿನ ದಾಳಿ ಸಹಿಸುವುದಿಲ್ಲ; ನಮ್ಮ ಜನರಿಗೆ ತುಂಬಾ ಬೇಸರವಾಗಿದೆ; ಸೌದಿ ಅರೇಬಿಯಾ ಪರ ನಾವಿದ್ದೇವೆ ಎಂದ ಪಾಕ್​ ಪ್ರಧಾನಿ ಶೆಹಬಾಜ್​ ಶರೀಫ್​! Pak PM Shehbaz Sharif

ಸೌದಿ ಅರೇಬಿಯಾಕ್ಕೆ ಬೆಂಬಲ ಸೂಚಿಸಿದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್
ಸೌದಿ ಅರೇಬಿಯಾಕ್ಕೆ ಬೆಂಬಲ ಸೂಚಿಸಿದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್
Published on
ಇಸ್ಲಾಮಾಬಾದ್​: ಮುಸಲ್ಮಾನರ ಪವಿತ್ರ ಧಾರ್ಮಿಕ ಸ್ಥಳ ಮೆಕ್ಕಾ (ಸೌದಿ ಅರೇಬಿಯಾ) ಮೇಲೆ ಯೆಮೆನ್ನಿನ ಹೌತಿ ಬಂಡುಕೋರರು ನಡೆಸಿರುವ ದಾಳಿಯನ್ನು ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್​ ಶರೀಫ್ (Pak PM Shehbaz Sharif)​ ವಿರೋಧಿಸಿದ್ದಾರೆ.
ದಶಕಗಳ ಕಾಲ, ಸೌದಿ ಹಾಗೂ ಯೆಮೆನ್ ದೇಶದ ಹೌತಿ ಬಂಡುಕೋರರ ನಡುವೆ ಸಂಘರ್ಷ ಕಂಡುಬರುತ್ತಿದ್ದು, ಈ ಬಾರಿ ಹೌತಿಗಳು ಮೆಕ್ಕಾದ ಮೇಲೆ ಡ್ರೋನ್​ ದಾಳಿ ನಡೆಸುವ ಮೂಲಕ ಜಾಗತ್ತಿನ ಗಮನವನ್ನು ತಮ್ಮತ್ತ ಸೆಳೆದಿದ್ದಾರೆ.

ಮೆಕ್ಕಾದ ಮೇಲಿನ ದಾಳಿ ಸಹಿಸುವುದಿಲ್ಲ!

ಸೌದಿ ಅರೇಬಿಯಾದಲ್ಲಿರುವ ಮೆಕ್ಕಾದ ಮಸೀದಿಗಳನ್ನು ಗುರಿ ಮಾಡಿಕೊಂಡು ನಡೆದಿರುದ ದಾಳಿಯನ್ನು ಪಾಕ್​ ಪ್ರಧಾನಿ ಶೆಹಬಾಜ್​ ಶರೀಫ್​ ವಿರೋಧ ವ್ಯಕ್ತಪಡಿಸಿ ಆಕ್ರೋಶ ಹೊರಹಾಕಿದ್ದಾರೆ. ಸೌದಿ ಅರೇಬಿಯಾ ಹಾಗೂ ಮಕ್ಕಾ ಅಲ್-ಮುಕರ್ರಮಾ ಮೇಲೆ ನಡೆದಿರುವ ದಾಳಿಯನ್ನು ವೈಯಕ್ತಿಕವಾಗಿ ನಾನು ಹಾಗೂ ಪಾಕಿಸ್ತಾನದ ಪ್ರತಿಯೊಬ್ಬ ನಾಗರಿಕರಲ್ಲಿ ಬೇಸರ ಹಾಗೂ ಕೋಪವನ್ನು ತರಿಸಿದೆ ಎಂದಿದ್ದಾರೆ.
ಆದರೆ, ಮಸೀದಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಂಡ ಸೌದಿ ಮಿಲಿಟರಿಯ ಧೈರ್ಯ ಹಾಗೂ ಶೌರ್ಯಕ್ಕೆ ಸಲಾಂ ಎಂದಿರುವ ಶರೀಫ್​, ಎಲ್ಲಾ ಪಕ್ಷದವರು ಈ ಕೂಡಲೇ ಶಸ್ತ್ರಾಸ್ತ್ರಗಳನ್ನು ಬದಿಗಿಟ್ಟು ಮಾತುಕತೆ ಮೂಲಕ ವಿಷಯವನ್ನು ಬಗೆಹರಿಸಿಕೊಳ್ಳಬೇಕೆಂದು ಹೇಳಿದ್ದಾರೆ.
ಮಧ್ಯಪ್ರಾಚ್ಯ ಈಗಾಗಲೇ ಸಾಕಷ್ಟು ಸಂಘರ್ಷವನ್ನು ನೋಡಿದೆ, ಈಗ ಮತ್ತೆ ಇಂಹತ ಪರಿಸ್ಥಿತಿ ನಿರ್ಮಾಣವಾಗಬಾರದು. ಸಹೋದರ ದೇಶ ಸೌದಿ ಅರೇಬಿಯಾದ ಹೆಗಲಿಗೆ ಹೆಗಲನ್ನು ಕೊಟ್ಟು ಪಾಕಿಸ್ತಾನ ನಿಲ್ಲಲಿದೆ ಎಂದು ಪಾಕ್​ ಪ್ರಧಾನಿಗಳು ತಮ್ಮ ಟ್ವಿಟ್​ನಲ್ಲಿ ತಿಳಿಸಿದ್ದಾರೆ.

ಹೌತಿಗಳನ್ನು ಟೀಕಿಸದ ಶರೀಫ್​!

ಸೌದಿ ಅರೇಬಿಯಾದ ಮೇಲೆ ನಡೆದ ದಾಳಿಗೆ ವಿರೋಧ ವ್ಯಕ್ತಪಡಿಸಿರುವ ಪಾಕಿಸ್ತಾನ, ದಾಳಿ ನಡೆಸಿದ ಯೆಮೆನ್​ ದೇಶದ ಹೌತಿಗಳ ಬಗ್ಗೆ ಒಂದು ಮಾತನ್ನು ಹೇಳಿಲ್ಲ, ಬರೆದಿಲ್ಲ.
ಇಸ್ಲಾಂ ಅನ್ನು ನಂಬುವ, ಪಾಲಿಸುವ ಜನರ ಅಸ್ಮಿತೆಯಾದ ಮೆಕ್ಕಾದ ಮೇಲೆ ದಾಳಿ ಮಾಡಿರುವ ಹೌತಿಗಳನ್ನು ತರಾಟೆಗೆ ತೆಗೆದುಕೊಳ್ಳುವ ಅಥವಾ ಅವರ ಕ್ರಮವನ್ನು ನೇರವಾಗಿ ವಿರೋಧಿಸುವ ಯತ್ನವನ್ನು ಪಾಕ್​ ಪ್ರಧಾನಿ ಶೆಹಬಾಜ್​ ಶರೀಫ್​ ಮಾಡಿಲ್ಲ. ಬದಲಿಗೆ ನಾವು ಘಟನೆಯನ್ನು ಖಂಡಿಸುತ್ತೇವೆ, ನಮ್ಮ ಬೆಂಬಲ ಸೌದಿ ಅರೇಬಿಯಾ ಜೊತೆಗಿದೆ ಎಂದು ಟ್ವಿಟ್​ ಮಾಡಿದ್ದಾರೆ.

ಕೆಂಪು ಸಮುದ್ರದಲ್ಲಿ ಉದ್ವಿಗ್ನತೆ ಮತ್ತು ಕತಾರ್ ಎಚ್ಚರಿಕೆ

ಯೆಮೆನ್ ಅಂತರ್ಯುದ್ಧ ತೀವ್ರಗೊಂಡ ಬಳಿಕ ಹೌತಿಗಳು ಸೌದಿ ಅರೇಬಿಯಾದ ತೈಲ ಸ್ಥಾವರಗಳ ಮೇಲೆ ನಿರಂತರ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳನ್ನು ಮುಂದುವರಿಸಿದ್ದಾರೆ. ಕೆಂಪು ಸಮುದ್ರದಲ್ಲಿ ಸೌದಿ ಹಡಗುಗಳನ್ನು ಗುರಿಯಾಗಿಸುತ್ತಿರುವ ಬಂಡುಕೋರರು, ರಿಯಾದ್ ವಿರುದ್ಧ ನೌಕಾ ದಿಗ್ಬಂಧನವನ್ನೂ ಘೋಷಿಸಿದ್ದಾರೆ. ಪ್ರಮುಖ ಜಲಮಾರ್ಗವಾದ ಬಾಬ್ ಅಲ್-ಮಂಡಬ್ ಜಲಸಂಧಿಯನ್ನು ಮುಚ್ಚಿದರೆ ಅದು ಇಡೀ ಜಗತ್ತಿಗೇ ವಿನಾಶಕಾರಿಯಾಗಲಿದೆ ಎಂದು ಕತಾರ್ ಗಂಭೀರ ಎಚ್ಚರಿಕೆ ನೀಡಿದೆ.
ಮಧ್ಯಪ್ರಾಚ್ಯದಲ್ಲಿ ದಿನದಿಂದ ದಿನಕ್ಕೆ ಸಂಘರ್ಷಗಳು ಹೆಚ್ಚಾದಂತೆ ಜಾಗತಿಕ ಮಟ್ಟದಲ್ಲೂ ತಳಮಳ ಸೃಷ್ಟಿಸಿದೆ. ತೈಲ ಮಾರುಕಟ್ಟೆಯ ಪ್ರಮುಖ ಕೊಂಡಿಯಾಗಿರುವ ಅರಬ್​ ದೇಶಗಳು ಹೀಗೆ ಒಬ್ಬರ ಮೇಲೊಬ್ಬರು ದಾಳಿ ಮಾಡುತ್ತಿದ್ದರೆ, ಮುಂದಿನ ದಿನಗಳಲ್ಲಿ ತೈಲ ಮಾರುಕಟ್ಟೆಯಲ್ಲಿ ಭಾರಿ ತಲ್ಲಣವಾಗಲಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ ಸೌದಿ ನಾಯಕರು ಮುಂದಿನ ದಿನಗಳಲ್ಲಿ ಯಾವ ರೀತಿಯ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net