ದೇಶ

ನೀವು ಭಾರತ, ಇಸ್ರೇಲ್ ಹಾಗೂ ಜಗತ್ತಿನ ನೈಜ ಹೀರೋ!...ಮಚ್ಚಾರ್​​ ಸ್ವಾಗತಕ್ಕೆ ಜೆರುಸಲೆಮ್‌ ಎದುರು ನೋಡುತ್ತಿದೆ ಎಂದ ಇಸ್ರೇಲ್ ಅಧ್ಯಕ್ಷ | Smit Machchhar

Smit Machchhar: ಕೋ-ಪೈಲಟ್ ನಡೆಸಿದ ಭೀಕರ ದಾಳಿಯನ್ನು ಧೈರ್ಯದಿಂದ ಎದುರಿಸಿ ದೊಡ್ಡ ಮಟ್ಟದ ಅಪಾಯವನ್ನು ತಪ್ಪಿಸಿದ್ದ ಫ್ಲೈದುಬೈ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರನ್ನು ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜೋಗ್ ಜೆರುಸಲೆಮ್‌ಗೆ ಆಹ್ವಾನಿಸಿದ್ದಾರೆ. ಅವರ ಅಸಾಧಾರಣ ಸಾಹಸವನ್ನು ಗುರುತಿಸಿ ಈಗಾಗಲೇ ಇಸ್ರೇಲ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Smit Machchhar: ಕೋ-ಪೈಲಟ್ ನಡೆಸಿದ ಭೀಕರ ದಾಳಿಯನ್ನು ಧೈರ್ಯದಿಂದ ಎದುರಿಸಿ ದೊಡ್ಡ ಮಟ್ಟದ ಅಪಾಯವನ್ನು ತಪ್ಪಿಸಿದ್ದ ಫ್ಲೈದುಬೈ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರನ್ನು ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜೋಗ್ ಜೆರುಸಲೆಮ್‌ಗೆ ಆಹ್ವಾನಿಸಿದ್ದಾರೆ. ಅವರ ಅಸಾಧಾರಣ ಸಾಹಸವನ್ನು ಗುರುತಿಸಿ ಈಗಾಗಲೇ ಇಸ್ರೇಲ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕ್ಯಾಪ್ಟನ್ ಮಚ್ಚಾರ್ ಅವರಿಗೆ ಬರೆದ ಪತ್ರದಲ್ಲಿ, ಇಸ್ರೇಲ್ ಪ್ರೆಸಿಡೆನ್ಶಿಯಲ್ ಅವರ್ಡ್ ಫಾರ್ ಸಿವಿಲಿಯನ್ ಹೆರೋಯಿಸಮ್ ಪ್ರಶಸ್ತಿಯನ್ನು ನೀಡಿ ಗೌರವಿಸುವುದು ನನಗೆ ಹೆಮ್ಮೆಯ ವಿಷಯ ಎಂದು ಅಧ್ಯಕ್ಷ ಹೆರ್ಜೋಗ್ ತಿಳಿಸಿದ್ದಾರೆ. ಅಲ್ಲದೆ, ಮಚ್ಚಾರ್ ಅವರನ್ನು ಭಾರತ, ಇಸ್ರೇಲ್ ಹಾಗೂ ಇಡೀ ಜಗತ್ತಿನ ನೈಜ ಹೀರೋ ಎಂದು ಬಣ್ಣಿಸಿರುವ ಅವರು, ಮಚ್ಚಾರ್ ತಮ್ಮ ಗಾಯಗಳಿಂದ ಸಂಪೂರ್ಣವಾಗಿ ಗುಣಮುಖರಾದ ಬಳಿಕ ಜೆರುಸಲೆಮ್‌ಗೆ ಬಂದು ಪ್ರಶಸ್ತಿ ಸ್ವೀಕರಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕ್ಯಾಪ್ಟನ್ ಧೈರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಇಸ್ರೇಲ್ ಅಧ್ಯಕ್ಷ

ತಮ್ಮ ಎಕ್ಸ್ ಖಾತೆಯಲ್ಲಿ ಮಚ್ಚಾರ್ ಅವರು ಪತ್ರವನ್ನು ಓದುತ್ತಿರುವ ಫೋಟೋ ಹಾಗೂ ಪತ್ರದ ಚಿತ್ರವನ್ನು ಹಂಚಿಕೊಂಡಿರುವ ಅಧ್ಯಕ್ಷ ಹೆರ್ಜೋಗ್, ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಸಂಭವಿಸಬಹುದಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿ, ವಿಮಾನವನ್ನು ಸುರಕ್ಷಿತವಾಗಿ ಭೂಸ್ಪರ್ಶ ಮಾಡುವಲ್ಲಿ ಕ್ಯಾಪ್ಟನ್ ತೋರಿದ ದೃಢಸಂಕಲ್ಪವನ್ನು ಅವರು ಕೊಂಡಾಡಿದ್ದಾರೆ. ಇಸ್ರೇಲ್ ಜನರ ಪರವಾಗಿ, ಇಸ್ರೇಲ್‌ನ ನಾಗರಿಕ ವೀರತೆಗಾಗಿ ನೀಡುವ ಅತ್ಯುನ್ನತ ಪುರಸ್ಕಾರವಾದ ಇಸ್ರೇಲ್ ಪ್ರೆಸಿಡೆನ್ಶಿಯಲ್ ಅವರ್ಡ್ ಫಾರ್ ಸಿವಿಲಿಯನ್ ಹೆರೋಯಿಸಮ್ ಪ್ರಶಸ್ತಿಯನ್ನು ನಿಮಗೆ ನೀಡಲು ನನಗೆ ಅತ್ಯಂತ ಗೌರವವೆನಿಸುತ್ತದೆ. ಘಟನೆಯ ಸಮಯದಲ್ಲಿ ಮಚ್ಚಾರ್ ತೋರಿದ ಸಾಹಸಕ್ಕೆ ಇಸ್ರೇಲ್ ಸರ್ಕಾರವು ಮನಸಾರೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತದೆ ಎಂದಿದ್ದಾರೆ.

ವಿಮಾನದಲ್ಲಿದ್ದ ಎಲ್ಲ ಅಮಾಯಕರ ಜೀವಕ್ಕೆ ಎದುರಾಗಿದ್ದ ಖಚಿತ ದುರಂತವನ್ನು ತಪ್ಪಿಸಲು ನೀವು ತೋರಿದ ಅಸಾಧಾರಣ ಧೈರ್ಯ ಮತ್ತು ದೃಢನಿರ್ಧಾರಕ್ಕೆ ಇಸ್ರೇಲ್ ಪರವಾಗಿ ನಮ್ಮ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ, ಕಾಕ್‌ಪಿಟ್ ಒಳಗಿನ ಭಯಾನಕ ವಾತಾವರಣವನ್ನು ನೆನಪಿಸಿಕೊಂಡ ಹೆರ್ಜೋಗ್, ಫ್ಲೈದುಬೈ ವಿಮಾನದೊಳಗೆ ನಡೆದ ಘಟನೆಯು ಯಾವುದೋ ಥ್ರಿಲ್ಲರ್ ಸಿನಿಮಾಗಿಂತ ಕಡಿಮೆ ಇರಲಿಲ್ಲ ಎಂದಿದ್ದಾರೆ. ಅಲ್ಲದೆ, ಮಚ್ಚಾರ್ ಅವರು ಚೇತರಿಸಿಕೊಂಡು ತಮ್ಮ ಶಕ್ತಿಯನ್ನು ಮರಳಿ ಪಡೆದ ನಂತರ, ಅವರನ್ನು ಜೆರುಸಲೆಮ್‌ಗೆ ಸ್ವಾಗತಿಸಲು ಕಾತರದಿಂದ ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.

ವಿಮಾನದ ಒಳಗೆ ಕೋ ಪೈಲಟ್ ತನ್ನ ಮೇಲೆ ನಡೆಸಿದ ಹಲ್ಲೆಯ ಬಗ್ಗೆ ಮಚ್ಚಾರ್ ಈ ಹಿಂದೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ತಿಳಿಸಿದ್ದರು. ವರದಿಗಳ ಪ್ರಕಾರ, ಕೋ-ಪೈಲಟ್ ಕಾಕ್‌ಪಿಟ್‌ನಲ್ಲಿಟ್ಟಿದ್ದ ತುರ್ತು ಕೊಡಲಿಯಿಂದ ಅವರ ಮೇಲೆ ಹಿಂದಿನಿಂದ ಪದೇ ಪದೇ ಹಲ್ಲೆ ನಡೆಸಿದ್ದನು. ಈ ಭೀಕರ ದಾಳಿಯಿಂದಾಗಿ ಮಚ್ಚಾರ್ ಗಂಭೀರ ಗಾಯಗೊಂಡಿದ್ದು, ಅವರಿಗೆ ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಬೇಕಾಯಿತು. ಪ್ರಸ್ತುತ ಅವರು ದುಬೈನ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಈ ಮಾರಕ ಹಲ್ಲೆಯ ನಡುವೆಯೂ ಕ್ಯಾಪ್ಟನ್ ವಿಮಾನವನ್ನು ಸುರಕ್ಷಿತವಾಗಿ ನಿಯಂತ್ರಿಸಿ, ಎದುರಾಗಬಹುದಿದ್ದ ದೊಡ್ಡ ಅಪಾಯವನ್ನು ಯಶಸ್ವಿಯಾಗಿ ತಪ್ಪಿಸಿದ್ದರು.

ಇದನ್ನೂ ಓದಿ:ನನಗೆ ಇಲ್ಲಿ ಸಾಯಲು ಇಷ್ಟವಿಲ್ಲ ಎಂದಿದ್ದ ಮಚ್ಚಾರ್​!...ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಪೈಲಟ್ ಪ್ರಾಣ ಉಳಿಸಲು ಆ ವೈದ್ಯ ಮಾಡಿದ ಹೋರಾಟ ಮೈ ಜುಮ್ ಎನಿಸುತ್ತೆ! | Smit Machchhar

ಇಸ್ರೇಲ್ ಪ್ರೆಸಿಡೆನ್ಶಿಯಲ್ ಅವರ್ಡ್ ಫಾರ್ ಸಿವಿಲಿಯನ್ ಹಿರೋಯಿಸಮ್

ಇಸ್ರೇಲ್ ಪ್ರೆಸಿಡೆನ್ಶಿಯಲ್ ಅವರ್ಡ್ ಫಾರ್ ಸಿವಿಲಿಯನ್ ಹಿರೋಯಿಸಮ್ ಎನ್ನುವುದು ಇಸ್ರೇಲ್ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರ ಸುರಕ್ಷತೆಯನ್ನು ಕಾಪಾಡುವುದಕ್ಕಾಗಿ ತಮ್ಮ ಸ್ವಂತ ಜೀವವನ್ನೇ ಪಣಕ್ಕಿಟ್ಟು ಸಾಹಸ ಮೆರೆದ ಕ್ಯಾಪ್ಟನ್ ಮಚ್ಚಾರ್ ಅವರ ಸಾಹಸ ಕಾರ್ಯವನ್ನು ಅಧ್ಯಕ್ಷ ಹೆರ್ಜೋಗ್ ಅವರ ಈ ಆಹ್ವಾನವು ಗೌರವಿಸುತ್ತದೆ. ಗಾಯಗೊಂಡಿರುವ ಕ್ಯಾಪ್ಟನ್ ಅವರನ್ನು ನೇರವಾಗಿ ಜೆರುಸಲೆಮ್‌ಗೆ ಆಹ್ವಾನಿಸುವ ಮೂಲಕ, ಅಪಾಯಕಾರಿ ಸಂದರ್ಭದಲ್ಲಿ ಅವರು ಪ್ರದರ್ಶಿಸಿದ ಅಪಾರ ಧೈರ್ಯ ಮತ್ತು ದೃಢತೆಯನ್ನು ಇಸ್ರೇಲ್ ಅಧ್ಯಕ್ಷರು ಅಧಿಕೃತವಾಗಿ ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾರತ, ಇಸ್ರೇಲ್ ಹಾಗೂ ಜಗತ್ತಿನಾದ್ಯಂತ ಇರುವ ಜನರಿಗೆ ಮಚ್ಚಾರ್ ಒಬ್ಬ ಲೀಡರ್​ ಎಂದು ಬಣ್ಣಿಸುವ ಮೂಲಕ ಇಸ್ರೇಲ್ ಅಧ್ಯಕ್ಷರು ಸ್ಮಿತ್​ ಸಾಹಸಕ್ಕೆ ಜಾಗತಿಕ ಮನ್ನಣೆ ನೀಡಿದ್ದಾರೆ(ಏಜೆನ್ಸೀಸ್​).