ನ್ಯೂಸ್

ಸುನಿತಾ ವಿಲಿಯಮ್ಸ್​ಗೆ ಕಹಿ ಸುದ್ದಿ: ಭೂಮಿಗೆ ಮರಳುವುದು ಮತ್ತಷ್ಟು ವಿಳಂಬ, ನಾಸಾ ಕೊಟ್ಟ ಕಾರಣ ಹೀಗಿದೆ... Sunita Williams

Sunita Williams : ಬಹಳ ತಿಂಗಳಿನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಬಚ್ ವಿಲ್ಮೋರ್, ಭೂಮಿಗೆ ಮರಳುವುದು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.

ಇಬ್ಬರು ಗಗನಯಾತ್ರಿಗಳನ್ನು ಭೂಮಿಗೆ ಮರಳಿ ತರುವ ಕುರಿತು ಕೆಲವು ದಿನಗಳ ಹಿಂದೆ ನಾಸಾ ಪ್ರಮುಖ ಘೋಷಣೆ ಮಾಡಿತ್ತು. 2025ರ ಫೆಬ್ರವರಿ ತಿಂಗಳಲ್ಲಿ ಭೂಮಿಗೆ ಮರಳಿ ಕರೆತರುವುದಾಗಿ ಹೇಳಿತ್ತು. ಆದರೆ, ಮಂಗಳವಾರ (ಡಿ.17) ಮತ್ತೊಂದು ಪ್ರಮುಖ ಘೋಷಣೆ ಮಾಡಿರುವ ನಾಸಾ, ಇಬ್ಬರು ಗಗನಯಾತ್ರಿಗಳನ್ನು ಭೂಮಿಗೆ ಕರೆತರುವ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗಲಿದೆ ಎಂದಿದೆ.

ನಾಸಾ ಹೇಳಿಕೆಯ ಪ್ರಕಾರ ಮಾರ್ಚ್ ಅಂತ್ಯದವರೆಗೂ ಇಬ್ಬರು ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲೇ ಇರಬೇಕಾಗುತ್ತದೆ. ಈಗಾಗಲೇ ಸುನಿತಾ ವಿಲಿಯಮ್ಸ್​ ಆರೋಗ್ಯದ ಬಗ್ಗೆ ಸಾಕಷ್ಟು ಕಳವಳ ವ್ಯಕ್ತವಾಗಿದ್ದು, ಇದೀಗ ಮರಳುವುದು ಮತ್ತಷ್ಟು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಅವರ ಆರೋಗ್ಯ ಕಾಳಜಿಯ ಬಗ್ಗೆ ಗಂಭೀರ ಪ್ರಶ್ನೆ ಉದ್ಧವಿಸಿದೆ. ಯಾವುದೇ ಹಾನಿಯಿಲ್ಲದೇ ಆದಷ್ಟು ಬೇಗ ಸುನಿತಾ ವಿಲಿಯಮ್ಸ್​ ಭೂಮಿಗೆ ಮರಳಲಿ ಎಂದು ಅನೇಕರು ಪ್ರಾರ್ಥಿಸುತ್ತಿದ್ದಾರೆ.

ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬಚ್ ವಿಲ್ಮೋರ್ ಈ ವರ್ಷ ಜೂನ್ 6ರಂದು ಬೋಯಿಂಗ್ ಸ್ಟಾರ್​ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದರು. ಕೆಲಸ ಮುಗಿಸಿ ಒಂದೇ ವಾರದಲ್ಲಿ ಭೂಮಿಗೆ ಮರಳಬೇಕಿತ್ತು. ಆದಾಗ್ಯೂ, ಸ್ಟಾರ್‌ಲೈನರ್‌ನ ಪ್ರೊಪಲ್ಷನ್ ಸಿಸ್ಟಮ್‌ನ ಸಮಸ್ಯೆಯಿಂದಾಗಿ ಎಂಟು ದಿನಗಳ ಪ್ರವಾಸವನ್ನು ಹಲವಾರು ಬಾರಿ ವಿಸ್ತರಿಸಲಾಯಿತು. ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗದ ಕಾರಣ, ಗಗನಯಾತ್ರಿಗಳನ್ನು ಬಾಹ್ಯಾಕಾಶದಲ್ಲೇ ಬಿಟ್ಟು ಸ್ಟಾರ್​ಲೈನರ್ ಭೂಮಿಗೆ ಮರಳಿತು.

ಸುನೀತಾ ವಿಲಿಯಮ್ಸ್ ಮತ್ತು ಬಚ್ ವಿಲ್ಮೋರ್ ಅವರನ್ನು ಭೂಮಿಗೆ ಕರೆತರುವ ನಾಸಾದ ಪ್ರಯತ್ನಗಳು ಈವರೆಗೂ ವಿಫಲವಾಗಿವೆ. ನಾಸಾ ನೀಡಿರುವ ಸದ್ಯದ ವಿವರಗಳ ಪ್ರಕಾರ ಮುಂದಿನ ವರ್ಷ ಮಾರ್ಚ್ ನಂತರವಷ್ಟೇ ಗಗನಯಾತ್ರಿಗಳನ್ನು ಭೂಮಿಗೆ ಕರೆತರುವ ಪ್ರಕ್ರಿಯೆ ಆರಂಭವಾಗಲಿದೆ ಎಂಬುದು ಸ್ಪಷ್ಟವಾಗಿದೆ. (ಏಜೆನ್ಸೀಸ್)