ಅತಿಥಿ ಶಿಕ್ಷಕಿ ಸುಲೇಖಾ ದಲಾಲ್ ಸಸ್ಪೆಂಡ್​​ 
ದೇಶ

ಜಂತರ್​ ಮಂತರ್​ನಲ್ಲಿ CJP ಪ್ರತಿಭಟನೆ: ನಿಯಮ ಉಲ್ಲಂಘನೆ ಆರೋಪ; ಅತಿಥಿ ಶಿಕ್ಷಕಿ ಸುಲೇಖಾ ದಲಾಲ್ ಸಸ್ಪೆಂಡ್​! Teacher Suspended

ನವದೆಹಲಿ: ಇತ್ತೀಚೆಗೆ ದೇಶದಲ್ಲಿ ನಡೆಯುತ್ತಿರುವ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಗಳ ವಿರುದ್ಧ ಕಾಕ್ರೋಚ್​ ಜನತಾ ಪಾರ್ಟಿ ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್​ನಲ್ಲಿ ನಡೆಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅತಿಥಿ ಶಿಕ್ಷಕಿಯೊಬ್ಬಳನ್ನು ಅಮಾನತು (Teacher Suspended) ಮಾಡಿರುವ ಘಟನೆ ವರದಿಯಾಗಿದೆ.
ಜೂನ್ 6 ರಂದು ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅತಿಥಿ ಶಿಕ್ಷಕಿ ಸುಲೇಖಾ ದಲಾಲ್ ಅವರನ್ನು ಹರಿಯಾಣಾ ಶಿಕ್ಷಣ ಇಲಾಖೆ ಕೆಲಸದಿಂದ ಅಮಾನತ್​ ಆದೇಶ ಜಾರಿಗೊಳಿಸಿದೆ.

ಕಾರಣವೇ ಕೊಡದೆ ಸಸ್ಪೆಂಡ್ ಮಾಡಿದ ಶಿಕ್ಷಣ ಇಲಾಖೆ!

ರೋಹ್ಟಕ್‌ನ ರೈಂಕ್‌ಪುರದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಸುಲೇಖಾ ದಲಾಲ್ ಅವರನ್ನು ಜೂನ್ 8 ರಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಜಿಲ್ಲಾ ಪ್ರಾಥಮಿಕ ಶಿಕ್ಷಣ ಅಧಿಕಾರಿ (DEEO) ಜೂನ್ 10 ರಂದು ಆದೇಶ ಹೊರಡಿಸಿದ್ದಾರೆ. ಆದರೆ, ಆರ್ಡರ್‌ ಕಾಪಿಯಲ್ಲಿ ಸುಲೇಖಾ ಅವರನ್ನು ಕೆಲಸದಿಂದ ತೆಗೆಯಲು ಯಾವುದೇ ಕಾರಣವನ್ನು ಉಲ್ಲೇಖಿಸಿಲ್ಲ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಜಿಲ್ಲಾ ಶಿಕ್ಷಣ ಅಧಿಕಾರಿ (DEO) ಬಿಜೇಂದರ್ ಹೂಡಾರನ್ನು ಕೇಳಿದರೆ, ಸುಲೇಖಾ ಅವರು ಆಫೀಸ್‌ನಿಂದ ಯಾವುದೇ ಪೂರ್ವಾನುಮತಿ ಪಡೆಯದೇ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಇದು ಸರ್ಕಾರಿ ನೌಕರರ ನಡವಳಿಕೆ ನಿಯಮಗಳ ಉಲ್ಲಂಘನೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಮಗನ ನೋವು ಕಂಡು ಬೀದಿಗೆ ಬಂದೆ

ಸುಲೇಖಾ ದಲಾಲ್ ಅವರ ಮಗ ಹಗಲಿರುಳು ಕಷ್ಟಪಟ್ಟು ಓದಿ ದೆಹಲಿ ಹೆಡ್ ಕಾನ್‌ಸ್ಟೇಬಲ್ ಪರೀಕ್ಷೆ ಬರೆದಿದ್ದ. ಆದರೆ, ಪೇಪರ್ ಲೀಕ್ ನಿಂದಾಗಿ ಅಂತಿಮ ಪಟ್ಟಿಯಲ್ಲಿ ಆತನಿಗೆ ಕೆಲಸ ಸಿಕ್ಕಿರಲಿಲ್ಲ.
ಮಾಧ್ಯಮಗಳಲ್ಲಿ ನೀಟ್ (NEET) ಹಗರಣದ ಬಗ್ಗೆ ಮಾತ್ರ ದೊಡ್ಡ ಚರ್ಚೆಯಾಗುತ್ತಿದೆ, ಆದರೆ ನಮ್ಮ ಮಕ್ಕಳ ಬದುಕನ್ನು ಹಾಳು ಮಾಡುತ್ತಿರುವ ಹೆಡ್ ಕಾನ್‌ಸ್ಟೇಬಲ್ ಪರೀಕ್ಷೆಯ ಸೋರಿಕೆಯ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ನನ್ನ ಕುಟುಂಬಕ್ಕೆ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲ. ಪರೀಕ್ಷಾ ಸೋರಿಕೆಯ ದುಃಸ್ಥಿತಿಯ ವಿರುದ್ಧ ಧ್ವನಿ ಎತ್ತಲು ನಾನು ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದೆ. ಜೂನ್ 6 ರಂದು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಘೋಷಣೆಯಾದಾಗ ಒಬ್ಬ ತಾಯಿಯಾಗಿ ನಾನು ಅಲ್ಲಿಗೆ ಹೋಗಲು ನಿರ್ಧರಿಸಿದೆ ಎಂದು ಸುಲೇಖಾ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮುಗೆ ಮನವಿ!

ಸುಲೇಖಾ ದಲಾಲ್​ ಇನ್‌ಸ್ಟಾಗ್ರಾಮ್‌ನಲ್ಲಿ 2 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿದ್ದಾರೆ. ಪ್ರತಿಭಟನೆಗೆ ಹೋಗುವ ಮುನ್ನ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಭಾವುಕ ವಿಡಿಯೋ ಪೋಸ್ಟ್ ಮಾಡಿದ್ದರು.
ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಟ್ಯಾಗ್ ಮಾಡಿ, ತಡರಾತ್ರಿಯವರೆಗೆ ಕಷ್ಟಪಟ್ಟು ಓದುವ ಮಕ್ಕಳ ನೋವನ್ನು ಅರ್ಥಮಾಡಿಕೊಳ್ಳಿ ಎಂದು ಕೈಮುಗಿದು ಬೇಡಿಕೊಂಡಿದ್ದರು.

ಅಮಾನತ್​ಗೆ ನಾನು ಹೆದರಲ್ಲ!

ಅಮಾನತು ಆದೇಶದ ಬಳಿಕ ಮಾತನಾಡಿದ ಸುಲೇಖಾ, ಅವರು ನನಗೆ ಯಾವುದೇ ಕಾರಣ ನೀಡಿಲ್ಲ. ಆದರೆ ನಾನು ಪೇಪರ್ ಲೀಕ್ ವಿರುದ್ಧ ಧ್ವನಿ ಎತ್ತಿದ್ದಕ್ಕೇ ನನ್ನನ್ನು ಸಸ್ಪೆಂಡ್ ಮಾಡಿದ್ದಾರೆ ಅನ್ನೋದು ಜಗತ್ತಿಗೆ ಗೊತ್ತು. ನಾನು ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸಿಲ್ಲ ಅಥವಾ ವಿರೋಧಿಸಿಲ್ಲ.
ಪೇಪರ್ ಲೀಕ್ ದಂಧೆಯಿಂದಾಗಿ ಕಷ್ಟಪಟ್ಟು ಸೋಲುತ್ತಿರುವ ದೇಶದ ಕೋಟ್ಯಂತರ ಮಕ್ಕಳ ಪರವಾಗಿ ನಾನು ಮಾತನಾಡಿದ್ದೇನೆ. ಇದು ಸರ್ಕಾರ ನನಗೆ ಕೊಟ್ಟ ಉಡುಗೊರೆ, ಇದನ್ನು ನಾನು ಸ್ವೀಕರಿಸುತ್ತೇನೆ. ಆದರೆ ಇಂತಹ ಬೆದರಿಕೆಗಳಿಗೆ ನಾನು ಹೆದರಿ ಹಿಂದೆ ಸರಿಯಲ್ಲ ಎಂದು ಹೇಳಿದ್ದಾರೆ, (ಏಜನ್ಸೀಸ್).