ನವದೆಹಲಿ: ದೇಶದ ಭದ್ರತೆಗೆ ಸಂಬಂಧಿಸಿದಂತೆ ಮತ್ತೊಂದು ಆತಂಕಕಾರಿ ಹಾಗೂ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸೈನಿಕನೊಬ್ಬನ ಪತ್ನಿಯು ( Soldier Wife ) ಚೀನಾ ಗುಪ್ತಚರ ಸಂಸ್ಥೆಗಳಿಗೆ ದೇಶದ ಸೂಕ್ಷ್ಮ ಹಾಗೂ ರಹಸ್ಯ ಮಾಹಿತಿಗಳನ್ನು ಸೋರಿಕೆ ಮಾಡಿದ್ದಾರೆ ಎಂಬ ಗಂಭೀರ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಮಹಿಳೆ ತೆಲಂಗಾಣ ಮೂಲದವರಾಗಿದ್ದು, ಎಐ (AI) ಟೂಲ್ಸ್ಗಳನ್ನು ಬಳಸಿ ಚೀನಾಕ್ಕೆ ರಹಸ್ಯ ಮಾಹಿತಿಗಳನ್ನು ಸೋರಿಕೆ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಸಂಬಂಧ 'ಅಧಿಕೃತ ರಹಸ್ಯ ಕಾಯ್ದೆ' (Official Secrets Act) ಹಾಗೂ ಭಾರತೀಯ ದಂಡ ಸಂಹಿತೆಯ (IPC) ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಹಿಳೆಯು ತನ್ನ ಪತಿಯೊಂದಿಗೆ ಜಮ್ಮುವಿನಲ್ಲಿ ವಾಸಿಸುತ್ತಿದ್ದಾರೆ. 2023ರಲ್ಲಿ ವಿಶ್ವಸಂಸ್ಥೆಯಲ್ಲಿ (UN) ಐಟಿ ಇಂಟರ್ನ್ಶಿಪ್ ಪೂರ್ಣಗೊಳಿಸಿದ್ದ ಈ ಮಹಿಳೆ, ಪ್ರಸ್ತುತ ಸ್ವತಂತ್ರ ಸಂಶೋಧಕರಾಗಿ ಕೆಲಸ ಮಾಡುತ್ತಿದ್ದಾರೆ. ಜಮ್ಮುವಿನ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾದ ಬಳಿಕ, ಡಿಎಸ್ಪಿ ಶ್ರೇಣಿಯ ಅಧಿಕಾರಿಯೊಬ್ಬರು ಈ ಮಹಿಳೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆದರೂ ಸದ್ಯಕ್ಕೆ ಯಾವುದೇ ಬಂಧನ ನಡೆದಿಲ್ಲ ಎಂದು ಪೊಲೀಸರು ತಿಳಿಸಿದ್ದು, ಅವರ ಸಂಶೋಧನಾ ಚಟುವಟಿಕೆಗಳ ಸ್ವರೂಪ ಮತ್ತು ರಹಸ್ಯ ದಾಖಲೆಗಳ ಕೈ ಬದಲಾವಣೆಯ ಬಗ್ಗೆ ತನಿಖೆ ಮುಂದುವರೆದಿದೆ.
ಅಕ್ಟೋಬರ್ 14 ರಂದು ಪಠಾಣಕೋಟ್ಗೆ ತೆರಳಲು ಜಮ್ಮುವಿನ ತಾವಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದ ಈ ಮಹಿಳೆಯನ್ನು ಪೊಲೀಸರು ಹಾಗೂ ಕೇಂದ್ರ ಗುಪ್ತಚರ ಸಂಸ್ಥೆಯ ಅಧಿಕಾರಿಗಳು ಜಂಟಿಯಾಗಿ ವಶಕ್ಕೆ ಪಡೆದಿದ್ದರು. ಬಳಿಕ ಆಕೆಯನ್ನು ಸಮೀಪದ ಸೇನಾ ನೆಲೆಗೆ ಕರೆದೊಯ್ದು ಸುದೀರ್ಘ ವಿಚಾರಣೆ ನಡೆಸಲಾಗಿದೆ. ತನಿಖೆಯ ಭಾಗವಾಗಿ ಆಕೆಯ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ವೈಜ್ಞಾನಿಕ ಪರೀಕ್ಷೆಗಾಗಿ ಫೋರೆನ್ಸಿಕ್ ಲ್ಯಾಬ್ಗೆ ಕಳುಹಿಸಲಾಗಿದೆ. ಸದ್ಯ ಮಹಿಳೆಯು ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಪ್ರಾಥಮಿಕ ತನಿಖೆಯ ಹಂತದಲ್ಲಿ ಮಹಿಳೆಯು ಯಾವುದೇ ರಹಸ್ಯ ಅಥವಾ ಗೌಪ್ಯ ಮಾಹಿತಿಯನ್ನು ಅಧಿಕೃತವಾಗಿ ರವಾನಿಸಿದ್ದಾರೆ ಎಂಬುದು ಇನ್ನೂ ಸಂಪೂರ್ಣವಾಗಿ ದೃಢಪಟ್ಟಿಲ್ಲ. ಆದಾಗ್ಯೂ, ವಿದೇಶಿ ಸಂಸ್ಥೆಗಳು ಅಥವಾ ವ್ಯಕ್ತಿಗಳೊಂದಿಗೆ ಆಕೆಗೆ ಇರಬಹುದಾದ ನಂಟು ಹಾಗೂ ಸಂಪರ್ಕಗಳ ಕುರಿತು ಪೊಲೀಸರು ತಾಂತ್ರಿಕ ಸಾಕ್ಷ್ಯಗಳನ್ನು ಕಲೆಹಾಕುತ್ತಿದ್ದಾರೆ. ಆಕೆಯ ಹಿನ್ನೆಲೆ ಮತ್ತು ಚಲನವಲನಗಳ ಮೇಲೆ ತನಿಖಾ ಸಂಸ್ಥೆಗಳು ತೀವ್ರ ಕಣ್ಣಿಟ್ಟಿವೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯಕ್ಕೆ ಹೆಚ್ಚಿನ ವಿವರಗಳು ಲಭ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದು, ತನಿಖೆಯು ಅತ್ಯಂತ ಸೂಕ್ಷ್ಮ ಹಂತದಲ್ಲಿದೆ. ದೇಶದ ರಾಷ್ಟ್ರೀಯ ಭದ್ರತೆ ಮತ್ತು ಗಡಿ ಸುರಕ್ಷತೆಗೆ ಸಂಬಂಧಿಸಿದ ವಿಷಯವಾಗಿರುವುದರಿಂದ, ಗುಪ್ತಚರ ಇಲಾಖೆ ಹಾಗೂ ಸ್ಥಳೀಯ ಪೊಲೀಸರು ಜಂಟಿಯಾಗಿ ಸತ್ಯಾಸತ್ಯತೆಯನ್ನು ಹೊರಹಾಕಲು ಎಲ್ಲಾ ಆಯಾಮಗಳಲ್ಲೂ ತನಿಖೆಯನ್ನು ತೀವ್ರಗೊಳಿಸಿದ್ದಾರೆ, (ಏಜೆನ್ಸೀಸ್).