ನ್ಯೂಸ್

VIDEO| ಅಂಡರ್​ವರ್ಲ್ಡ್​ ಡಾನ್​ಗೆ ಲವ್ ಆಗಿದ್ಹೇಗೆ? ಪತ್ನಿ ಬಗ್ಗೆ 'ರೈ' ಅಂತರಾಳದ ಮಾತು!

ಬೆಂಗಳೂರು: ಮಾಜಿ ಭೂಗತ ದೊರೆ ಮುತ್ತಪ್ಪ ರೈ (68) ಕ್ಯಾನ್ಸರ್​ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಕೆಲ ದಿನಗಳ ಹಿಂದಷ್ಟೇ ದಿಗ್ವಿಜಯ 24X7 ನ್ಯೂಸ್​ಗೆ ಎಕ್ಸ್​ಕ್ಲೂಸಿವ್​ ಸಂದರ್ಶನ ನೀಡಿದ್ದ ರೈ ಅವರು ತಮ್ಮ ಲವ್​ ಸ್ಟೋರಿ ಸೇರಿದಂತೆ ಅನೇಕ ಸಂಗತಿಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು.

ಕಾಲೇಜು ದಿನಗಳ ಲವ್​ ಬಗ್ಗೆ ಮಾತನಾಡಿದ್ದ ರೈ, ಪತ್ನಿ ರೇಖಾ ಅವರ ಪ್ರೀತಿಯ ಬಲೆಯಲ್ಲಿ ಹೇಗೆ ಬಿದ್ದೆ ಎಂಬುದನ್ನು ವಿವರಿಸಿದ್ದರು. ಈಗಲೂ ಸ್ಮಾರ್ಟ್ ಆಗಿ​ ಇರುವ ನಾನು ಕಾಲೇಜು ದಿನಗಳಲ್ಲಿ ತುಂಬಾ ಸ್ಮಾರ್ಟ್​ ಆಗಿದ್ದೆ. ಮೈಸೂರು ಕಾಲೇಜಿನಲ್ಲಿ ನನಗೆ ಲವ್​ ಆಯಿತು. ಹುಡುಗಿ ಕೊಡಗಿನವರು. ನಿಮಗೆ ಗೊತ್ತು ಕೊಡಗಿನವರು ನೋಡಲು ಸುಂದರ ಹಾಗೂ ಧೈರ್ಯವಾಗಿರುತ್ತಾರೆ. ಏಕೆಂದರೆ ನಮ್ಮ ಕಾಲದಲ್ಲಿ ಲವ್​ ಮಾಡುವುದು ತುಂಬಾ ಕಷ್ಟವಾಗಿತ್ತು. ತುಂಬಾ ಧೈರ್ಯವಂತೆಯಾಗಿದ್ದರಿಂದ ಆ ಸಮಯದಲ್ಲಿ ಕೊಡಗಿ ಯುವತಿಯ ಜತೆ ಲವ್​ ಆಗಿದ್ದು ನಿಜವೆಂದಿದ್ದರು.

ಹುಡುಗಿಯ ಯಾವ ಗುಣ ನೋಡಿ ಲವ್​ ಆಯಿತು ಎಂಬ ಪ್ರಶ್ನೆಗೆ ಉತ್ತರಿಸಿದ ರೈ, ಲವ್​ ಆಗಲು ಅನೇಕ ಕಾರಣಗಳಿವೆ. ಅವರನ್ನು ನೋಡಿದ ಮೇಲೆ ನಾನು ಬಿಡಲಿಲ್ಲ. ನನ್ನನ್ನು ನೋಡಿದ ಮೇಲೆ ಅವರು ಬಿಡಲಿಲ್ಲ. ಪರಸ್ಪರ ಲವ್​ ಆಗಿ ಈಗ ಇಬ್ಬರು ಮದುವೆಯಾದೆವು ಎಂದು ಜೀನದ ಮಧುರ ಕ್ಷಣಗಳನ್ನು ಮೆಲುಕು ಹಾಕಿದ್ದರು.

ಇದೇ ವೇಳೆ ಬಹಳ ಕಾಡುವಂತ ಕ್ಷಣಗಳನ್ನು ನೆನಪು ಮಾಡಿಕೊಂಡಿದ್ದ ರೈ, ಪುತ್ತೂರಿನ ಬಾಲ್ಯದ ಕ್ಷಣಗಳು ಹೆಚ್ಚು ಇಷ್ಟವೆಂದರು. ಇಂದಿಗೂ ಬಾಲ್ಯದ ಸ್ನೇಹಿತರೂ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದ್ದರು. ಹೀಗೆ ಅನೇಕ ಕ್ಷಣಗಳನ್ನು ರೈ ಮೆಲುಕು ಹಾಕಿದ್ದು, ಅದರ ಸಂಪೂರ್ಣ ವಿಡಿಯೋವನ್ನು ನೀವಿಲ್ಲಿ ಕಾಣಬಹುದಾಗಿದೆ.

ಮಾಜಿ ಭೂಗತ ಲೋಕದ ದೊರೆ, ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ (68) ಇಂದು ಬೆಳಗ್ಗಿನ ಜಾವ 2 ಗಂಟೆಗೆ ಕೊನೆಯುಸಿರೆಳೆದರು. ಕ್ಯಾನ್ಸರ್​ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಬಿಡದಿ ನಿವಾಸದಲ್ಲಿಂದು ಅವರ ಅಂತ್ಯಕ್ರಿಯೆ ನೇರವೇರಲಿದೆ. (ದಿಗ್ವಿಜಯ ನ್ಯೂಸ್​)