ದೇಶ

ಏಷ್ಯಾ ಪವರ್ ಇಂಡೆಕ್ಸ್ 2026 ವರದಿ: ಏಷ್ಯಾದ 3ನೇ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿ ಭಾರತದ ಸ್ಥಾನ ಮತ್ತಷ್ಟು ಭದ್ರ! | powerful nation

ಆರ್ಥಿಕತೆ ಏರಿಳಿತಗಳ ನಡುವೆಯೂ ಭಾರತವು 40.5 ಅಂಕಗಳೊಂದಿಗೆ ಏಷ್ಯಾದ ಮೂರನೇ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿ ತನ್ನ ನೆಲೆಯನ್ನು ಭದ್ರ ಪಡಿಸಿಕೊಂಡಿದೆ ಎಂದು ಆಸ್ಟ್ರೇಲಿಯಾ ಮೂಲದ ಲೋವಿ ಇನ್‌ಸ್ಟಿಟ್ಯೂಟ್‌ನ 'ಏಷ್ಯಾ ಪವರ್ ಇಂಡೆಕ್ಸ್' ವರದಿ ಮಾಡಿದೆ.

ನವದೆಹಲಿ: ಆರ್ಥಿಕತೆ ಏರಿಳಿತಗಳ ನಡುವೆಯೂ ಭಾರತವು 40.5 ಅಂಕಗಳೊಂದಿಗೆ ಏಷ್ಯಾದ ಮೂರನೇ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿ ತನ್ನ ನೆಲೆಯನ್ನು ಭದ್ರ ಪಡಿಸಿಕೊಂಡಿದೆ ಎಂದು ಆಸ್ಟ್ರೇಲಿಯಾ ಮೂಲದ ಲೋವಿ ಇನ್‌ಸ್ಟಿಟ್ಯೂಟ್‌ನ 'ಏಷ್ಯಾ ಪವರ್ ಇಂಡೆಕ್ಸ್' ವರದಿ ಮಾಡಿದೆ.

2026ರ ಏಷ್ಯಾ ಪವರ್ ಇಂಡೆಕ್ಸ್ ವರದಿ ಪ್ರಕಾರ, ರಾಜತಾಂತ್ರಿಕ ಸ್ಥಾನಮಾನ, ರಕ್ಷಣಾ ವಲಯದ ಸಹಭಾಗಿತ್ವ, ಸಾಂಸ್ಕೃತಿಕ ಪ್ರಭಾವ ಮತ್ತು ಭವಿಷ್ಯದ ಸಂಪನ್ಮೂಲಗಳ ವಿಷಯದಲ್ಲಿನ ಸುಧಾರಣೆಗಳಿಂದಾಗಿ, ಈ ವರ್ಷ ಏಷ್ಯಾದಲ್ಲಿ ಭಾರತದ ಪ್ರಭಾವವು ಇನ್ನಷ್ಟು ಹೆಚ್ಚಾಗಿದೆ. ಅಮೆರಿಕ ಮತ್ತು ಚೀನಾ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನಗಳನ್ನು ಕಾಯ್ದುಕೊಂಡಿವೆ ಎಂದು ತಿಳಿಸಿದೆ.

ಭಾರತದ ಆರ್ಥಿಕ ಸಾಮರ್ಥ್ಯದ ಅಂಕವು 26.4ಕ್ಕೆ ಕುಸಿದರೂ, ಈ ವಿಭಾಗದಲ್ಲಿ ಅದು ಮೂರನೇ ಸ್ಥಾನವನ್ನು ಕಾಯ್ದುಕೊಂಡಿದೆ. ರೂಪಾಯಿಯ ಮೌಲ್ಯ ಕುಸಿದಿರುವುದು ಮತ್ತು ಆರ್ಥಿಕತೆಗಳನ್ನು ಅಳೆಯುವ ಅಂತರರಾಷ್ಟ್ರೀಯ ಹಣಕಾಸು ನಿಧಿಯ (IMF) ವಿಧಾನದಲ್ಲಿನ ಬದಲಾವಣೆಯು ಈ ಕುಸಿತಕ್ಕೆ ಭಾಗಶಃ ಕಾರಣವೆಂದು ವರದಿ ಹೇಳಿದೆ.

ಇದಲ್ಲದೆ, ಹೊರಹೋಗುವ ಹೂಡಿಕೆಯಲ್ಲಿಸುಮಾರು 20 ಶತಕೋಟಿ ಅಮೆರಿಕನ್ ಡಾಲರ್‌ಗಳಷ್ಟು ಇಳಿಕೆಯಾಗಿರುವುದು ಕೂಡ ಭಾರತದ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಿದೆ. ಆರ್ಥಿಕ ಹಿನ್ನಡೆಯ ಹೊರತಾಗಿಯೂ, ಭಾರತದ ಭವಿಷ್ಯದ ಸಂಪನ್ಮೂಲಗಳ ಅಂಕವು 56.2 ಅಂಕಗಳಿಗೆ ಏರಿಕೆಯಾಗಿದೆ ಎಂದು ತಿಳಿಸಿದೆ.

ಇದು ಸುಧಾರಿತ ಆರ್ಥಿಕ ಮುನ್ನೋಟವನ್ನು ಹಾಗೂ ದೇಶದ ಮುಂದಿರುವ ಅವಕಾಶಗಳನ್ನು ಪ್ರತಿಬಿಂಬಿಸುತ್ತದೆ. ಮತ್ತು 2026ರಲ್ಲಿ ಭಾರತದ ಆರ್ಥಿಕತೆ ಮತ್ತು ರಾಜತಾಂತ್ರಿಕತೆಯು ಮಿಶ್ರ ಫಲಿತಾಂಶಗಳನ್ನು ನೀಡಿದ್ದರೂ, ಏಷ್ಯಾದಲ್ಲಿ ಭಾರತದ ಪ್ರಭಾವವು ಹೆಚ್ಚಾಗಿದೆ ಎಂದು ತಿಳಿಸಿದೆ.

ಅಷ್ಟೇ ಅಲ್ಲದೇ ಭಾರತದ ರಾಜತಾಂತ್ರಿಕ ಪ್ರಭಾವವು 70.3 ಅಂಕಗಳೊಂದಿಗೆ ಅತ್ಯಂತ ಪ್ರಬಲ ಮಾನದಂಡವಾಗಿ ಉಳಿದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಾದೇಶಿಕ ನಾಯಕತ್ವದ ಮೌಲ್ಯಮಾಪನದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದ್ದು, ಅವರು ಮೂರು ಸ್ಥಾನ ಮೇಲೇರಿ, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಂತರ ಎರಡನೇ ಅತ್ಯಂತ ಪರಿಣಾಮಕಾರಿ ಪ್ರಾದೇಶಿಕ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

2026ರ ಏಷ್ಯಾ ಪವರ್ ಇಂಡೆಕ್ಸ್ ವರದಿಯೂ, ಆರ್ಥಿಕ ಮತ್ತು ಮಿಲಿಟರಿ ಸಾಮರ್ಥ್ಯ, ಸ್ಥಿತಿಸ್ಥಾಪಕತ್ವ, ರಾಜತಾಂತ್ರಿಕ ಪ್ರಭಾವ ಮತ್ತು ಆರ್ಥಿಕ ಸಂಬಂಧಗಳು ಸೇರಿದಂತೆ ಎಂಟು ಶಕ್ತಿಯ ಅಳತೆಗಳಲ್ಲಿ 131 ಸೂಚಕಗಳ ಮೂಲಕ 27 ದೇಶಗಳು ಮತ್ತು ಪ್ರಾಂತ್ಯಗಳನ್ನು ನಿರ್ಣಯಿಸುತ್ತದೆ. ಈ ವರದಿಯಲ್ಲಿ ಚೀನಾದ ಒಟ್ಟಾರೆ ಶಕ್ತಿಯು ಭಾರತಕ್ಕಿಂತ ಶೇ. 80ರಷ್ಟು ಹೆಚ್ಚಿದೆ ಎಂದು ಅಂದಾಜಿಸಿದೆ.

ಏಷ್ಯಾ ಖಂಡದ ಮೇಲೆ ಅಮೆರಿಕ ಹಿಡಿತ

ಆಸ್ಟ್ರೇಲಿಯಾದ 'ಲೋವಿ ಇನ್‌ಸ್ಟಿಟ್ಯೂಟ್' ತಯಾರಿಸುವ 'ಏಷ್ಯಾ ಪವರ್ ಇಂಡೆಕ್ಸ್' ವರದಿಯು ಭೌಗೋಳಿಕ ಗಡಿಗಳ ಬದಲಾಗಿ ಭೂ-ರಾಜಕೀಯ ಪ್ರಭಾವವನ್ನು ಆಧರಿಸಿ ಈ ಪಟ್ಟಿಯನ್ನು ಸಿದ್ಧಪಡಿಸುತ್ತದೆ. ಅಮೆರಿಕವನ್ನು ಈ ಪಟ್ಟಿಯಲ್ಲಿ ಏಕೆ ಸೇರಿಸಲಾಗಿದೆ ಎಂಬುದಕ್ಕೆ ಪ್ರಮುಖ ಕಾರಣಗಳು ಇಲ್ಲಿವೆ.

ಏಷ್ಯಾದಲ್ಲಿ ಪ್ರಭಾವ ಬೀರುವ ಶಕ್ತಿ: ಈ ಸೂಚ್ಯಂಕವು ಕೇವಲ ಏಷ್ಯಾ ಖಂಡದ ಒಳಗಿರುವ ದೇಶಗಳನ್ನು ಮಾತ್ರ ಅಳೆಯುವುದಿಲ್ಲ, ಬದಲಾಗಿ ಏಷ್ಯಾ-ಪೆಸಿಫಿಕ್ ಪ್ರಾಂತ್ಯದ ರಾಜಕೀಯ, ಆರ್ಥಿಕತೆ ಮತ್ತು ಭದ್ರತೆಯ ಮೇಲೆ ಯಾವ ದೇಶಗಳು ಅತಿ ಹೆಚ್ಚು ಪ್ರಭಾವ ಬೀರುತ್ತವೆ ಎಂಬುದನ್ನು ಅಳೆಯುತ್ತದೆ.

ಮಿಲಿಟರಿ ಮತ್ತು ಆರ್ಥಿಕ ಅಸ್ತಿತ್ವ: ಏಷ್ಯಾದ ಪ್ರಮುಖ ದೇಶಗಳಾದ ಜಪಾನ್, ದಕ್ಷಿಣ ಕೊರಿಯಾ, ಫಿಲಿಪೈನ್ಸ್ ಮುಂತಾದ ದೇಶಗಳಲ್ಲಿ ಅಮೆರಿಕದ ಬೃಹತ್ ಸೇನಾ ನೆಲೆಗಳಿವೆ. ಅಲ್ಲದೆ ಏಷ್ಯಾದ ದೇಶಗಳೊಂದಿಗೆ ಅಮೆರಿಕ ಅತಿ ದೊಡ್ಡ ವ್ಯಾಪಾರ ಮತ್ತು ಆರ್ಥಿಕ ಸಂಬಂಧವನ್ನು ಹೊಂದಿದೆ.

ಇಂಡೋ-ಪೆಸಿಫಿಕ್ ವ್ಯಾಪ್ತಿ: ಈ ವರದಿಯು ಏಷ್ಯಾ ಮತ್ತು ಪೆಸಿಫಿಕ್ ಸಾಗರದ ಸುತ್ತಮುತ್ತಲಿನ ಒಟ್ಟು 27 ದೇಶಗಳು ಹಾಗೂ ಪ್ರಾಂತ್ಯಗಳನ್ನು (ಉದಾಹರಣೆಗೆ ಅಮೆರಿಕ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ರಷ್ಯಾ ಕೂಡ) ಒಳಗೊಂಡಿರುತ್ತದೆ (ಏಜೆನ್ಸೀಸ್).