ಪ್ರಧಾನಿ ಮೋದಿಗೆ ಬಹಿರಂಗ ಪತ್ರ ಬರೆದ ಸಿಜೆಪಿ ಮುಖ್ಯಸ್ಥ ಅಭಿಜೀತ್ ದೀಪ್ಕೆ
- ನೀಟ್ ಯುಜಿ ಪರೀಕ್ಷಾ ಅಕ್ರಮದಿಂದ ಬೇಸತ್ತು 48 ಗಂಟೆಗಳಲ್ಲಿ 11 ವಿದ್ಯಾರ್ಥಿಗಳು ಆತ್ಮಹತ್ಯೆ
- ಮೃತರ ಕುಟುಂಬಕ್ಕೆ ತಲಾ 1 ಕೋಟಿ ರೂ. ಪರಿಹಾರ ನೀಡುವಂತೆ ಕಾಕ್ರೋಚ್ ಜನತಾ ಪಾರ್ಟಿ ಆಗ್ರಹ
- ಪ್ರಧಾನಿ ಮೋದಿಗೆ ಬಹಿರಂಗ ಪತ್ರ ಬರೆದ ಸಿಜೆಪಿ ಮುಖ್ಯಸ್ಥ ಅಭಿಜೀತ್ ದೀಪ್ಕೆ
ನವದೆಹಲಿ: ನೀಟ್ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ ಕೆಲ ದಿನಗಳ ಹಿಂದೆ ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಿತ್ತು.
ಈಗ ನೀಟ್ ಪರೀಕ್ಷೆ ಅಕ್ರಮದಿಂದ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳ ಕುಟುಂಬಕ್ಕೆ ಕೇಂದ್ರ ಸರ್ಕಾರ 1 ಕೋಟಿ ರೂಪಾಯಿಗಳನ್ನು ಪರಿಹಾರ ಮೊತ್ತವಾಗಿ ನೀಡಬೇಕೆಂದು ಸಿಜೆಪಿ ಸ್ಥಾಪಕ ಅಭಿಜೀತ್ ದೀಪ್ಕೆ ಪ್ರಧಾನಿಗಳಿಗೆ ಪತ್ರ (Abhijit Dipke Letter to PM Modi) ಬರೆದಿದ್ದಾರೆ.
48 ಗಂಟೆಯಲ್ಲಿ 11 ಸಾವು
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಿರುವ ಬಹಿರಂಗ ಪತ್ರದಲ್ಲಿ ದೀಪ್ಕೆ, ಕಳೆದ 48 ಗಂಟೆಗಳಲ್ಲಿ ಇಲ್ಲಿವರೆಗೆ ಸುಮಾರು 11 ಜನ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಆಗದೇ ಹೋಗಿದ್ದರೆ, ಈ ಮಕ್ಕಳು ಜೀವ ಕಳೆದುಕೊಳ್ಳುತ್ತಿರಲಿಲ್ಲ. ಈಗ ಇದರ ಹೊಣೆಯನ್ನು ಕೇಂದ್ರ ಸರ್ಕಾರ ಹೊತ್ತುಕೊಂಡು ಮೃತರ ಕುಟುಂಬಗಳಿಗೆ ತಲಾ 1 ಕೋಟಿ ಆರ್ಥಿಕ ಸಹಾಯ ಮಾಡಬೇಕೆಂದು ದೀಪ್ಕೆ ಒತ್ತಾಯಿಸಿದ್ದಾರೆ.
ತಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಿರಲೆಂದು, ಪಾಲಕರು ಲಕ್ಷಾಂತರ ರೂಪಾಯಿಗಳನ್ನು ಹೂಡಿಕೆ ಮಾಡಿದ್ದರು. ಆದರೆ ಪರೀಕ್ಷಾ ಅಕ್ರಮದಿಂದ ಅವರ ಹಣ ಮತ್ತು ಮಕ್ಕಳ ಜೀವ ಎರಡನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಅವರು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಧಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ!
ನೀಟ್ ಪರೀಕ್ಷಾ ಅಕ್ರಮ ಇದು ವ್ಯವಸ್ಥೆಯ ವಿಫಲತೆಯನ್ನು ತೋರಿಸಿದ್ದು, ಹೀಗಾಗಿ ಇದರ ಜವಾಬ್ದಾರಿಯನ್ನು ಹೊತ್ತು ಕೇಂದ್ರ ಶಿಕ್ಷಣ ಸಚಿವರಾದ ಧಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂದು ಸಿಜೆಪಿ ಪಕ್ಷ ಕಳೆದೊಂದು ತಿಂಗಳಿನಿಂದ ಆಗ್ರಹಿಸಿದೆ ಎಂದು ದೀಪ್ಕೆ ತಿಳಿಸಿದ್ದಾರೆ.
ಜೂನ್ 21 ಕ್ಕೆ ನೀಟ್ ಮರು ಪರೀಕ್ಷೆ!
ಮೇ 3, 2026 ರಂದು ನಡೆದ ನೀಟ್ ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ, ಈ ಪರೀಕ್ಷೆಯನ್ನು ಜೂನ್ 21 ಕ್ಕೆ ಮತ್ತೊಂದು ಬಾರಿ ನಡೆಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮುಂದಾಗಿದೆ. ಮೇ 3 ರಂದು ನಡೆದ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಯಾದ ಸಿಬಿಐ ವಿಚಾರಣೆ ನಡೆಸುತ್ತಿದ್ದು, ಈಗಾಗಲೇ ಹಲವು ಅಧಿಕಾರಿಗಳು ಮತ್ತು ಶಿಕ್ಷಕರನ್ನು ವಶಕ್ಕೆ ಪಡೆದುಕೊಂಡಿದೆ, (ಏಜನ್ಸೀಸ್).