ಲಕ್ಷ್ಯ ರಸ್ತೋಗಿ ಉತ್ತರಾಖಂಡ ಬಂಗೀ ಜಂಪಿಂಗ್ ಸಾವು
ಡೆಹ್ರಾಡೂನ್: ಕುಟುಂಬದವರ ಜೊತೆ ದೇವಸ್ಥಾನಕ್ಕೆ ಹೋಗಿ ದೇವರ ಆಶೀರ್ವಾದ ಪಡೆದು ಖುಷಿಖುಷಿಯಾಗಿ ಮನೆಗೆ ವಾಪಸ್ ಆಗುತ್ತಿದ್ದ ಕುಟುಂಬಕ್ಕೆ ವಿಧಿ ಬೇರೆಯದೇ ಆಟ ಆಡಿದೆ.
ದಾರಿಯಲ್ಲಿ ಮಗ ಆಸೆಪಟ್ಟನೆಂದು ಬಂಗಿ ಜಂಪಿಂಗ್ ಆಡಿಸಲು ಮುಂದಾದ ಪಾಲಕರು, ಕೆಲವೇ ನಿಮಿಷಗಳಲ್ಲಿ ಅವನ ಶವವನ್ನು ಹಿಡಿದು ಕಣ್ಣೀರು ಹಾಕುವಂತಾಗಿದೆ. ಸಾಹಸ ಕ್ರೀಡೆಯೊಂದರ ಮೋಜಿಗೆ, 21 ವರ್ಷದ ಯುವಕ ಪ್ರಾಣವನ್ನು ಕಳೆದುಕೊಂಡಿರುವ ದಾರುಣ ಘಟನೆ ಉತ್ತರಾಖಂಡದ (Uttarakhand Bungee Jumping) ದೇವಪ್ರಯಾಗ್ ಬಳಿ ನಡೆದಿದೆ.
ಮೃತಪಟ್ಟ ಯುವಕ ಡೆಹ್ರಾಡೂನ್‌ನ ಕಲಗಾಂವ್ ನಿವಾಸಿಯಾದ ಲಕ್ಷ್ಯ ರಸ್ತೋಗಿ (21) ಎಂದು ಗುರುತಿಸಲಾಗಿದ್ದು, ಈ ಸಾವಿನ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದೆ
ದೇವಸ್ಥಾನದಿಂದ ಮರಳುವಾಗ ನಡೆದ ದುರಂತ!
ಲಕ್ಷ್ಯ ರಸ್ತೋಗಿ ತನ್ನ ಕುಟುಂಬದೊಂದಿಗೆ ಧಾರಿ ದೇವಿ ದೇವಸ್ಥಾನಕ್ಕೆ ಪ್ರವಾಸ ಹೋಗಿದ್ದನು. ದೇವರ ದರ್ಶನ ಮುಗಿಸಿ ಎಲ್ಲರೂ ಡೆಹ್ರಾಡೂನ್‌ಗೆ ಕಾರಿನಲ್ಲಿ ವಾಪಸ್ ಆಗುತ್ತಿದ್ದರು.
ಮುಲ್ಯಗಾಂವ್ ಎಂಬಲ್ಲಿಗೆ ಬರುತ್ತಿದ್ದಂತೆ ಅಲ್ಲಿ ಅಲಕನಂದಾ ನದಿಯ ಮೇಲೆ ಬಂಗೀ ಜಂಪಿಂಗ್ ಪಾಯಿಂಟ್ ಇರುವುದನ್ನು ಲಕ್ಷ್ಯ ನೋಡಿದ್ದಾನೆ. ಸಾಹಸ ಕ್ರೀಡೆಗಳೆಂದರೆ ಕ್ರೇಜ್ ಹೊಂದಿದ್ದ ಯುವಕ, ತಾನು ಕೂಡ ಒಮ್ಮೆ ಜಂಪ್ ಮಾಡುವುದಾಗಿ ಪೋಷಕರಲ್ಲಿ ಹಠ ಹಿಡಿದಿದ್ದಾನೆ. ಮಗನ ಆಸೆಗೆ ಪೋಷಕರು ಕೂಡ ಒಪ್ಪಿಗೆ ನೀಡಿದ್ದಾರೆ. ಆದರೆ, ಇದೇ ಅವನ ಕೊನೆಯ ಜಿಗಿತವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ.
ವೇದಿಕೆಗೆ ಬರುತ್ತಿದ್ದಂತೆ ಶುರುವಾಯ್ತು ನರಕಯಾತನೆ!
ಬಂಗೀ ಜಂಪಿಂಗ್‌ನ ಎಲ್ಲಾ ತಯಾರಿ ಮುಗಿಸಿ, ಲಕ್ಷ್ಯ ಅಲಕನಂದಾ ನದಿಯತ್ತ ಯಶಸ್ವಿಯಾಗಿ ಜಿಗಿದಿದ್ದಾನೆ. ಜಂಪ್ ಮುಗಿಸಿ ಅವನನ್ನು ರೋಪ್ ಮೂಲಕ ಮತ್ತೆ ಮೇಲಿನ ವೇದಿಕೆಗೆ ಕರೆತರಲಾಯಿತು. ಆದರೆ, ವೇದಿಕೆಗೆ ಕಾಲಿಡುತ್ತಿದ್ದಂತೆ ಲಕ್ಷ್ಯನಿಗೆ ತೀವ್ರ ಎದೆನೋವು ಮತ್ತು ಹೊಟ್ಟೆನೋವು ಕಾಣಿಸಿಕೊಂಡಿದೆ.
ಉಸಿರಾಡಲು ಗಾಳಿಯೇ ಸಿಗದಂತೆ ಒದ್ದಾಡಿದ್ದಾನೆ. ಗಾಬರಿಗೊಂಡ ಕುಟುಂಬಸ್ಥರು ಮೊದಲು ಹತ್ತಿರದ ಲಾಡ್ಜ್‌ಗೆ ಕರೆದೊಯ್ದು ವಿಶ್ರಾಂತಿ ಪಡೆಯಲು ವ್ಯವಸ್ಥೆ ಮಾಡಿದ್ದಾರೆ. ಆದರೆ ಕೆಲವೇ ನಿಮಿಷಗಳಲ್ಲಿ ಲಕ್ಷ್ಯ ಪ್ರಜ್ಞೆ ಕಳೆದುಕೊಂಡು ಕುಸಿದು ಬಿದ್ದಿದ್ದಾನೆ.
ತಕ್ಷಣವೇ ಆತನನ್ನು ಬಾಗಿಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಆದರೆ ಅಲ್ಲಿಗೆ ತಲುಪುವಷ್ಟರಲ್ಲೇ ಲಕ್ಷ್ಯನ ಪ್ರಾಣ ಪಕ್ಷಿ ಹಾರಿಹೋಗಿತ್ತು.
ವೈದ್ಯರು ಸಿಪಿಆರ್ ಮಾಡಿದರೂ ಪ್ರಯೋಜನವಾಗಲಿಲ್ಲ!
ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಆಕಾಶ್ ದೀಪ್ ಹೇಳುವ ಪ್ರಕಾರ, ಯುವಕನನ್ನು ಆಸ್ಪತ್ರೆಗೆ ತಂದಾಗ ಆತನಲ್ಲಿ ಯಾವುದೇ ನಾಡಿಮಿಡಿತ ಇರಲಿಲ್ಲ. ವೈದ್ಯಕೀಯ ತಂಡ ತಕ್ಷಣವೇ ಸಿಪಿಆರ್ ನೀಡಿ ಆತನನ್ನು ಬದುಕಿಸಲು ಶಕ್ತಿಮೀರಿ ಪ್ರಯತ್ನಿಸಿತು. ಆದರೆ, ಲಕ್ಷ್ಯ ಯಾವುದೇ ಪ್ರತಿಕ್ರಿಯೆ ನೀಡದೆ ಸಾವನ್ನಪ್ಪಿದ್ದಾಗಿ ವೈದ್ಯರು ಘೋಷಿಸಿದರು.
ಮೇಲ್ನೋಟಕ್ಕೆ ಇದು ಹಠಾತ್ ಹೃದಯಾಘಾತ ಅಥವಾ ಸಿಂಕೋಪಲ್ ಅಟ್ಯಾಕ್ ಇರಬಹುದು ಎಂದು ಶಂಕಿಸಲಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.
ವಿಡಿಯೋ ವೈರಲ್: ಕಳವಳದಲ್ಲಿ ನೆಟ್ಟಿಗರು!
ಲಕ್ಷ್ಯ ಸಾವನ್ನಪ್ಪುವ ಕೆಲವೇ ನಿಮಿಷಗಳ ಮುಂಚೆ ತೆಗೆದ ಬಂಗೀ ಜಂಪಿಂಗ್ ವಿಡಿಯೋ ಈಗ ಇಂಟರ್ನೆಟ್‌ನಲ್ಲಿ ತಲ್ಲಣ ಮೂಡಿಸಿದೆ. ಈ ವಿಡಿಯೋ ನೋಡಿರುವ ಸಾಹಸ ಕ್ರೀಡಾ ಪ್ರೇಮಿಗಳು ಕಠಿಣ ಸುರಕ್ಷತಾ ನಿಯಮಗಳ ಬಗ್ಗೆ ಪ್ರಶ್ನೆ ಎತ್ತುತ್ತಿದ್ದಾರೆ.
ಇಂತಹ ಹೈ-ಅಡ್ರಿನಾಲಿನ್ ಸಾಹಸ ಕ್ರೀಡೆಗಳನ್ನು ಆಡಿಸುವ ಮುನ್ನ ಅಲ್ಲಿ ಸೂಕ್ತ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆಯೇ? ಹಾರ್ಟ್ ರೇಟ್ ಚೆಕ್ ಮಾಡಲಾಗುತ್ತದೆಯೇ? ಎಂದು ನೆಟ್ಟಿಗರು ಕಮೆಂಟ್ ಬಾಕ್ಸ್‌ನಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ. ಇನ್ನೂ ಕೆಲವರು, ಇಂತಹ ಸಾಹಸಗಳಿಗೆ ಕೈಹಾಕುವ ಮುನ್ನ ಜನರು ತಮ್ಮ ಸ್ವಂತ ಆರೋಗ್ಯದ ಸ್ಥಿತಿಯನ್ನು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ, (ಏಜನ್ಸೀಸ್).