ಸೋನಿಯಾ ಗಾಂಧಿಗೆ ಸಿಟಿಐ ಪತ್ರ 
ದೇಶ

ದೆಹಲಿಯ 20 ಲಕ್ಷ ವ್ಯಾಪಾರಿಗಳಿಗೆ ನಷ್ಟವಾಗತ್ತೆ!....ಇಂಡಿಯಾ ಮೈತ್ರಿಕೂಟದ ರ‍್ಯಾಲಿ ಮುಂದೂಡಲು ಸೋನಿಯಾ ಗಾಂಧಿಗೆ ಸಿಟಿಐ ಪತ್ರ! | INDIA Bloc Rally

INDIA Bloc Rally: ಇಂಡಿಯಾ ಮೈತ್ರಿಕೂಟದ ವತಿಯಿಂದ ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿರುವ ಬೃಹತ್ ರ‍್ಯಾಲಿ ಸ್ಥಳೀಯ ವ್ಯಾಪಾರಿ ವಲಯದಲ್ಲಿ ತೀವ್ರ ಆತಂಕ ಮೂಡಿಸಿದೆ. ಹಬ್ಬದ ಸೀಸನ್‌ನಲ್ಲಿ ನಡೆಯಲಿರುವ ಈ ರಾಜಕೀಯ ಕಾರ್ಯಕ್ರಮದಿಂದ ವ್ಯಾಪಾರ-ವಹಿವಾಟಿಗೆ ತೀವ್ರ ತೊಂದರೆಯಾಗಲಿದೆ ಎಂದು ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ (CTI) ಸೇರಿದಂತೆ ವಿವಿಧ ವ್ಯಾಪಾರ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ.

ಸಿಟಿಐ ಅಧ್ಯಕ್ಷ ಬ್ರಿಜೇಶ್ ಗೋಯಲ್ ಮಾತನಾಡಿ, ರಾಮಲೀಲಾ ಮೈದಾನದ ಸುತ್ತಮುತ್ತಲಿನ 5 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸದರ್ ಬಜಾರ್, ಖಾರಿ ಬೋಲಿ ಮತ್ತು ಚಾಂದನಿ ಚೌಕ್‌ನಂತಹ 20ಕ್ಕೂ ಹೆಚ್ಚು ಪ್ರಮುಖ ಸಗಟು ಹಾಗೂ ಚಿಲ್ಲರೆ ಮಾರುಕಟ್ಟೆಗಳಿವೆ. ಇಲ್ಲಿಂದ ಪ್ರತಿದಿನ ದೇಶ-ವಿದೇಶಗಳಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಸರಕುಗಳು ರವಾನೆಯಾಗುತ್ತವೆ. ರಾಮಲೀಲಾ ಮೈದಾನದ ಸಾಮರ್ಥ್ಯ ಕೇವಲ 50,000 ಜನರಾಗಿದ್ದರೂ, ಸಭೆಗೆ 10 ಲಕ್ಷ ಜನರು ಸೇರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಒಂದುವೇಳೆ ಇಷ್ಟು ದೊಡ್ಡ ಜನಸ್ತೋಮ ಹಬ್ಬದ ಸಂದರ್ಭದಲ್ಲಿ ಇಲ್ಲಿ ಸೇರಿಕೊಂಡರೆ, ಸಾರಿಗೆ ಮತ್ತು ಇಡೀ ಮೂಲಭೂತ ವ್ಯವಸ್ಥೆಯೇ ಕುಸಿದುಬೀಳಲಿದೆ ಎಂದು ಎಚ್ಚರಿಸಿದ್ದಾರೆ.

ದೀಪಾವಳಿ ಮತ್ತು ಧನ್‌ತೇರಸ್ ಹಬ್ಬಗಳ ನಡುವಿನ ಅವಧಿಯಲ್ಲಿ ದೆಹಲಿಯಲ್ಲಿ ಸುಮಾರು 25,000 ಕೋಟಿ ರೂ.ಗಳ ವ್ಯಾಪಾರ ನಡೆಯುತ್ತದೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ನಡೆದ ಪ್ರತಿಭಟನೆಗಳು ಹಾಗೂ ಸಂಚಾರ ನಿರ್ಬಂಧಗಳಿಂದ ಈಗಾಗಲೇ ವ್ಯಾಪಾರಿಗಳಿಗೆ 3,000 ಕೋಟಿ ರೂ.ಗಳ ನಷ್ಟವಾಗಿದೆ. ಈಗ ಹಬ್ಬದ ಮುನ್ನಾ ದಿನಗಳಲ್ಲಿ ಮತ್ತೊಂದು ಬೃಹತ್ ಸಭೆ ನಡೆದರೆ ಹೆಚ್ಚುವರಿಯಾಗಿ 10,000 ಕೋಟಿ ರೂ.ಗಳ ವರೆಗೆ ನಷ್ಟವಾಗಬಹುದು ಎಂದು ವ್ಯಾಪಾರಿ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.

ಕೈ ನಾಯಕರಿಗೆ ವ್ಯಾಪಾರಸ್ಥರ ಮನವಿ!

ಸದರ್ ಬಜಾರ್ ಟ್ರೇಡ್ಸ್ ಅಸೋಸಿಯೇಷನ್ ಮತ್ತು ಕಿರಾಣಾ ಕಮಿಟಿ ದೆಹಲಿ ಸೇರಿದಂತೆ ವಿವಿಧ ವ್ಯಾಪಾರ ಸಂಘಟನೆಗಳು, ಈ ರಾಜಕೀಯ ಕಾರ್ಯಕ್ರಮವನ್ನು ದೀಪಾವಳಿಯ ನಂತರದ (ನವೆಂಬರ್ 8) ದಿನಗಳಿಗೆ ಮುಂದೂಡುವಂತೆ ಕೋರಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಸೇರಿದಂತೆ ಪ್ರಮುಖ ಇಂಡಿಯಾ ಮೈತ್ರಿಕೂಟದ ನಾಯಕರಿಗೆ ಪತ್ರ ಬರೆದಿವೆ. ರಾಜಕೀಯ ಸಮಾವೇಶಗಳನ್ನು ಸಮಯ ನೋಡಿಕೊಂಡು ಮತ್ತೆ ಆಯೋಜಿಸಬಹುದು, ಆದರೆ, ವರ್ಷದ ಅತಿಮುಖ್ಯವಾದ ವ್ಯಾಪಾರದ ಸಮಯದಲ್ಲಿ ವ್ಯಾಪಾರಿಗಳು ತಮ್ಮ ಅವಕಾಶವನ್ನು ಕಳೆದುಕೊಳ್ಳಲು ಸಿದ್ಧರಿಲ್ಲ ಎಂದು ಅವರು ಒತ್ತಾಯಿಸಿದ್ದಾರೆ.

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಇಂಡಿಯಾ ಮೈತ್ರಿಕೂಟವು ಅಕ್ಟೋಬರ್ 30ರಂದು ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಮುಖ್ಯ ಚುನಾವಣಾ ಆಯುಕ್ತ ಕುಮಾರ್ ವಿರುದ್ಧ ಸಾರ್ವಜನಿಕ ದೋಷಾರೋಪಣೆ ನಡೆಸಲಿದೆ. ಇದರ ಮುಂದುವರಿದ ಭಾಗವಾಗಿ ಮತಕಳ್ಳತನದ ವಿರುದ್ಧ ದೆಹಲಿ ಚಲೋ ಜಾಥಾ ನಡೆಸಿ, ನವೆಂಬರ್ 1ರಂದು ರಾಮಲೀಲಾ ಮೈದಾನದಲ್ಲಿ ಬೃಹತ್ ರ‍್ಯಾಲಿ ನಡೆಸಲು ನಿರ್ಧರಿಸಲಾಗಿದೆ(ಏಜೆನ್ಸೀಸ್​).