ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ಗುವಾಹಟಿಯಿಂದ ಬೆಂಗಳೂರಿಗೆ ಹಾರಲು ಯತ್ನ
- ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ಗುವಾಹಟಿಯಿಂದ ಬೆಂಗಳೂರಿಗೆ ಹಾರಲು ಯತ್ನ
- ತ್ರಿಷಾ ಅಲಿಯಾಸ್ ಪೂಜಾ ದಾಸ್ ಎಂಬ ಯುವತಿ ಬಂಧನ
- ದೇಶದಲ್ಲಿ ಹೆಚ್ಚುತ್ತಿರುವ ನಕಲಿ ಆಧಾರ ದಂಧೆ
ಗುವಾಹಟಿ: ನಕಲಿ ಆಧಾರ್ ಕಾರ್ಡ್ (Fake Aadhaar Card) ಬಳಸಿ ವಿಮಾನಯಾನಕ್ಕೆ ಮುಂದಾಗಿದ್ದ ಬಾಂಗ್ಲಾದೇಶದ ಯುವತಿಯೊಬ್ಬಳನ್ನು ಲೋಕಪ್ರಿಯಾ ಗೋಪಿನಾಥ್ ಬೊರ್ಡೊಲೊಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಗುವಾಹಟಿ) ದಲ್ಲಿ ಬಂಧಿಸಿರುವ ಬಗ್ಗೆ ವರದಿಯಾಗಿದೆ.
ಬಂಧಿತ ಯುವತಿಯನ್ನು ತ್ರಿಷಾ ಎಂದು ಗುರುತಿಸಲಾಗಿದ್ದು, ಇಕೆ ಢಾಕಾದ ನಾರಾಯಣಗಂಜ್ ನಿವಾಸಿ ತೋಹಿದ್ ಎಂಬಾತನ ಮಗಳೆಂದು ತಿಳಿದು ಬಂದಿದೆ. 23 ವರ್ಷದ ಇಕೆ ನಕಲಿ ಆಧಾರ್ ಕಾರ್ಡ್ ಮೂಲಕ ಬೆಂಗಳೂರಿಗೆ ತೆರಳಲು ಮುಂದಾಗಿದ್ದಳು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತ್ರಿಷಾ ಅಲಿಯಾಸ್ ಪೂಜಾ!
ಆದರೆ ಜಫ್ತಿ ಮಾಡಿರುವ ಆಧಾರ್ ಕಾರ್ಡ್ನಲ್ಲಿ ಇಕೆಯ ಹೆಸರನ್ನು ಪೂಜಾ ದಾಸ್ ಎಂದು, ತಂದೆಯ ಹೆಸರನ್ನು ಸುಮನ್ ದಾಸ್ ಎಂದು ತಿರುಚಲಾಗಿದ್ದು, ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ನಿವಾಸಿ ಎಂದು ಸುಳ್ಳು ವಿಳಾಸವನ್ನು ಸೃಷ್ಟಿಸಿದ್ದಾರೆ.
ವಿಚಾರಣೆ ಸಮಯದಲ್ಲಿ ತಾನು ತ್ರಿಪುರಾ ಮೂಲಕ ಭಾರತವನ್ನು ಪ್ರವೇಶಿಸಿರುವುದಾಗಿ ಹೇಳಿಕೆ ನೀಡಿದ್ದು, ಇಕೆಯನ್ನು ಗಡಿ ಭದ್ರತಾ ಸಿಬ್ಬಂದಿಗಳ ವಶಕ್ಕೆ ನೀಡಲಾಗಿದ್ದು, ಅವರು ತನಿಖೆ ಮುಂದುವರೆಸಿದ್ದಾರೆ.
ನಕಲಿ ಆಧಾರ್ ದಂಧೆ!
ಈ ತ್ರಿಷಾ ಅಲಿಯಾಸ್ ಪೂಜಾಳ ಬಂಧನವಾದ ತರುವಾಯ ಬಾಂಗ್ಲಾದೇಶದಿಂದ ಭಾರತಕ್ಕೆ ಅಕ್ರಮವಾಗಿ ವಲಸೆ ಬರುವ ಜನರಿಗೆ ನಕಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್ ಮೊದಲಾದ ಅಗತ್ಯ ದಾಖಲೆಗಳನ್ನು ತಯಾರಿಸಿ ಕೊಡುವ ದಂಧೆ ನಡೆಯುತ್ತಿರುವುದು ಸ್ಪಷ್ಟವಾಗಿದೆ.
ಅಕ್ರಮ ಬಾಂಗ್ಲಾ ವಲಸಿಗರನ್ನು ತಡೆಯಲು ಪಶ್ಚಿಮ ಬಂಗಾಳ ಸರ್ಕಾರ ಈಗಾಗಲೇ ಗಡಿಗೆ ಬೇಲಿ ಹಾಕುವ ಕೆಲಸಕ್ಕೆ ಚಾನಲೆ ನೀಡಿದೆ. ಅದೇ ರೀತಿ ವಿದೇಶಗಳೊಂದಿಗೆ ಗಡಿ ಹಂಚಿಕೊಂಡಿರುವ ರಾಜ್ಯಗಳು ವಲಸಿಗರ ಮೇಲೆ ಸೂಕ್ಷ್ಮ ದೃಷ್ಟಿ ಇಟ್ಟು, ನಕಲಿ ದಾಖಲಾತಿಗಳ ತಯಾರಿಕೆಗೆ ಬ್ರೇಕ್ ಹಾಕದೇ ಹೋದರೆ ಮುಂದೊಂದು ದಿನ ಆಪತ್ತನ್ನು ಎದುರಿಸ ಬೇಕಾಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ, (ಏಜನ್ಸೀಸ್).