ಅಭಿಜೀತ್ ದಿಪ್ಕೆ ಅವರು ಮಧ್ಯಪ್ರದೇಶ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹಂಚಿಕೊಂಡಿರುವ ಪತ್ರ
ಭೋಪಾಲ್: ನೀಟ್ ಪರೀಕ್ಷಾ ಅಕ್ರಮದ ವಿರುದ್ಧ ಪ್ರತಿಭಟನೆ ಮಾಡುವ ಮೂಲಕ ದೇಶದ ಜನರ ಸೆಳೆದ ಪಾರ್ಟಿ ಎಂದರೆ ಅದು ಕಾಕ್ರೋಚ್ ಜನತಾ ಪಾರ್ಟಿ (CJP) ಯಾಗಿದೆ.
ಈದೀಗ, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗಿರುವ, 'ಕಾಕ್ರೋಚ್ ಜನತಾ ಪಾರ್ಟಿ' (CJP) ಸಂಸ್ಥಾಪಕ ಅಭಿಜೀತ್ ದಿಪ್ಕೆ (Abhijeet Dipke) ಮಧ್ಯಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೆ 'ರಾಜೀನಾಮೆ' ನೀಡುವುದಾಗಿ ಘೋಷಿಸಿ ಹಂಚಿಕೊಂಡಿರುವ ಪೋಸ್ಟ್ವೊಂದು ಸಕ್ಕತ್ ವೈರಲ್ ಆಗುತ್ತಿದೆ.
ಅರೇ... ಅಭಿಜೀತ್ ದಿಪ್ಕೆ ಯಾವಾಗ ಮಧ್ಯಪ್ರದೇಶದ ಸಿಎಂ ಆದ್ರು ಅಂತ ಹುಬ್ಬೇರಿಸಬೇಡಿ. ಇದು ಅಸಲಿ ರಾಜೀನಾಮೆಯಲ್ಲ, ಬದಲಿಗೆ ಮಧ್ಯಪ್ರದೇಶ ಸರ್ಕಾರದ ವೈಫಲ್ಯಗಳ ವಿರುದ್ಧ ಅವರು ವ್ಯಂತ್ಯಾತ್ಮಕವಾಗಿ ಆಕ್ರೋಶ ಹೊರಹಾಕಿದ್ದಾರೆ. ಹಾಗಾದರೆ, ಅಭಿಜೀತ್ ಈ ರೀತಿ ಮಾಡಲು ಕಾರಣವೇನೆಂದು ತಿಳಿಯಲು ಈ ಸುದ್ದಿಯನ್ನು ಸಂಪೂರ್ಣವಾಗಿ ಓದಿರಿ.
ನಕಲಿ ರಾಜೀನಾಮೆ ನಾಟಕ!
ಬಾಲಾಘಾಟ್ ಭೇಟಿಯ ವೇಳೆ ತೀವ್ರ ವಿರೋಧ ಹಾಗೂ ಟೀಕೆಗಳನ್ನು ಎದುರಿಸಿದ ಬೆನ್ನಲ್ಲೇ, ಮರುದಿನ ಅಭಿಜೀತ್ ದಿಪ್ಕೆ ಟ್ವಿಟರ್ (X) ನಲ್ಲಿ ಒಂದು ಪತ್ರವನ್ನು ಶೇರ್ ಮಾಡಿಕೊಂಡಿದ್ದಾರೆ. ನೋಡಲು ಸ್ವತಃ ಸಿಎಂ ಕಚೇರಿಯಿಂದ ಬಿಡುಗಡೆಯಾದ ಅಧಿಕೃತ ರಾಜೀನಾಮೆ ಪತ್ರದಂತೆಯೇ ಕಾಣುವಂತೆ ಇದನ್ನು ಡಿಸೈನ್ ಮಾಡಿದ್ದಾರೆ.
ತಕ್ಷಣದಿಂದಲೇ ಜಾರಿಗೆ ಬರುವಂತೆ ನಾನು ಮಧ್ಯಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಮಧ್ಯಪ್ರದೇಶದ ಜನರಿಗೆ ಸೇವೆ ಸಲ್ಲಿಸುವ ಅಪರೂಪದ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಕ್ಕಾಗಿ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಜಿ ಅವರಿಗೆ ಧನ್ಯವಾದಗಳು. ಆದರೆ ಈ ಜವಾಬ್ದಾರಿಯನ್ನು ನಿರ್ವಹಿಸುವುದರಲ್ಲಿ ನಾನು ಸ್ಪಷ್ಟವಾಗಿ ವಿಫಲನಾಗಿದ್ದೇನೆ ಎಂದು ದಿಪ್ಕೆ ಬರೆದುಕೊಂಡು ಟ್ರೋಲ್ ಮಾಡಿದ್ದಾರೆ.
ಇತ್ತೀಚೆಗೆ ಸಾಗರ್‌ನಲ್ಲಿ ಸಂಭವಿಸಿದ ಭೀಕರ ವಿಷಮದ್ಯ ದುರಂತ ಮತ್ತು ಬಾಲಾಘಾಟ್‌ನಲ್ಲಿ ಬುಡಕಟ್ಟು ಸಮುದಾಯದ ಮಕ್ಕಳು ಸಾವನ್ನಪ್ಪಿದ ದುರ್ಘಟನೆಯನ್ನು ಈ ಪತ್ರದಲ್ಲಿ ತೀವ್ರವಾಗಿ ವ್ಯಂಗ್ಯವಾಡಲಾಗಿದೆ. ಇವರ ಈ ವ್ಯಂಗ್ಯದ ಪೋಸ್ಟಿಗೆ ಕೌಂಟರ್ ಕೊಟ್ಟಿರುವ CJP ವಕ್ತಾರ ಅಶುತೋಷ್ ರಂಕಾ, ನಮ್ಮ ಪಕ್ಷದ ಸ್ಥಾಪಕರು ಜವಾಬ್ದಾರಿಯಿಂದ ಓಡಿಹೋಗುತ್ತಿದ್ದಾರೆ ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
ಬಾಲಾಘಾಟ್‌ನಲ್ಲಿ ಅಸಲಿಗೆ ಆಗಿದ್ದೇನು?
ಅಭಿಜೀತ್ ದಿಪ್ಕೆ ಈ ರೀತಿ ವ್ಯಂಗ್ಯವಾಡಲು ಪ್ರಮುಖ ಕಾರಣ ಬಾಲಾಘಾಟ್‌ನಲ್ಲಿ ಸಿಕ್ಕಾಪಟ್ಟೆ ವಿರೋಧ ಎದುರಾಗಿರುವುದು. ಸಾಂಕ್ರಾಮಿಕ ರೋಗಗಳಿಂದ ಸಾವನ್ನಪ್ಪಿದ್ದ ಬುಡಕಟ್ಟು ಮಕ್ಕಳ ಕುಟುಂಬಗಳಿಗೆ ಸಾಂತ್ವನ ಹೇಳಲು ಮತ್ತು ಅಲ್ಲಿನ ಆಸ್ಪತ್ರೆಗಳ ಅಸ್ತವ್ಯಸ್ತತೆಯನ್ನು ಕಣ್ಣಾರೆ ನೋಡಲು ಶನಿವಾರದಂದು ದಿಪ್ಕೆ ಅಡೋರಿ, ಕೊರ್ಕಾ ಹಾಗೂ ಬೊಂಡಾರಿ ಗ್ರಾಮಗಳಿಗೆ ಭೇಟಿ ನೀಡಿದ್ದರು.
ಆದರೆ ಈ ಭೇಟಿ ಅಂದು ದೊಡ್ಡ ರಣರಂಗವಾಗಿ ಮಾರ್ಪಟ್ಟಿತ್ತು. ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್ ತರಹ ಕಾಣುತ್ತಿದ್ದ ಜನರ ಗುಂಪು ಅಭಿಜಿತ್ರನ್ನು ಸುತ್ತುವರೆದು ತರಾಟೆಗೆ ತೆಗೆದುಕೊಂಡಿತು. ಅದರಲ್ಲೂ ವೀಡಿಯೊವೊಂದರಲ್ಲಿ ಮಹಿಳೆಯೊಬ್ಬರು ಮೈಕ್ ಹಿಡಿದುಕೊಂಡು ಕಾರಿನ ಬಳಿ ಬಂದು, ಮಕ್ಕಳ ಸಾವಿನ ವಿಚಾರದಲ್ಲಿ ರಾಜಕೀಯ ಮಾಡಲು ಬಂದಿದ್ದೀರಾ? ಇಷ್ಟು ತಡವಾಗಿ ಈ ಪ್ರದೇಶಕ್ಕೆ ಬರಲು ಕಾರಣವೇನು? ಎಂದು ನೇರವಾಗಿ ಪ್ರಶ್ನಿಸಿದ್ದಾರೆ.
ಪರಿಸ್ಥಿತಿ ಕೈಮೀರಿ ಹೋಗುವುದನ್ನು ಕಂಡು ದಿಪ್ಕೆ ಕೈಮುಗಿದು ಕ್ಷಮೆ ಯಾಚಿಸಿ, ಕೊನೆಗೆ ಸಿಜೆಪಿ ಕಾರ್ಯಕರ್ತರ ಸಹಾಯದಿಂದ ಬೇರೆ ಕಾರಿನಲ್ಲಿ ಸ್ಥಳದಿಂದ ತೆರಳಬೇಕಾಯಿತು. ಕಾರು ಹೊರಡುತ್ತಿದ್ದಂತೆ ಆ ಮಹಿಳೆ "ಅವರು ಓಡಿಹೋದರು" ಎಂದು ಕೂಗಾಡಿರುವ ವಿಡಿಯೋ ವೈರಲ್ ಆಗಿದೆ. ಸ್ಥಳೀಯ ಪತ್ರಕರ್ತರು ಕೂಡ, ಹೊರಗಿನಿಂದ ಬಂದ ಈ ಇನ್ಫ್ಲುಯೆನ್ಸರ್ಸ್‌ಗಳು ದಿಪ್ಕೆ ಕಾರ್ಯಕ್ರಮಕ್ಕೆ ಬೇಕಂತಲೇ ಅಡ್ಡಿಪಡಿಸಲು ಬಂದಿದ್ರಾ? ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಸಾವಿನ ವಿಚಾರಕ್ಕೆ ಹೈಕೋರ್ಟ್ ಎಂಟ್ರಿ!
ಇದೆಲ್ಲಾ ಒಂದು ಕಡೆಯಾದರೆ, ಬಾಲಾಘಾಟ್ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗಗಳಿಗೆ 30ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿರುವ ಗಂಭೀರ ವಿಷಯ ಈಗ ಕಾನೂನಿನ ಅಂಗಳ ತಲುಪಿದೆ. ಮಧ್ಯಪ್ರದೇಶ ಹೈಕೋರ್ಟ್ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಕೇವಲ 50 ಹಾಸಿಗೆಗಳ ಸಾಮರ್ಥ್ಯವಿರುವ ಆಸ್ಪತ್ರೆಯಲ್ಲಿ ಸುಮಾರು 400ಕ್ಕೂ ಅಧಿಕ ಮಕ್ಕಳಿಗೆ ನೆಲದ ಮೇಲೆ ಮಲಗಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅರ್ಜಿಯಲ್ಲಿ ಆತಂಕಕಾರಿ ಸಂಗತಿ ಹೊರಹಾಕಲಾಗಿದೆ. ಆಸ್ಪತ್ರೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ತೀವ್ರ ಅಶುಚಿತ್ವ ತಾಂಡವವಾಡುತ್ತಿದ್ದು, ಇದೆ ಸೋಂಕುಗಳಿಗೆ ಮೂಲ ಕಾರಣ ಎಂದು ಅರ್ಜಿದಾರರು ವರದಿ ಸಲ್ಲಿಸಿದ್ದಾರೆ, (ಏಜನ್ಸೀಸ್).