ನ್ಯೂಸ್

VIDEO| ಪತ್ನಿಯ ನೆನೆದು ಕಣ್ಣೀರಿಟ್ಟಿದ್ರು ಮುತ್ತಪ್ಪ ರೈ...!

ಬೆಂಗಳೂರು: ಕ್ಯಾನ್ಸರ್​ನಿಂದ ಬಳಲಿ ಚಿಕಿತ್ಸೆ ಫಲಕಾರಿಯಾಗದೇ ಇಂದು (ಶುಕ್ರವಾರ) ಬೆಳಗ್ಗೆ ಇಹಲೋಕ ತ್ಯಜಿಸಿದ ಮಾಜಿ ಭೂಗತ ದೊರೆ ಮುತ್ತಪ್ಪ ರೈ, ಕಷ್ಟದ ಸಮಯದಲ್ಲಿ ನನ್ನ ಪತ್ನಿ ನನ್ನೊಂದಿಗೆ ಇರಬೇಕಿತ್ತೆಂದು ಈ ಹಿಂದೆ ದಿಗ್ವಿಜಯ 24X7 ನ್ಯೂಸ್​ಗೆ ನೀಡಿದ್ದ ಸಂದರ್ಶನದಲ್ಲಿ ಭಾವುಕರಾಗಿ ಮಾತನಾಡಿದ್ದರು.

ಪತ್ನಿ ರೇಖಾ ಸುಮಾರು 35 ವರ್ಷಗಳಿಂದ ನನ್ನ ಜತೆಯಲ್ಲಿದ್ದರು. ನನಗೆ ಎರಡು ಮಕ್ಕಳನ್ನು ಕೊಟ್ಟು ನನ್ನನ್ನು ಮಗುವಿನಂತೆ ನೋಡಿಕೊಂಡಿದ್ದರು. ಕಷ್ಟ ಕಾಲದಲ್ಲಿ ಅಲ್ಲಿ-ಇಲ್ಲಿ ಓಡಾಡಿದ್ದರು. ಗುಂಡು ಬಿದ್ದಂತ ಸಂದರ್ಭದಲ್ಲಿಯೂ ಒಟ್ಟಿಗೆ ಇದ್ದು, ಚೆನ್ನಾಗಿ ನೋಡಿಕೊಂಡ ಪತ್ನಿಯನ್ನು ನಾನು ನೆನಪು ಮಾಡಿಕೊಳ್ಳಲೇ ಬೇಕು. ಈ ಸಮಯದಲ್ಲಿ ನನ್ನೊಂದಿಗೆ ಇರಬೇಕಿತ್ತೆಂದು ಕಣ್ಣೀರಿಟ್ಟಿದ್ದರು.

ಪತ್ನಿ ಅನಾರೋಗ್ಯಕ್ಕೀಡಾದಾಗ ಸಿಂಗಾಪುರ ಆಸ್ಪತ್ರೆಯಲ್ಲಿ ನಾನು ಮತ್ತು ನನ್ನಿಬ್ಬರು ಮಕ್ಕಳು ತುಂಬಾ ಕಷ್ಟಪಟ್ಟಿದ್ದೇವೆ. ಹಗಲಿನಿಂದಿಡಿದು ರಾತ್ರಿಯೆಲ್ಲಾ ಅವಳನ್ನು ನೋಡಿಕೊಂಡಿದ್ದೆವು. ಒಂದು ದಿನ ನಾನು ಬೆಳಗ್ಗೆ ಎದ್ದು ಹೋದಾಗ ನನ್ನ ನೋಡಿ ಕೈ ಎತ್ತಿ ವಿಶ್​ ಮಾಡಿದಳು. ನಾನೂ ಕೂಡ ವಿಶ್​ ಮಾಡಿದೆ. ಅಷ್ಟರಲ್ಲಿ ಇಬ್ಬರು ವೈದ್ಯರು ಬಂದರು. ಬಳಿಕ ನಾನು ಹೊರ ಬರುವಾಗ ಅವಳು ಎತ್ತಿದ ಕೈಗಳು ಹಾಗೇ ಕೆಳಗೆ ಹೋಯಿತು. ಹಾಗೆಯೇ ಅವಳ ಪ್ರಾಣವೂ ಹೋಯಿತು ಎಂದು ತಿಳಿಸಿದ್ದರು.

ನಾವು ವಿಮಾನದಲ್ಲಿ ಹೋಗುವಾಗ 4 ಮಂದಿ ಹೋದೆವು. ಬರುವಾಗ ಮೂರು ಮಂದಿ ಮಾತ್ರ ಬಂದೆವು. ನನ್ನ ಪತ್ನಿ ಹೆಣವಾಗಿ ಮರಳಿ ಬಂದಳು. ಅವಳ ಶರೀರ ಇರುವ ಪಟ್ಟಿಗೆಯನ್ನು ವಿಮಾನ ಕೆಳಗೆ ಲಗೇಜ್​ ಇಡುವ ಜಾಗದಲ್ಲಿಟ್ಟು ತರಲಾಯಿತು​. ಅದನ್ನು ನೋಡಿ ನನ್ನ ಮನಸ್ಸು ತಡೆಯಲಿಲ್ಲ. ತುಂಬಾ ನೋವಾಗುತ್ತಿತ್ತು ಎಂದು ರೈ ಭಾವುಕರಾಗಿದ್ದರು.

ಇನ್ನು ಸಾಕಷ್ಟು ವಿಚಾರಗಳ ಬಗ್ಗೆ ಮುತ್ತಪ್ಪ ರೈ ಅವರು ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದರು. ಅದರ ಸಂಪೂರ್ಣ ವಿಡಿಯೋವನ್ನು ನೀವಿಲ್ಲಿ ನೋಡಬಹುದಾಗಿದೆ.

ಮಾಜಿ ಭೂಗತ ಲೋಕದ ದೊರೆ, ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ (68) ಇಂದು ಬೆಳಗ್ಗಿನ ಜಾವ 2 ಗಂಟೆಗೆ ಕೊನೆಯುಸಿರೆಳೆದರು. ಕ್ಯಾನ್ಸರ್​ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಬಿಡದಿ ನಿವಾಸದಲ್ಲಿಂದು ಅವರ ಅಂತ್ಯಕ್ರಿಯೆ ನೇರವೇರಲಿದೆ. (ದಿಗ್ವಿಜಯ ನ್ಯೂಸ್​)