ಮೋದಿ-ಷಾಗೆ ರಾಹುಲ್ ಗಾಂಧಿ ನೇರ ಎಚ್ಚರಿಕೆ  
ದೇಶ

ಜ್ಞಾನೇಶ್ ಕುಮಾರ್​​ರನ್ನು ಇಳಿಸಿದ ಬಳಿಕ ನಿಮ್ಮದೇ ಸರದಿ! ಮೋದಿ-ಷಾಗೆ ರಾಹುಲ್ ಗಾಂಧಿ ನೇರ ಎಚ್ಚರಿಕೆ | Rahul Gandhi

ನವದೆಹಲಿ: ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ನಡೆದ ಇಂಡಿಯಾ ಒಕ್ಕೂಟದ ಬೃಹತ್ ರಾಲಿಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಕೇಂದ್ರ ಸರ್ಕಾರದ ವಿರುದ್ಧ ರಣಕಹಳೆ ಊದಿದ್ದಾರೆ.

ಬೃಹತ್ ಸಮಾವೇಶವನ್ನುದ್ದೇಶಿಸಿ ​ಮಾತನಾಡಿದ ರಾಹುಲ್ ಗಾಂಧಿ, ಜ್ಞಾನೇಶ್​ ಕುಮಾರ್ ಬಳಿಕ ನಾವು ನಿಮ್ಮ ಬಳಿಗೆ (ಪ್ರಧಾನಿ ಮೋದಿ ಮತ್ತು ಅಮಿತ್ ಷಾ) ಬರಲಿದ್ದೇವೆ ಎಂದು ನೇರ ಎಚ್ಚರಿಕೆ ನೀಡಿದ್ದಾರೆ. ಜ್ಞಾನೇಶ್​​ ಕುಮಾರ್ ಸದ್ಯ ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ ಅವರು, ಚುನಾವಣಾ ಆಯೋಗದ ಅಕ್ರಮಗಳು ಹಾಗೂ ಮತ ಕಳ್ಳತನದ ವಿರುದ್ಧ ವಿಪಕ್ಷಗಳ ಹೋರಾಟ ಎಂತಹದ್ದೇ ಸಂದರ್ಭ ಬಂದರೂ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನೀವು ಎಲ್ಲಿಗೂ ಹೋಗಲು ಬಿಡುವುದಿಲ್ಲ!

ಕೇಂದ್ರ ಗೃಹ ಸಚಿವ ಅಮಿತ್ ಷಾ ನೀಡಿದ್ದ ಹೇಳಿಕೆಗೆ ತಿರುಗೇಟು ಕೊಟ್ಟ ರಾಹುಲ್ ಗಾಂಧಿ, ನರೇಂದ್ರ ಮೋದಿ ಎಲ್ಲಿಗೂ ಹೋಗುವುದಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ. ಆದರೆ ನಾನು ಅದಕ್ಕೆ ವಿರುದ್ಧವಾಗಿ ಹೇಳುತ್ತಿದ್ದೇನೆ, ಮೋದಿ ಎಲ್ಲಿಗೂ ಹೋಗಲು ಸಾಧ್ಯವಿಲ್ಲ, ಒಂದು ವೇಳೆ ಅವರು ಸ್ವಯಂ ಇಚ್ಛೆಯಿಂದ ಹೋಗಲು ಬಯಸಿದರೂ ನಾವು ಅವರನ್ನು ಅಷ್ಟು ಸುಲಭವಾಗಿ ಬಿಡುವುದಿಲ್ಲ ಎಂದು ಗುಡುಗಿದರು. ಜ್ಞಾನೇಶ್​ ಕುಮಾರ್ ಅಕ್ರಮ ಸಹಾಯವಿಲ್ಲದೆ ನರೇಂದ್ರ ಮೋದಿ ಪ್ರಧಾನಿಯಾಗಲು ಮತ್ತು ಷಾ ಗೃಹಮಂತ್ರಿಯಾಗಲು ಸಾಧ್ಯವಿರಲಿಲ್ಲ ಎಂದು ಆರೋಪಿಸಿದ ಅವರು, 2024ರ ಲೋಕಸಭಾ ಚುನಾವಣೆಯ ಫಲಿತಾಂಶಗಳು ಸಂಪೂರ್ಣವಾಗಿ ಕಾನೂನುಬಾಹಿರ ಎಂದು ಹರಿಹಾಯ್ದರು.

ಚುನಾವಣಾ ಆಯೋಗದ ನೆರವಿನಿಂದಲೇ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ದೂರಿದ ರಾಹುಲ್ ಗಾಂಧಿ, ಜ್ಞಾನೇಶ್​ ಕುಮಾರ್ ದೇಶದ ಆತ್ಮ ಮತ್ತು ಧ್ವನಿಯನ್ನು ಹತ್ತಿಕ್ಕುವ ಮಹಾಪರಾಧ ಎಸಗಿದ್ದಾರೆ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಜೈಲಿಗೆ ಕಳುಹಿಸುವವರೆಗೂ ವಿಶ್ರಮಿಸುವುದಿಲ್ಲ ಎಂದು ಕಿಡಿಕಾರಿದರು.

ದೇಶದಲ್ಲಿ ಮತ ಕಳ್ಳತನ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ ಕಾಂಗ್ರೆಸ್​ ನಾಯಕ, ಮಧ್ಯಪ್ರದೇಶ, ಹರಿಯಾಣ, ಛತ್ತೀಸ್‌ಗಢ, ಮಹಾರಾಷ್ಟ್ರ ಮತ್ತು ಕರ್ನಾಟಕದ ವಿಧಾನಸಭಾ ಚುನಾವಣೆಗಳಲ್ಲಿ ಮತಗಳ ತಿರುಚುವಿಕೆ ನಡೆದಿದೆ ಎಂದು ದೂರಿದರು. ದೇಶವ್ಯಾಪಿ ನಡೆಯುತ್ತಿರುವ ಎಸ್​​ಐಆರ್​ ಪ್ರಕ್ರಿಯೆಯನ್ನು ಟೀಕಿಸಿದ ಅವರು, 2024ರ ಚುನಾವಣೆಯ ನಂತರ ಭಾರತದ ಶೇ.15ರಷ್ಟು ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಬಲವಂತವಾಗಿ ಅಳಿಸಲಾಗಿದೆ ಎಂದು ದೂರಿದರು. ಇವಿಎಂ ಯಂತ್ರಗಳ ಮೂಲಕ ಹಾಗೂ ಮತದಾರರ ಪಟ್ಟಿಯಲ್ಲಿ ಮಾಡಿರುವ ಗೋಲ್ಮಾಲ್​ನಿಂದಾಗಿ 2024ರ ಚುನಾವಣೆ ಅಕ್ರಮವೆಂದು ಸಾಬೀತಾಗಿದೆ ಎಂದರು.

ತಾನು ಯಾರ ಮೇಲೂ ವೈಯಕ್ತಿಕ ದ್ವೇಷ ಸಾಧಿಸುವ ವ್ಯಕ್ತಿಯಲ್ಲ ಎಂದು ಸ್ಪಷ್ಟಪಡಿಸಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ, ಅಮಿತ್ ಷಾ ಅಥವಾ ಜ್ಞಾನೇಶ್​​ ಕುಮಾರ್ ಮೇಲೆ ತನಗೆ ಯಾವುದೇ ರೀತಿಯ ವೈಯಕ್ತಿಕ ದ್ವೇಷವಿಲ್ಲ ಎಂದರು. ತಾನು ಪ್ರೀತಿ ಮತ್ತು ಸೌಹಾರ್ದತೆಯನ್ನು ಹಂಚುವ ವ್ಯಕ್ತಿಯಾಗಿದ್ದು, ಹಿಂಸೆಯನ್ನು ಎಂದಿಗೂ ಬೆಂಬಲಿಸುವುದಿಲ್ಲ. ಆದರೆ, ದೇಶದ ಜನತೆಯ ಹಕ್ಕುಗಳನ್ನು ಕಸಿದುಕೊಳ್ಳುವ ಮತ್ತು ಸಂವಿಧಾನವನ್ನು ನಾಶಮಾಡಲು ಪ್ರಯತ್ನಿಸುವ ಯಾರೊಬ್ಬರಿಗೂ ಅವಕಾಶ ನೀಡುವುದಿಲ್ಲ ಎಂದು ಶಪಥ ಮಾಡಿದರು.

ದೇಶದಲ್ಲಿ ರೈತರಿಗೆ ಅವರ ಕಷ್ಟಕ್ಕೆ ತಕ್ಕ ನ್ಯಾಯ ಸಿಗುತ್ತಿಲ್ಲ, ಯುವಕರು ಉದ್ಯೋಗವಿಲ್ಲದೆ ಬೀದಿಪಾಲಾಗುತ್ತಿದ್ದಾರೆ ಮತ್ತು ದೇಶದ ಸಂಪತ್ತು ಕೇವಲ 2-3 ಬಂಡವಾಳಶಾಹಿಗಳ ಕೈ ಸೇರುತ್ತಿದೆ ಎಂದು ಅವರು ತೀವ್ರ ಕಳವಳ ವ್ಯಕ್ತಪಡಿಸುತ್ತಾ ರಾಹುಲ್​​, ಈ ಪ್ರತಿಭಟನೆಯು ಯಾವುದೇ ಒಂದು ರಾಜಕೀಯ ಪಕ್ಷದ ಅಥವಾ ನಾಯಕನ ಸ್ವಾರ್ಥಕ್ಕಾಗಿ ಹಮ್ಮಿಕೊಂಡಿದ್ದಲ್ಲ, ಬದಲಿಗೆ ಇದು ಇಡೀ ಭಾರತದ ಧ್ವನಿ ಮತ್ತು ದೇಶದ ಸ್ವಾತಂತ್ರ್ಯ ಉಳಿಸುವ ಹೋರಾಟ ಎಂದು ಅವರು ಬಣ್ಣಿಸಿದರು(ಏಜೆನ್ಸೀಸ್​).