ಹೈದರಾಬಾದ್: ತೆಲಂಗಾಣ ಸಚಿವೆ ಕೊಂಡಾ ಸುರೇಖಾ ವಿರುದ್ಧ ನಟ ನಾಗಾರ್ಜುನ(Nagarjuna) ಸಿವಿಲ್ ಮತ್ತು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ನಾಗ ಚೈತನ್ಯ ಮತ್ತು ಸಮಂತಾ ರುತ್ ಪ್ರಭು ವಿಚ್ಛೇದನದ ಕುರಿತು ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಈ ಮೊಕದ್ದಮೆ ಹೂಡಲಾಗಿದೆ.
ಇದನ್ನು ಓದಿ: ಶರ್ಟ್ ಧರಿಸುವುದನ್ನು ಮರೆತಿದ್ದೀರಾ ಎಂದು ಪ್ರಶ್ನಿಸಿದ ತಂದೆ; ಮಗಳು ಕೊಟ್ಟ ಉತ್ತರ ವೈರಲ್ | Alanna Panday
ಸೋಮವಾರ (ಅಕ್ಟೋಬರ್ 7) ನ್ಯಾಯಾಲಯದಲ್ಲಿ ಅಕ್ಕಿನೇನಿ ನಾಗಾರ್ಜುನ ಮಾನನಷ್ಟ ಮೊಕದ್ದಮೆಯ ವಿಚಾರಣೆ ನಡೆದಿತ್ತು. 100 ಕೋಟಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ನಾಗಾರ್ಜುನ ಮಂಗಳವಾರ (ಅಕ್ಟೋಬರ್ 8) ಸ್ಥಳೀಯ ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ.
ನಾಗಾರ್ಜುನ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ದೂರಿನಲ್ಲಿ, ಸಚಿವರ ಹೇಳಿಕೆಯಿಂದ ತಮ್ಮ ಕುಟುಂಬದ ಪ್ರತಿಷ್ಠೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ. ದೂರುದಾರರ ಕುಟುಂಬವು ದೂರುದಾರರಂತೆಯೇ ಸಾರ್ವಜನಿಕರ ದೃಷ್ಟಿಯಲ್ಲಿ ಅಪಾರ ಖ್ಯಾತಿ ಮತ್ತು ಗೌರವವನ್ನು ಹೊಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಳಿಗಾಗಿ ಅಕ್ಕಿನೇನಿ ಕುಟುಂಬವನ್ನು ವ್ಯಾಪಕವಾಗಿ ಪರಿಗಣಿಸಲಾಗಿದೆ. ತಲೆಮಾರುಗಳ ನಟರು ಮೆಚ್ಚುಗೆ ಮತ್ತು ಗೌರವವನ್ನು ಹೊಂದಿದ್ದಾರೆ. ಅಲ್ಲದೆ ನಾಗ ಚೈತನ್ಯ ಅವರ ಮಾಜಿ ಸಂಗಾತಿ ಸಮಂತಾ ಅವರು ಪ್ರಸಿದ್ಧ ನಟಿಯಾಗಿದ್ದು ತನ್ನದೇ ಆದ ರೀತಿಯಲ್ಲಿ ಖ್ಯಾತಿಯನ್ನು ಹೊಂದಿದ್ದಾರೆ ಎಂದು ಹೇಳಲಾಗಿದೆ.
ನಾಗಚೈತನ್ಯ ಮತ್ತು ನಟಿ ಸಮಂತಾ ರುತ್ ಪ್ರಭು 2017ರಲ್ಲಿ ವಿವಾಹವಾದರು. ವೈಯಕ್ತಿಕ ಭಿನ್ನಾಭಿಪ್ರಾಯಗಳಿ ಕಾರಣದಿಂದ 2021ರಲ್ಲಿ ವಿಚ್ಛೇದನ ಪಡೆದರು. ಇಬ್ಬರೂ ತಮ್ಮ ವೃತ್ತಿಯಲ್ಲಿ ಸಾರ್ವಜನಿಕವಾಗಿ ಗೌರವಾನ್ವಿತ ಇಮೇಜ್ ಉಳಿಸಿಕೊಂಡಿದ್ದಾರೆ. ಸುಳ್ಳು ಅಥವಾ ದುರುದ್ದೇಶಪೂರಿತ ಆರೋಪಗಳ ಮೂಲಕ ಅವರ ಖ್ಯಾತಿಯನ್ನು ಹಾಳುಮಾಡುವ ಯಾವುದೇ ಪ್ರಯತ್ನವು ವೃತ್ತಿಗೆ ಹಾನಿಯುಂಟುಮಾಡುತ್ತದೆ. ಇದು ವೈಯಕ್ತಿಕ ಮತ್ತು ವೃತ್ತಿ ಜೀವನ ಎರಡಕ್ಕೂ ಆಳವಾದ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ.
ಏನಿದು ಪ್ರಕರಣ: ನಾಗಾರ್ಜುನ ಅವರು ಸುರೇಖಾ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 356ರ ಅಡಿಯಲ್ಲಿ ದೂರು ದಾಖಲಿಸಿದ್ದರು. 2021ರಲ್ಲಿ ಸಮಂತಾ ಮತ್ತು ನಾಗನ ವಿಚ್ಛೇದನಕ್ಕೆ ಬಿಆರ್‌ಎಸ್ ನಾಯಕ ಕೆಟಿ ರಾಮರಾವ್ ಕಾರಣ ಎಂದು ಆರೋಪಿಸಿ ಸುರೇಖಾ ಕಳೆದ ವಾರ ವಿವಾದವನ್ನು ಎಬ್ಬಿಸಿದ್ದರು.(ಏಜೆನ್ಸೀಸ್)