ಜನರನ್ನು ಬೀದಿ ನಾಯಿಗಳಿಗೆ ಹೋಲಿಸಿದ್ರಾ ರಾಘವ ಲಾರೆನ್ಸ್? 
ದೇಶ

ಜನರನ್ನು ಬೀದಿ ನಾಯಿಗಳಿಗೆ ಹೋಲಿಸಿದ್ರಾ ರಾಘವ ಲಾರೆನ್ಸ್?ದಳಪತಿ ವಿಜಯ್ ಪಕ್ಷ ಬೆಂಬಲಿಸುವ ಉತ್ಸಾಹದಲ್ಲಿ ಎಡವಟ್ಟು;ವಿವಾದದ ಬೆನ್ನಲ್ಲೆ ಸ್ಪಷ್ಟನೆ ನೀಡಿದ ನಟ! Raghava Lawrence Controversy

ಪ್ರಮುಖ ಮುಖ್ಯಾಂಶಗಳು

  • ಜನರನ್ನು ಬೀದಿ ನಾಯಿಗಳಿಗೆ ಹೋಲಿಸಿದ್ರಾ ರಾಘವ ಲಾರೆನ್ಸ್?
  • ಟಿವಿಕೆ ಪಕ್ಷವನ್ನು ಬೆಂಬಲಿಸುವ ಉತ್ಸಾಹದಲ್ಲಿ ನಟ ಯಡವಟ್ಟು
  • ಸೋಷಿಯಲ್​ ಮೀಡಿಯಾನಲ್ಲಿ ಭುಗಿಲೆದ್ದ ಆಕ್ರೋಶ
ತಮಿಳುನಾಡು: ಕಾಲಿವುಡ್​​ ಸ್ಟಾರ್ ನಟ, ಡ್ಯಾನ್ಸ್ ಮಾಸ್ಟರ್ ರಾಘವ ಲಾರೆನ್ಸ್ (Raghava Lawrence Controversy) ಸದ್ಯ ವಿವಾದದ ಸುಳಿಯೊಂದಕ್ಕೆ ಸಿಲುಕಿದ್ದಾರೆ. ಸದಾ ಸಮಾಜ ಸೇವೆ, ಅನಾಥ ಮಕ್ಕಳಿಗೆ ನೆರವು ಅಂತ ಸುದ್ದಿಯಲ್ಲಿರುತ್ತಿದ್ದ ಲಾರೆನ್ಸ್, ಈ ಬಾರಿ ಮಾಡಿಕೊಂಡಿರುವ ಎಡವಟ್ಟು ತಮಿಳುನಾಡಿನಾದ್ಯಂತ ಕಿಚ್ಚು ಹೊತ್ತಿಸಿದೆ.
ನಟ ದಳಪತಿ ವಿಜಯ್ ಅವರ ಹೊಸ ರಾಜಕೀಯ ಪಕ್ಷ ಟಿವಿಕೆ (TVK) ಯನ್ನು ಬೆಂಬಲಿಸುವ ಉತ್ಸಾಹದಲ್ಲಿ, ಲಾರೆನ್ಸ್ ತಮಿಳುನಾಡಿನ ಜನರನ್ನು ಬೀದಿ ನಾಯಿಗಳಿಗೆ ಹೋಲಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರ ಬೆನ್ನಲ್ಲೇ ನೆಟ್ಟಿಗರು ಹಾಗೂ ವಿಮರ್ಶಕರು ಅವರ ವಿರುದ್ಧ ಮುಗಿಬಿದ್ದಿದ್ದಾರೆ.
ಲಾರೆನ್ಸ್ ಮಾತನಾಡಿದ ವಿಡಿಯೋದ ಸಣ್ಣ ತುಣುಕೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ತಮಿಳು ಜನರನ್ನು ಕೆರಳಿಸಿದೆ. ವಿವಾದ ದೊಡ್ಡದಾಗುತ್ತಿದ್ದಂತೆ ರಾಘವ ಲಾರೆನ್ಸ್, ನಾನು ಹೃದಯಹೀನನಲ್ಲ, ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಅಷ್ಟಕ್ಕೂ ಲಾರೆನ್ಸ್ ಹೇಳಿದ್ದೇನು?

ಇತ್ತೀಚೆಗಷ್ಟೇ ಸಿನಿಮಾ ರಂಗದಿಂದ ರಾಜಕೀಯಕ್ಕೆ ಎಂಟ್ರಿ ಕೊಡುವುದಾಗಿ ಘೋಷಿಸಿದ್ದ ಲಾರೆನ್ಸ್, ದಳಪತಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ಬಹಿರಂಗ ಬೆಂಬಲ ಘೋಷಿಸಿದ್ದರು. ಇದೇ ವಿಚಾರವಾಗಿ ನಡೆದ ಪ್ರೆಸ್‌ಮೀಟ್‌ನಲ್ಲಿ, ಹೊಸ ಸರ್ಕಾರದ ಒಂದು ತಿಂಗಳ ಆಡಳಿತ ಹೇಗಿದೆ ಎಂಬ ಪ್ರಶ್ನೆಗೆ ಲಾರೆನ್ಸ್ ಒಂದು ಹೊಸ ಮನೆಯ ಉದಾಹರಣೆ ನೀಡಿದ್ದರು.
ಹೊಸ ಸರ್ಕಾರ ಒಂದು ತಿಂಗಳಲ್ಲಿ ಸೂಪರ್ ಆಗಿ ಕೆಲಸ ಮಾಡಿದೆ. ನಾವೇನಾದರೂ ಹೊಸ ಮನೆಗೆ ಹೋದಾಗ, ಅಲ್ಲಿ ವಾಸಿಸಲು ಶುರು ಮಾಡಿದ ಮೇಲಷ್ಟೇ ಪೈಪ್ ಅಥವಾ ಫ್ಯಾನ್ ರಿಪೇರಿ ಇರೋದು ಗೊತ್ತಾಗುತ್ತೆ. ಹಾಗೆಯೇ, ಆ ಹೊಸ ಮನೆ ಇರುವ ಗಲ್ಲಿಯ ಬೀದಿ ನಾಯಿ ಕೂಡ ಮೊದ ಮೊದಲು ನಮ್ಮನ್ನು ನೋಡಿ ಬೊಗಳುತ್ತದೆ.
ಅದು ನಮ್ಮ ಜೊತೆ ಹೊಂದಾಣಿಕೆ ಆಗಬೇಕೆಂದರೆ ನಾವು ಅದಕ್ಕೆ ಬಿಸ್ಕತ್ತು ಅಥವಾ ಬಿರಿಯಾನಿ ಹಾಕಬೇಕಾಗುತ್ತದೆ. ಒಂದು ಸಣ್ಣ ಮನೆ ಮತ್ತು ನಾಯಿಯ ವಿಷಯದಲ್ಲೇ ಹೀಗಿರುವಾಗ, ಇಡೀ ರಾಜ್ಯದ ಆಡಳಿತ ನಡೆಸುವುದು ಸುಲಭನಾ? ಅವರಿಗೆ ಸ್ವಲ್ಪ ಸಮಯ ಕೊಡಿ, ಪಾಸಿಟಿವ್ ಆಗಿ ಯೋಚಿಸಿ. ನೀವೇ ಬದಲಾವಣೆ ಬಯಸಿದ್ರಿ, ಈಗ ಬದಲಾವಣೆ ಬಂದಿದೆ. ಟೈಮ್ ಕೊಟ್ಟರೆ ಎಲ್ಲವೂ ಸರಿಯಾಗುತ್ತದೆ ಎಂದು ಲಾರೆನ್ಸ್ ಹೇಳಿದ್ದರು.

ಕೆರಳಿ ಕೆಂಡವಾದ ನೆಟ್ಟಿಗರು: ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ!

ಲಾರೆನ್ಸ್ ಅವರ ಈ ಸುದೀರ್ಘ ಭಾಷಣದಲ್ಲಿ ಕೇವಲ ಬೀದಿ ನಾಯಿ ಮತ್ತು ಬಿಸ್ಕತ್ತು ಕಥೆ ಇರುವ ಸಣ್ಣ ಕ್ಲಿಪ್ ಅನ್ನು ಮಾತ್ರ ಕಟ್ ಮಾಡಿ ಯಾರೋ ಆನ್‌ಲೈನ್‌ನಲ್ಲಿ ಹರಿಬಿಟ್ಟಿದ್ದಾರೆ. ಇದನ್ನು ನೋಡಿದ ತಮಿಳುನಾಡು ಜನ ಗರಂ ಆಗಿದ್ದಾರೆ.
ಸರ್ಕಾರವನ್ನು ಪ್ರಶ್ನಿಸುವ ಜನರನ್ನು ಲಾರೆನ್ಸ್ ಬೀದಿ ನಾಯಿಗಳಿಗೆ ಹೋಲಿಸಿದ್ದಾರಾ? ಪ್ರಜಾಪ್ರಭುತ್ವದಲ್ಲಿ ಪ್ರಶ್ನೆ ಮಾಡುವುದು ಜನರ ಹಕ್ಕು, ಅದನ್ನ ಬೊಗಳೋದು ಎನ್ನುವುದಲ್ಲ. ಲಾರೆನ್ಸ್‌ಗೆ ತಮಿಳು ಜನರ ಮೇಲೆ ಇಷ್ಟೊಂದು ದುರಹಂಕಾರವೇ?" ಎಂದು ಟ್ವಿಟರ್ ನಲ್ಲಿ ಜನ ತರಾಟೆಗೆ ತೆಗೆದುಕೊಂಡಿದ್ದಾರೆ.

ನಾನು ಅಂತವನಲ್ಲ! ಲಾರೆನ್ಸ್ ಕ್ಲಾರಿಫಿಕೇಶನ್

ಟ್ವಿಟರ್, ಫೇಸ್‌ಬುಕ್‌ನಲ್ಲಿ ತಮಗೆ ಬರುತ್ತಿರುವ ನೆಗೆಟಿವ್ ಕಮೆಂಟ್‌ಗಳನ್ನು ನೋಡಿ ಕಂಗಾಲಾದ ರಾಘವ ಲಾರೆನ್ಸ್, ತಕ್ಷಣವೇ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ಗಳ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ನಾನು ಯಾವುದೇ ಕಾರಣಕ್ಕೂ ತಮಿಳುನಾಡಿನ ಜನರನ್ನು ಅವಮಾನಿಸಿಲ್ಲ. ನಾನು ಹೃದಯಹೀನನಲ್ಲ. ಹೊಸ ಸರ್ಕಾರ ಬಂದಾಗ ಎಲ್ಲವೂ ಸೆಟ್ ಆಗಲು ಸ್ವಲ್ಪ ಸಮಯ ಬೇಕು ಎಂಬ ಅರ್ಥದಲ್ಲಿ ನಾನು ಆ ಉದಾಹರಣೆ ನೀಡಿದ್ದೆ ಅಷ್ಟೇ. ಆದರೆ ವಿಡಿಯೋವನ್ನು ಎಡಿಟ್ ಮಾಡಿ ತಪ್ಪಾಗಿ ಬಿಂಬಿಸಲಾಗಿದೆ. ದಯವಿಟ್ಟು ಪೂರ್ತಿ ವಿಡಿಯೋ ನೋಡಿ ಸತ್ಯ ಅರ್ಥ ಮಾಡಿಕೊಳ್ಳಿ ಎಂದು ಲಾರೆನ್ಸ್ ವಿನಂತಿಸಿದ್ದಾರೆ, (ಏಜನ್ಸೀಸ್​).