ದೆಹಲಿಯಲ್ಲಿ ಜುಲೈ 1 ರಿಂದ ಹೊಸ ಇವಿ ನೀತಿ ಜಾರಿ
- ದೆಹಲಿಯಲ್ಲಿ ಜುಲೈ 1 ರಿಂದ ಹೊಸ ಇವಿ ನೀತಿ ಜಾರಿ!
- ಪೆಟ್ರೋಲ್ ಬೈಕ್, ಸಿಎನ್‌ಜಿ ಆಟೋ ನೋಂದಣಿ ಬಂದ್
- ಮುಖ್ಯಮಂತ್ರಿ ರೇಖಾ ಗುಪ್ತಾ ನೇತೃತ್ವದಲ್ಲಿ ₹7,000 ಕೋಟಿಯ ಇವಿ ಪಾಲಿಸಿಗೆ ಅನುಮೋದನೆ!
ನವದೆಹಲಿ: ದೆಹಲಿ ಸಚಿವ ಸಂಪುಟವು ಸೋಮವಾರ (ಜೂ.29) ಹೊಸ ಎಲೆಕ್ಟ್ರಿಕ್ ವಾಹನ ನೀತಿ (Delhi New EV Policy) ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಇದರ ಅನ್ವಯ ಮುಂದಿನ ದಿನಗಳಲ್ಲಿ ಹೊಸ ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ ಕಮರ್ಷಿಯಲ್ ಗಾಡಿಗಳ ರಿಜಿಸ್ಟ್ರೇಷನ್ ಸಂಪೂರ್ಣವಾಗಿ ಬಂದ್ ಆಗಲಿದೆ.
ಲೆಫ್ಟಿನೆಂಟ್ ಗವರ್ನರ್ ಅವರ ಅನುಮೋದನೆ ಸಿಕ್ಕ ತಕ್ಷಣ, ಅಂದರೆ ಇದೇ ಜುಲೈ 1, 2026 ರಿಂದಲೇ ಈ ಹೊಸ ಇವಿ ಪಾಲಿಸಿ ಜಾರಿಗೆ ಬರಲಿದೆ ಎಂದು ಮುಖ್ಯಮಂತ್ರಿ ರೇಖಾ ಗುಪ್ತಾ ತಿಳಿಸಿದ್ದು, ಬರೋಬ್ಬರಿ 7,000 ಕೋಟಿ ಬಜೆಟ್‌ನಲ್ಲಿ ರೆಡಿಯಾಗಿರೋ ಈ ಪ್ಲಾನ್, 2030 ರ ಮಾರ್ಚ್ 31 ರವರೆಗೆ ಜಾರಿಯಲ್ಲಿರಲಿದೆ ಎಂದು ಹೇಳಿದ್ದಾರೆ.
ಹಂತ ಹಂತವಾಗಿ ಪೆಟ್ರೋಲ್, ಸಿಎನ್‌ಜಿಗೆ ಗುಡ್‌ಬೈ!
ಸರ್ಕಾರ ದಿಢೀರನೆ ಯಾವುದನ್ನೂ ಬಂದ್ ಮಾಡುತ್ತಿಲ್ಲ, ಬದಲಿಗೆ ಜನರಿಗೆ ತೊಂದರೆಯಾಗದಂತೆ ಹಂತ ಹಂತವಾಗಿ ಇವಿ ಲೋಕಕ್ಕೆ ಶಿಫ್ಟ್ ಮಾಡಲು ಟೈಮ್ ಲೈನ್ ಫಿಕ್ಸ್ ಮಾಡಿದೆ ಎಂದು ಸಿಎಂ ರೇಖಾ ತಿಳಿಸಿದ್ದಾರೆ.
ಜನವರಿ 1, 2027 ರಿಂದ ದೆಹಲಿಯಲ್ಲಿ ಕೇವಲ ಎಲೆಕ್ಟ್ರಿಕ್ ಆಟೋರಿಕ್ಷಾಗಳು ಮತ್ತು N1 ಕೆಟಗರಿಯ ಸರಕು ಸಾಗಣೆ ವಾಹನಗಳಿಗೆ ಮಾತ್ರ ಹೊಸದಾಗಿ ರಿಜಿಸ್ಟ್ರೇಷನ್ ಸಿಗಲಿದೆ. ಪೆಟ್ರೋಲ್/ಸಿಎನ್‌ಜಿ ಆಟೋಗಳಿಗೆ ನೋಂದಣಿ ದೊರೆಯುವುದಿಲ್ಲ ಎಂದು ನೂತನ ಇವಿ ನೀತಿ ಹೇಳುತ್ತಿದೆ.
ಏಪ್ರಿಲ್ 1, 2028 ನಂತರ ದೆಹಲಿಯಲ್ಲಿ ಕೇವಲ ಎಲೆಕ್ಟ್ರಿಕ್ ಟೂ-ವೀಲರ್‌ಗಳನ್ನು (ಬೈಕ್/ಸ್ಕೂಟರ್) ಮಾತ್ರ ರಿಜಿಸ್ಟರ್ ಮಾಡಬಹುದು. ಹೊಸ ಪೆಟ್ರೋಲ್ ಬೈಕ್‌ಗಳ ಮಾರಾಟ ಮತ್ತು ನೊಂದಣಿ ಸಂಪೂರ್ಣ ನಿಲ್ಲಲಿದೆ ಎಂದು ತಿಳಿಸಲಾಗಿದೆ. ವಾಹನಗಳಿಂದ ಹೊರಬರುವ ಹೊಗೆಯನ್ನು ಕಡಿಮೆ ಮಾಡಿ, ದೆಹಲಿಯ ಜನ ಉಸಿರಾಡಲು ಸ್ವಚ್ಛವಾದ ಗಾಳಿ ಸಿಗುವಂತೆ ಮಾಡುವುದೇ ಈ ನಿಯಮದ ಹಿಂದಿರುವ ಅಸಲಿ ಉದ್ದೇಶ ಎಂದು ಸರ್ಕಾರ ಹೇಳಿದೆ.
ಹೊಸ ಇವಿ ಗಾಡಿ ತಗೊಂಡ್ರೆ ಭರ್ಜರಿ ಸಬ್ಸಿಡಿ!
ಇಷ್ಟೆಲ್ಲಾ ರೂಲ್ಸ್ ತಂದಿರುವ ಸರ್ಕಾರ, ಇವಿ ಖರೀದಿಸುವವರಿಗೆ ಸಖತ್ ಆಫರ್‌ಗಳನ್ನೂ ಕೊಟ್ಟಿದೆ. ಸಾರಿಗೆ ಆಯುಕ್ತೆ ನಿಹಾರಿಕಾ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಹೊಸ ಎಲೆಕ್ಟ್ರಿಕ್ ಗಾಡಿ ತಗೊಳ್ಳುವವರಿಗೆ ಇಷ್ಟು ಆರ್ಥಿಕ ಪ್ರೋತ್ಸಾಹ ಧನ ಸಿಗಲಿದೆ.
ಎಲೆಕ್ಟ್ರಿಕ್ ಟೂ-ವೀಲರ್‌ಗಳಿಗೆ: 30,000 ವರೆಗೆ ಸಬ್ಸಿಡಿ ದೊರೆತರೆ, ಎಲೆಕ್ಟ್ರಿಕ್ ಆಟೋಗಳಿಗೆ: 50,000 ವರೆಗೆ ಸಬ್ಸಿಡಿ ನೀಡಲಾಗುತ್ತದೆ. ಅಂತೆಯೇ N1 ಎಲೆಕ್ಟ್ರಿಕ್ ಟ್ರಕ್‌ಗಳಿಗೆ ಬರೋಬ್ಬರಿ 1 ಲಕ್ಷದವರೆಗೆ ಸಬ್ಸಿಡಿ ದೊರೆಯಲಿದೆ ಎಂದು ಹೇಳಲಾಗುತ್ತಿದೆ.
ಅಷ್ಟೇ ಅಲ್ಲ, ನಿಮ್ಮ ಹಳೆಯ ಪೆಟ್ರೋಲ್ ಅಥವಾ ಡೀಸೆಲ್ ಗಾಡಿಯನ್ನು ಸ್ಕ್ರ್ಯಾಪ್ ಮಾಡಿ ಹೊಸ ಇವಿ ತಗೊಂಡ್ರೆ ಇನ್ನೂ ಎಕ್ಸ್‌ಟ್ರಾ ಬಂಪರ್ ಆಫರ್ ಸಿಗುತ್ತೆ. ಜೊತೆಗೆ ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕದಿಂದಲೂ ಫುಲ್ ವಿನಾಯಿತಿ ಸಿಗಲಿದೆ. ಆದರೆ ಹೈಬ್ರಿಡ್ ವಾಹನಗಳಿಗೆ ಈ ಪಾಲಿಸಿಯಲ್ಲಿ ಯಾವುದೇ ಸಬ್ಸಿಡಿ ಸಿಗಲ್ಲ. ಆದರೆ ಒಬ್ಬರೇ ಎಷ್ಟು ಗಾಡಿ ಬೇಕಿದ್ರೂ ತಗೋಬಹುದು, ಎಲ್ಲದಕ್ಕೂ ಸಬ್ಸಿಡಿ ಅಪ್ಲೈ ಆಗುತ್ತೆ ಎಂದು ಸದ್ಯಕ್ಕೆ ತಿಳಿಸಲಾಗಿದೆ.
ಚಾರ್ಜಿಂಗ್ ಟೆನ್ಷನ್ ಇಲ್ಲ, ಸ್ಕೂಲ್ ಬಸ್‌ಗಳೂ ಇವಿ!
ಗಾಡಿ ಏನೋ ತಗೋತೀವಿ, ಆದ್ರೆ ಚಾರ್ಜ್ ಎಲ್ಲಿ ಮಾಡೋದು? ಅನ್ನೋ ಇವಿ ಪ್ರಿಯರ ಪ್ರಶ್ನೆಗೂ ಸರ್ಕಾರ ಉತ್ತರ ರೆಡಿ ಮಾಡಿದೆ. ದೆಹಲಿಯಾದ್ಯಂತ ಬರೋಬ್ಬರಿ 23,000 ಹೊಸ ಇವಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ಇನ್ಸ್ಟಾಲ್ ಮಾಡಲು ಪ್ಲಾನ್ ಮಾಡಲಾಗಿದೆ ಎಂದು ವಿದ್ಯುತ್ ಸಚಿವ ಆಶಿಶ್ ಸೂದ್ ತಿಳಿಸಿದ್ದಾರೆ. ಇದರ ಜೊತೆಗೆ ಶಾಲಾ ಮಕ್ಕಳನ್ನು ಕರೆದೊಯ್ಯುವ ಬಸ್‌ಗಳನ್ನು ಸಹ ಕಂಪ್ಲೀಟ್ ಆಗಿ ಇವಿಗೆ ಬದಲಾಯಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸಾರಿಗೆ ಸಚಿವ ಡಾ. ಪಂಕಜ್ ಸಿಂಗ್ ಹಾಗೂ ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಮಾತನಾಡಿ, ಇದು ವೈಜ್ಞಾನಿಕ ಅಧ್ಯಯನ ನಡೆಸಿ ತಂದಿರುವ ಪಾಲಿಸಿ. ದೆಹಲಿಯ ಮಾಲಿನ್ಯ ಕಡಿಮೆ ಮಾಡಲು ಸಾರ್ವಜನಿಕರು ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ, (ಏಜನ್ಸೀಸ್).