ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇನಲ್ಲಿ ನಡುಕ ಹುಟ್ಟಿಸುವ ಭೀಕರ ಅಪಘಾತ!
- ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇನಲ್ಲಿ ನಡುಕ ಹುಟ್ಟಿಸುವ ಭೀಕರ ಅಪಘಾತ!
- ಹೈವೇನಲ್ಲಿ ಕಾರು ರಿವರ್ಸ್ ತೆಗೆದಿದ್ದಕ್ಕೆ ವೇಗವಾಗಿ ಬಂದ SUV ಡಿಕ್ಕಿ
- ಒಂದೇ ಕುಟುಂಬದ ನಾಲ್ವರು ದುರ್ಮರಣ
- ಸಿಸಿಟಿವಿ ವಿಡಿಯೋ ವೈರಲ್!
ಉತ್ತರಪ್ರದೇಶ: ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಫಘಾತವೊಂದು (Accident in Delhi Dehradun Expressway) ನಡೆದಿದ್ದು, ಕನಿಷ್ಟ ನಾಲ್ಕು ಜನ ಮೃತಪಟ್ಟಿರುವುದಾಗಿ ಹೇಳಲಾಗುತ್ತಿದೆ. ಹಿಮ್ಮುಖದಲ್ಲಿ ಬರುತ್ತಿದ್ದ ಕಾರೊಂದಕ್ಕೆ ವೇಗವಾಗಿ ಬಂದ ಎಸ್ಯುವಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಅಫಘಾತ ಸಂಭವಿಸಿದೆ ಎಂದು ವರದಿಯಾಗಿದೆ.
ವಿಡಿಯೋ ವೈರಲ್!
ಈ ಘಟನೆಯು ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇನ ಭಾಗವಾಗಿರುವ ಉತ್ತರಪ್ರದೇಶದ ಶರಣ್ಪುರ್ದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಈ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋನಲ್ಲಿ, ಕಾರೊಂದು ದಾರಿ ತೊಪ್ಪಿ ಮುಂದೆ ಹೋಗಿದೆ. ಮುಂದೆ ಹೋಗಿ ತಿರುಗಿಸಿ ಬರುವ ಬದಲು ಡ್ರೈವರ್ ಕಾರನ್ನು ಹಿಮ್ಮುಖವಾಗಿ ಚಲಾಯಿಸಲು ಪ್ರಾರಂಭಿಸಿದ್ದಾನೆ.
ಆದರೆ ಇದು ಎಕ್ಸ್‌ಪ್ರೆಸ್‌ವೇಯಾದ ಕಾರಣ ಮುಂದಿನಿಂದ ವೇಗವಾಗಿ ಬಂದ ಎಸ್ಯುವಿ ಕಾರೊಂದು ಈ ಹಿಮ್ಮುಖವಾಗಿ ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದು ಎಸ್ಯುವಿ ಕಾರು ರಸ್ತೆಯಲ್ಲಿ ತಲೆಕೆಳಗಾಗಿ ಮಲಗಿದರೆ, ಇನ್ನೊಂದು ಕಾರು ಡಿವೈಡರ್ಗೆ ಡಿಕ್ಕಿ ಹೊಡೆದುಕೊಂಡಿದೆ.
ಒಂದೇ ಕುಟುಂಬ ನಾಲ್ವರು ನಿಧನ
ಮಾಹಿತಿ ಪ್ರಕಾರ, ಈ ಅಫಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಇವರು ಹರಿಯಾಣದಿಂದ ಹರಿದ್ವಾರಕ್ಕೆ ಪುಣ್ಯಕ್ಷೇತ್ರಗಳ ದರ್ಶನಕ್ಕೆ ತೆರಳಿದ್ದರು ಎಂದು ಹೇಳಲಾಗುತ್ತಿದೆ. ಮೃತರನ್ನು ಪ್ರವೀಣ್ (40) ಆತನ ಪತ್ನಿ ಪ್ರೀತಿ (37) ಆತನ ತಾಯಿ ಸುದೇಶ್ ಹಾಗೂ ಮಗ ಶಿವಾಂಶ್ (9) ಎಂದು ಗುರುತಿಸಲಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾಗಿ ತಿಳಿದುಬಂದಿದೆ, (ಏಜನ್ಸೀಸ್).