ನ್ಯೂಸ್

ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಸುರೇಖಾ ಸಿಕ್ರಿ ನಿಧನ

ನವದೆಹಲಿ : ರಾಷ್ಟ್ರ ಪ್ರಶಸ್ತಿ ವಿಜೇತ ಹಿರಿಯ ನಟಿ ಸುರೇಖಾ ಸಿಕ್ರಿ ಅವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. 75 ವರ್ಷ ವಯಸ್ಸಾಗಿದ್ದ ಸಿಕ್ರಿ ಅವರು ಬ್ರೇನ್​ ಸ್ಟ್ರೋಕ್​ನಿಂದಾದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ.

ನ್ಯಾಷನಲ್ ಸ್ಕೂಲ್ ಆಫ್​ ಡ್ರಾಮಾದಲ್ಲಿ ವ್ಯಾಸಂಗ ಮಾಡಿದ್ದ ಸುರೇಖಾ ಸಿಕ್ರಿ ಅವರು ಪ್ರತಿಭಾವಂತ ಕಲಾವಿದೆಯಾಗಿದ್ದರು. 1989 ರಲ್ಲಿ ಅವರಿ ಸಂಗೀತ್​ ನಾಟಕ್​ ಅಕಾಡೆಮಿ ಅವಾರ್ಡ್ ಕೂಡ ಸಂದಿತ್ತು. 2019 ರಲ್ಲಿ ಹಿಂದಿ ಚಿತ್ರ 'ಬದಾಯಿ ಹೋ'ನಲ್ಲಿನ ನಟನೆಗೆ ಅತ್ಯುತ್ತಮ ಪೋಷಕ ನಟಿಯ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಸಿಕ್ರಿ ಅವರಿಗೆ 1988 ರಲ್ಲಿ 'ತಮಸ್​' ಚಿತ್ರದ ಪಾತ್ರಕ್ಕೆ ಮತ್ತು 1995ರಲ್ಲಿ 'ಮಮ್ಮೋ' ಚಿತ್ರದ ಪಾತ್ರಕ್ಕೆ ಕೂಡ ರಾಷ್ಟ್ರಪ್ರಶಸ್ತಿಗಳು ಲಭಿಸಿದ್ದವು.

ಟೆಲಿವಿಷನ್​ ಸೀರಿಸ್ 'ಬಾಲಿಕಾ ವಧು'ವಿನಲ್ಲಿ ಅವರು ವಹಿಸಿದ್ದ 'ದಾದಿಸಾ' ಪಾತ್ರ ಅವರಿಗೆ ಬಹು ಜನಪ್ರಿಯತೆ ತಂದಿತ್ತು. ಕಡೆಯದಾಗಿ ನೆಟ್​ಫ್ಲಿಕ್ಸ್​ನ ಧಾರಾವಾಹಿ ಘೋಸ್ಟ್​ ಸ್ಟೋರೀಸ್​ನಲ್ಲಿ, ಸಿಕ್ರಿ ಅವರು ಪಾತ್ರ ವಹಿಸಿದ್ದರು.

ನೀನಾ ಗುಪ್ತಾ, ಮನೋಜ್ ಬಾಜಪೇಯಿ, ದಿಯಾ ಮಿರ್ಜಾ, ಪೂಜಾ ಭಟ್, ರಂದೀಪ್ ಹೂಡ, ದಿವ್ಯಾ ದತ್ತ, ಆಶಿಶ್ ವಿದ್ಯಾರ್ಥಿ, ಆಯುಷ್ಮಾನ್ ಖುರಾನ ಮುಂತಾದ ಬಾಲಿವುಡ್​ ನಟನಟಿಯರು ಸಿಕ್ರಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. (ಏಜೆನ್ಸೀಸ್)