ನ್ಯೂಸ್

ಬಹುಕೋಟಿ ವಂಚನೆ ಪ್ರಕರಣ; ಪ್ರಕರಣ ರದ್ದುಪಡಿಸುವಂತೆ ಕೋರಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ ಚಂದ್ರಬಾಬು ನಾಯ್ಡು

ಅಮರಾವತಿ: ಕೌಶಲ್ಯಭಿವೃದ್ದಿ ನಿಗಮದಲ್ಲಿನ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಸುಪ್ರೀಂ ಕೋರ್ಟ್​​ ಮೆಟ್ಟಿಲೇರಿದ್ಧಾರೆ.

ಪ್ರಕರಣ ರದ್ದು ಪಡಿಸುವ ಸಂಬಂಧ ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ಆಂಧ್ರಪ್ರದೇಶ ಹೈಕೋರ್ಟ್​ ಚಂದ್ರಬಾಬು ನಾಯ್ಡು ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿತ್ತು. ಹೈಕೋರ್ಟ್​ ಆದೇಶವನ್ನು ಪ್ರಶ್ನಿಸಿ ಚಂದ್ರಬಾಬು ನಾಯ್ಡು ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದಾರೆ.

ಜೈಲಿನಲ್ಲೇ ವಿಚಾರಣೆ

ಕೌಶಲ್ಯಭಿವೃದ್ದಿ ನಿಗಮದಲ್ಲಿನ ಬಹುಕೋಟಿ ಅಕ್ರಮಕ್ಕೆ ಸಂಬಂಧಿಸಿದಂತೆ ಆಂದ್ರಪ್ರದೇಶ ಸಿಐಡಿ ಚಂದ್ರಬಾಬು ನಾಯ್ಡು ಅವರನ್ನು ರಾಜಮಂಡ್ರಿಯಲ್ಲಿರುವ ರಾಜಮಹೇಂದ್ರವರಂ ಕೇಂದ್ರ ಕಾರಾಗೃಹದಲ್ಲಿ ವಿಚಾರಣೆಗೆ ಒಳಪಡಿಸಿದೆ. ಬೆಳಗ್ಗೆ 9 ಘಂಟೆಯಿಂದ ಸಂಜೆ 5ರ ವರೆಗೆ ವಿಚಾರಣೆಗೆ ಅವಕಾಶ ಕಲ್ಪಿಸಲಾಗಿದೆ.

ವಿಚಾರಣೆ ವೇಳೆ ಚಂದ್ರಬಾಬು ನಾಯ್ಡು ಪರ ವಕೀಲ ಡಿ. ಶ್ರೀನಿವಾಸ್​ ಉಪಸ್ಥಿತರಿರಲಿದ್ದು, ಫೋಟೋ ಹಾಗೂ ವಿಡಿಯೋಗಳನ್ನು ಬಹಿರಂಗಪಡಿಸದಂತೆ ನಿರ್ದೇಶಿಸಲಾಗಿದೆ. 12 ಅಧಿಕಾರಿಗಳನ್ನೊಳಗಂಡ ತನಿಖಾ ತಂಡವು ನಾಯ್ಡು ಅವರ ವಿಚಾರಣೆ ನಡೆಸುತ್ತಿದೆ.