ನ್ಯೂಸ್

ಸೌರಭ್​ ಹತ್ಯೆ ಆರೋಪಿ ಮುಸ್ಕಾನ್​ಗೆ ಕಾನೂನು ಓದುವ ಬಯಕೆ! ಈಗ್ಯಾಕೆ? ಎಂಬ ಪ್ರಶ್ನೆಗೆ ಕೇಳಿಬಂತು ಅಚ್ಚರಿ ಉತ್ತರ​... | Muskan

Muskan Rastogi: ಪ್ರಿಯಕರನ ಜತೆ ಪ್ರೇಮ ಸಲ್ಲಾಪ ನಡೆಸಲು ಅಡ್ಡಿಯಾಗಿದ್ದ ಪತಿಯನ್ನು ಭೀಕರವಾಗಿ ಹತ್ಯೆಗೈದ ಪಾಪಿ ಪತ್ನಿ ಮತ್ತು ಆಕೆಯ ಪ್ರಿಯಕರ, ಸೌರಭ್​ ರಜಪುತ್​ನನ್ನು 15 ತುಂಡುಗಳಾಗಿ ಕತ್ತರಿಸಿ, ದೇಹದ ಭಾಗಗಳನ್ನು ಡ್ರಮ್​ನಲ್ಲಿರಿಸಿ, ಅದನ್ನು ಸಿಮೆಂಟ್​ನಿಂದ ಮುಚ್ಚಿಟ್ಟ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಸದ್ಯ ಕೊಲೆ ಆರೋಪಿಗಳು ಮೀರತ್​ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಈ ಮಧ್ಯೆ ಮುಸ್ಕಾನ್​ ಜೈಲಧಿಕಾರಿಗಳ ಬಳಿ ತನ್ನ ಮನವಿಯನ್ನು ಸ್ವೀಕರಿಸುವಂತೆ ಕೋರಿರುವುದು ಇದೀಗ ಹಲವರಲ್ಲಿ ಅಚ್ಚರಿ ಮೂಡಿಸಿದೆ.

ಈ ವರ್ಷ ಮಾ.04ರಂದು ಪತಿ ಸೌರಭ್ ಮನೆಗೆ ಬಂದಾಗ ಊಟದಲ್ಲಿ ನಿದ್ರೆ ಮಾತ್ರ ಬೆರೆಸಿ ಕೊಟ್ಟಿದ್ದ ಮುಸ್ಕಾನ್​, ಕೆಲವು ಸಮಯದ ಬಳಿಕ ಗಂಡ ನಿದ್ರೆಗೆ ಜಾರಿದ ಬೆನ್ನಲ್ಲೇ ಪ್ರಿಯಕರ ಹೂಡಿದ್ದ ಸಂಚಿನಂತೆ ಚಾಕುವಿನಿಂದ ಮೂರು ಬಾರಿ ಇರಿದು ಕೊಂದಿದ್ದಳು. ಆ ನಂತರ ರೇಜರ್​ ಬ್ಲೇಡ್​ನಿಂದ ಪತಿಯ ಕತ್ತನ್ನು ಸೀಳಿ, ಸಾಹಿಲ್​ ಕುತ್ತಿಗೆಯನ್ನು ದೇಹದಿಂದ ಬೇರ್ಪಡಿಸಿದ್ದಳು. ಇಬ್ಬರೂ ಸೇರಿ ದೇಹವನ್ನು 15 ತುಂಡು ಮಾಡಿ, ಡ್ರಮ್​ನಲ್ಲಿರಿಸಿ, ಸಿಮೆಂಟ್​ನಿಂದ ಮುಚ್ಚಿಟ್ಟಿದ್ದಳು. ಈ ಸತ್ಯ ತನಿಖೆಯಲ್ಲಿ ಬಟಬಯಲಾಗಿದ್ದೇ ತಡ ಮುಸ್ಕಾನ್​ ವಿರುದ್ಧ ವ್ಯಾಪಕ ಆಕ್ರೋಶಗಳು ವ್ಯಕ್ತವಾಗಿತ್ತು. ಸದ್ಯ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ಮುಸ್ಕಾನ್​, ತಾನು ಕಾನೂನು ವಿದ್ಯಾಭ್ಯಾಸ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದಾಳೆ.

ಮುಸ್ಕಾನ್ ಪರ ಕೋರ್ಟ್​ನಲ್ಲಿ ವಾದಿಸಲು ಯಾರೊಬ್ಬರು ಮುಂದೆ ಬಾರದ ಹಿನ್ನೆಲೆ ಹಾಗೂ ಆಕೆಯ ಬಳಿ ಹಣವಿಲ್ಲದ ಕಾರಣ, ತಾನೇ ಕಾನೂನು ಓದಿಕೊಂಡು ನ್ಯಾಯಾಲಯದಲ್ಲಿ ತನ್ನ ಪರ ವಾದ ಮಂಡನೆ ಮಾಡಿಕೊಳ್ಳುವುದಾಗಿ ಹೇಳಿರುವುದು ಅಚ್ಚರಿ ಮೂಡಿಸಿದೆ. ಆಕೆ ಕಾನೂನು ಅಧ್ಯಯನ ಮಾಡಲು ಅವಕಾಶ ಮಾಡಿಕೊಡುವಂತೆ ಉತ್ತರ ಪ್ರದೇಶದ ಮೀರತ್ ಜೈಲಧಿಕಾರಿಗಳ ಬಳಿ ಅನುಮತಿ ಕೋರಿದ್ದಾಳೆ ಎಂದು ವರದಿಗಳು ಉಲ್ಲೇಖಿಸಿವೆ.

ಓದಿರುವುದೇ 8ನೇ ಕ್ಲಾಸ್​!

ಅಧಿಕಾರಿಗಳ ಪ್ರಕಾರ, ಮುಸ್ಕಾನ್ ರಸ್ತೋಗಿ ಹೆಚ್ಚು ಓದಿಲ್ಲ. ಆಕೆ ವಿದ್ಯಾಭ್ಯಾಸ 8ನೇ ತರಗತಿಗೆ ಮುಗಿದಿದೆ. ಹೀಗಿರುವಾಗ ಕಾನೂನು ಓದುವ ಮಾತು ಹೇಗೆ ಸಾಧ್ಯ? ಪ್ರಸ್ತುತ ಭಾರತದಲ್ಲಿ ಕಾನೂನು ಅಧ್ಯಯನ ಮಾಡಲು ಎಸ್ಸೆಸ್ಸೆಲ್ಸಿ ಪ್ರಮಾಣಪತ್ರ ಕಡ್ಡಾಯ ಅರ್ಹತೆ. ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (IGNOU) ಜೈಲು ವ್ಯವಸ್ಥೆಯೊಳಗೆ ಶೈಕ್ಷಣಿಕ ಕಾರ್ಯಕ್ರಮಗಳನ್ನು ಒದಗಿಸಲಾಗುತ್ತಿದೆ. ವರದಿಯ ಪ್ರಕಾರ, ಮುಸ್ಕಾನ್ ಎಲ್‌ಎಲ್‌ಬಿ ಕೋರ್ಸ್‌ಗೆ ದಾಖಲಾಗುವ ಮುನ್ನ 10ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಜೈಲು ಸೂಪರಿಂಟೆಂಡೆಂಟ್ ವಿರೇಶ್ ರಾಜ್ ಶರ್ಮಾ, “ಮುಸ್ಕಾನ್ ಜೈಲು ಸೇರಿದ ದಿನದಿಂದ ಆಕೆಯ ಕುಟುಂಬದಿಂದ ಯಾರೊಬ್ಬರೂ ನೋಡಲು ಬಂದಿಲ್ಲ. ಆದರೆ, ಸಾಹಿಲ್ ಅವರ ಅಜ್ಜಿ ಮತ್ತು ಸಹೋದರ ಆತನನ್ನು ಭೇಟಿ ಮಾಡಿದರು. ಈಗ, ಮುಸ್ಕಾನ್ ಕಾನೂನು ಶಿಕ್ಷಣವನ್ನು ಮುಂದುವರಿಸಲು ಆಸಕ್ತಿ ವ್ಯಕ್ತಪಡಿಸಿದ್ದಾರೆ ಮತ್ತು ನಾವು ಆ ಪ್ರಕ್ರಿಯೆ ಬಗ್ಗೆ ಯೋಚಿಸುತ್ತಿದ್ದೇವೆ. ಆಕೆ ಓದಲು ಬಯಸಿದರೆ, ಇಲ್ಲಿನ ಜೈಲಧಿಕಾರಿಗಳು ಅದಕ್ಕೆ ಅಗತ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಒದಗಿಸುತ್ತಾರೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).ಇದನ್ನೂ ಓದಿ: ಒಂದು ಸಣ್ಣ ಕಾರಣಕ್ಕೆ ಮನನೊಂದ ಬಾಲಕಿ ನೇಣಿಗೆ ಶರಣು! ಮಗಳ ಸಾವಿನ ಸುದ್ದಿ ಕೇಳಿ ಹೆತ್ತವರು ಕಂಗಾಲು | Student

ಏನಿದು ಪ್ರಕರಣ?

ಉತ್ತರಪ್ರದೇಶ​ ಮೀರತ್‌ನ ಸೌರಭ್ ರಜಪೂತ್ ದೇಹ ಡ್ರಮ್​ನಲ್ಲಿದೆ ಎಂಬುದನ್ನು ಪತ್ತೆಹಚ್ಚಿದ್ದೇ ಅವರ ಆರು ವರ್ಷದ ಮಗಳು. ತಾಯಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಕೊಲೆಗೈದು ತಂದೆಯನ್ನು ಡ್ರಮ್​ನಲ್ಲಿ ಸಿಮೆಂಟ್​ನಿಂದ ಮುಚ್ಚಿರುವುದನ್ನು ಸೌರಭ್ ಪುತ್ರಿ ಕಣ್ಣಾರೆ ನೋಡಿದ್ದಳು. ಈ ವೇಳೆ ಮನೆಯಲ್ಲಿ ಸೌರಭ್ ಕಾಣುತ್ತಿಲ್ಲ ಎಂದು ಅವರ ತಾಯಿ ಗೋಳಾಡಿದ್ದಾರೆ. ಮಗ ನಾಪತ್ತೆಯಾಗಿದ್ದಾನೆ ಆತನನ್ನು ಹುಡುಕಿಕೊಡಿ ಎಂದು ತಾಯಿ ಪೊಲೀಸರ ಮುಂದೆ ಕಣ್ಣೀರಿಟ್ಟಿದ್ದೇ ತಡ ಮೃತ ಸೌರಭ್ ಪುತ್ರಿ, ಅಪ್ಪ ಡ್ರಮ್​ನಲ್ಲಿ ಇದ್ದಾರೆ ಎಂದು ಸುಳಿವು ನೀಡಿದ್ದಳು. ಆದರೆ, ಆ ಕ್ಷಣಕ್ಕೆ ಇದು ಉಪಯೋಗವಾಗಲಿಲ್ಲ. ಕಾರಣ, ಬಾಲಕಿ ತಮಾಷೆ ಮಾಡುತ್ತಿದ್ದಾಳೆ ಎಂದು ಮನೆಯವರು ಅಂದುಕೊಂಡಿದ್ದರು. ಅಂತಿಮವಾಗಿ ಡ್ರಮ್​ನಲ್ಲಿದ್ದ ಸಿಮೆಂಟ್​ ಅನ್ನು ಹೊಡೆದಾಗ ಸೌರಭ್ ಮೃತದೇಹ ಪತ್ತೆಯಾಯಿತು.