ನವದೆಹಲಿ: ಸದಾ ಒಂದಿಲ್ಲೊಂದು ಕಾರಣಕ್ಕೆ ರಾಷ್ಟರಾಜಧಾನಿ ನವದೆಹಲಿಯ ಜೀವನಾಡಿ ಮೆಟ್ರೋ (Metro) ಸುದ್ದಿಯಲ್ಲಿರುತ್ತದೆ. ಪ್ರೇಮಿಗಳ ಅಸಭ್ಯ ವರ್ತನೆ, ರೀಲ್ಸ್ಗಾಗಿ ಹುಚ್ಚಾಟ ಹಾಗೂ ಸೀಟಿಗಾಗಿ ಪ್ರಯಾಣಿಕರು ಸದಾ ಕಿತ್ತಾಡುತ್ತಲೇ ಇರುವುದನ್ನು ನಾವು ನೋಡುತ್ತಲೇ ಇರುತ್ತೇವೆ. ಇದೀಗ ದೆಹಲಿ ಮೆಟ್ರೋದಲ್ಲಿ ಇಬ್ಬರು ಮಹಿಳೆಯರು ಕಿತ್ತಾಡಿಕೊಂಡಿರುವ ಘಟನೆ ನಡೆದಿದ್ದು, ಸದ್ಯ ಈ ವಿಡಿಯೋ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಯುವತಿಯೊಬ್ಬಳು ಮಹಿಳೆಗೆ ನನ್ನ ಹುಡುಗ ದೆಹಲಿಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದು, ಅವನಿಗೆ ಹೇಳಿ ನಿಮ್ಮನ್ನು ಒಳಗೆ ಹಾಕಿಸುತ್ತೇನೆ ಎಂದು ಯುವತಿ ಹೇಳುತ್ತಾಳೆ. ಇದಕ್ಕೆ ಪ್ರತಿಕ್ರಿಯಿಸುವ ಮಹಿಳೆ ಕರೆಸು ನೋಡುವ ಏನು ಮಾಡುತ್ತಾನೆಂದು ಅವಾಜ್ ಹಾಕಿದ್ದಾರೆ. ಇದಕ್ಕೆ ವಿಚಲಿಳಾದಂತೆ ಕಂಡ ಯುವತಿ ಏನು ಮಾಡದೆ ಸುಮ್ಮನೇ ಹೋಗುತ್ತಾಳೆ. ಆದರೆ, ಯಾವ ಕಾರಣಕ್ಕೆ ಇವರಿಬ್ಬರು ಕಿತ್ತಾಡಿಕೊಂಡಿದ್ಧಾರೆ ಎಂಬುದು ಈವರೆಗೂ ಸ್ಪಷ್ಟವಾಗಿಲ್ಲ.
ದೆಹಲಿ ಮೆಟ್ರೋದಲ್ಲಿ ಈ ರೀತಿ ಜಗಳವಾಗುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಅನೇಕ ಬಾರಿ ಈ ರೀತಿ ಗಲಾಟೆಗಳಾಗಿದ್ದು, ಕೆಲ ದಿನಗಳ ಹಿಂದೆ ಇಬ್ಬರು ಮಹಿಳೆಯರು ಕಿತ್ತಾಡಿಕೊಂಡು ತಳ್ಳಾಡಿಕೊಂಡಿದ್ದರು. ಇದಲ್ಲದೆ ಇಬ್ಬರು ವ್ಯಕ್ತಿಗಳು ಸೀಟಿನ ವಿಚಾರವಾಗಿ ಚಪ್ಪಲಿಯಲ್ಲಿ ಹೊಡೆದಾಡಿಕೊಂಡಿದ್ದರು ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಖತ್ ವೈರಲ್ ಆಗಿತ್ತು.