ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಹಮ್ಮಿಕೊಳ್ಳಲು ಹೊರಟಿದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಲು ಮುಂದಾಗಿದ್ದ ಖ್ಯಾತ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಹಾಗೂ ಯೂಟ್ಯೂಬರ್ ಧ್ರುವ್ ರಾಠೀ ( Dhruv Rathee ) ಅವರನ್ನು ಶನಿವಾರ (ಅ.10) ಬೆಳಗ್ಗೆ ಗುರುಗ್ರಾಮದ ಸೆಕ್ಟರ್ 56ರಲ್ಲಿರುವ ಅವರ ನಿವಾಸದಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದೆಹಲಿ ಮತ್ತು ಗುರುಗ್ರಾಮ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಪೊಲೀಸರು ಏಕಾಏಕಿ ಅವರ ಮನೆಗೆ ತೆರಳಿ ಈ ಕ್ರಮ ಕೈಗೊಂಡಿದ್ದು, ಈ ಸುದ್ದಿಯು ರಾಷ್ಟ್ರವ್ಯಾಪಿ ಸಂಚಲನ ಮೂಡಿಸಿದೆ. ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ಪೊಲೀಸರು ನೀಡಿದ್ದ ಎಚ್ಚರಿಕೆಯನ್ನು ಲೆಕ್ಕಿಸದೆ ರಾಠೀ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ವಿಡಿಯೋಗಳನ್ನು ಮಾಡಿ ಜನರನ್ನು ಪ್ರಚೋದಿಸಿದ್ದೇ ಈ ಬಂಧನಕ್ಕೆ ಪ್ರಮುಖ ಕಾರಣವೆಂದು ಮೂಲಗಳು ತಿಳಿಸಿವೆ.
ಚುನಾವಣಾ ಪಟ್ಟಿಯಲ್ಲಿನ ಲೋಪದೋಷಗಳು ಹಾಗೂ ಇನ್ನಿತರ ವಿವಾದಗಳ ವಿಚಾರವಾಗಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಯನ್ನು ಒತ್ತಾಯಿಸಿ ಸಿಜೆಪಿ ಈ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ಜರ್ಮನಿಯಿಂದ ಇತ್ತೀಚೆಗಷ್ಟೇ ಭಾರತಕ್ಕೆ ವಾಪಸಾಗಿರುವ ಧ್ರುವ್ ರಾಠೀ, ಅಕ್ಟೋಬರ್ 8 ರಂದು ಬೆಂಗಳೂರಿನಲ್ಲಿ ನಡೆದ ಸಿಜೆಪಿ ಪ್ರತಿಭಟನೆಯಲ್ಲೂ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಸರ್ಕಾರದ ಕಟು ಟೀಕಾಕಾರರಾಗಿ ಗುರುತಿಸಿಕೊಂಡಿರುವ ರಾಠೀ, ಶನಿವಾರದ ದೆಹಲಿ ಪ್ರತಿಭಟನೆಯಲ್ಲಿಯೂ ಕಡ್ಡಾಯವಾಗಿ ಪಾಲ್ಗೊಳ್ಳುವುದಾಗಿ ಶುಕ್ರವಾರ ಸಂಜೆಯೇ ತಮ್ಮ 'ಎಕ್ಸ್' ಖಾತೆಯಲ್ಲಿ ವಿಡಿಯೋ ಮೂಲಕ ಅಧಿಕೃತ ಘೋಷಣೆ ಮಾಡಿದ್ದರು.
ಪ್ರತಿಭಟನೆಗೆ ಯಾವುದೇ ಕಾರಣಕ್ಕೂ ಅನುಮತಿ ನಿರಾಕರಿಸಿದ್ದ ದೆಹಲಿ ಪೊಲೀಸರು, ಭದ್ರತಾ ದೃಷ್ಟಿಯಿಂದ ರಾಷ್ಟ್ರ ರಾಜಧಾನಿಯಾದ್ಯಂತ ಹದ್ದಿನ ಕಣ್ಣಿಟ್ಟಿದ್ದಾರೆ. ಜಂತರ್ ಮಂತರ್ ಪ್ರದೇಶದಲ್ಲಿ ಬಿಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ದೆಹಲಿಯಾದ್ಯಂತ ಪೊಲೀಸರು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (CAPF) 20,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರತಿಭಟನಾಕಾರರು ನಗರ ಪ್ರವೇಶಿಸದಂತೆ ತಡೆಯಲು ದೆಹಲಿಯ ಎಲ್ಲಾ ಗಡಿ ಭಾಗಗಳಲ್ಲಿ ತೀವ್ರ ತಪಾಸಣೆ ಕೈಗೊಳ್ಳಲಾಗಿದ್ದು, ಹೊರಗಿನಿಂದ ಬರುವ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಅನುಮತಿ ಇಲ್ಲದೇ ದೆಹಲಿಯಲ್ಲಿ ನಡೆಯಲಿರುವ ಈ ಬೃಹತ್ ಪ್ರತಿಭಟನೆಯನ್ನು ತಡೆಯಲು ಆಡಳಿತ ಯಂತ್ರವು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ರಾತ್ರೋರಾತ್ರಿ 400ಕ್ಕೂ ಅಧಿಕ ಜನರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆಯಲಾಗಿದೆ. ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ಹಲವು ರೈಲುಗಳನ್ನು ರದ್ದುಗೊಳಿಸಲಾಗಿದೆ ಮತ್ತು ದೆಹಲಿ ಮೆಟ್ರೋದ ಪ್ರಮುಖ ಡಜನ್‌ಗಟ್ಟಲೆ ನಿಲ್ದಾಣಗಳ ಪ್ರವೇಶ ಹಾಗೂ ನಿರ್ಗಮನ ದ್ವಾರಗಳನ್ನು ಮುಚ್ಚಲಾಗಿದೆ. ಪ್ರಯಾಣಿಕರು ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯಾಪಕ ಸಂಚಾರ ಮಾರ್ಪಾಡುಗಳನ್ನು ಮಾಡಲಾಗಿದ್ದರೂ, ನಗರದಲ್ಲಿ ಉದ್ವಿಗ್ನ ವಾತಾವರಣ ಮುಂದುವರೆದಿದೆ.
ಧ್ರುವ್ ರಾಠೀ ಅವರ ಬಂಧನಕ್ಕೆ 'ಕಾಕ್ರೋಚ್ ಜನತಾ ಪಾರ್ಟಿ' (CJP) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅವರನ್ನು ಕೂಡಲೇ ಬೇಷರತ್ತಾಗಿ ಬಿಡುಗಡೆ ಮಾಡುವಂತೆ ಆಗ್ರಹಿಸಿದೆ. ಕೇವಲ ರಾಠೀ ಮಾತ್ರವಲ್ಲದೆ, ಸಿಜೆಪಿ ಲೀಗಲ್ ಸೆಲ್ ಮುಖ್ಯಸ್ಥೆ ರತ್ನ ಸಿಂಗ್ ಸೇರಿದಂತೆ ಹಲವು ಪ್ರಮುಖ ನಾಯಕರು ತಮ್ಮ ಮನೆಗಳಲ್ಲೇ ಗೃಹಬಂಧನಕ್ಕೊಳಗಾಗಿದ್ದಾರೆ ಅಥವಾ ವಶಕ್ಕೆ ಪಡೆಯಲ್ಪಟ್ಟಿದ್ದಾರೆ. ಪೊಲೀಸರು ಯಾವುದೇ ಸ್ಪಷ್ಟ ಕಾರಣ ನೀಡದೆ ತಮ್ಮ ವಾಹನಗಳನ್ನು ಸುತ್ತುವರಿದು ನಿರ್ಬಂಧ ಹೇರಿದ್ದಾರೆ ಎಂದು ಸಿಜೆಪಿ ಮುಖಂಡರು ಆರೋಪಿಸಿದೆ.
ಸರ್ಕಾರದ ತಪ್ಪುಗಳನ್ನು ಪ್ರಶ್ನಿಸುವ ಧ್ವನಿಗಳನ್ನು ಹತ್ತಿಕ್ಕಲು ಇಂತಹ ಬಲವಂತದ ಬಂಧನಗಳು ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ಧಕ್ಕೆ ತರುತ್ತಿದೆ ಎಂದು ವಿಪಕ್ಷಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಕಿಡಿಕಾರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೋಟ್ಯಂತರ ಅನುಯಾಯಿಗಳನ್ನು ಹೊಂದಿರುವ ಇನ್ಫ್ಲುಯೆನ್ಸ್ರ್ಗಳ ಬಂಧನವು ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಸದ್ಯ ದೆಹಲಿ ಹಾಗೂ ಗುರುಗ್ರಾಮದಾದ್ಯಂತ ಪೊಲೀಸರ ಬಿಗಿ ಹಿಡಿತ ಮುಂದುವರೆದಿದ್ದು, ಮುಂದಿನ ರಾಜಕೀಯ ಬೆಳವಣಿಗೆಗಳು ಯಾವ ಸ್ವರೂಪ ಪಡೆದುಕೊಳ್ಳಲಿವೆ ಎಂಬ ಕುತೂಹಲ ಮೂಡಿದೆ, (ಏಜೆನ್ಸೀಸ್).