ಮುಂಬೈ: ಕರೊನಾ ಲಾಕ್ಡೌನ್ ಚಾಲ್ತಿಯಲ್ಲಿದ್ದು ಡೋರ್ ಡೆಲಿವರಿ ಮೂಲಕವೇ ಅಗತ್ಯ ವಸ್ತುಗಳು ಎಲ್ಲರ ಮನೆ ತಲುಪುತ್ತಿದೆ. ಕರೊನಾ ಜಾತಿ, ಸಮುದಾಯ, ಧರ್ಮಗಳನ್ನು ನೋಡಿ ಹರಡುವುದಿಲ್ಲ ಎಂಬ ಸ್ಪಷ್ಟತೆಯನ್ನು ನೀಡಿದ್ದಾಗ್ಯೂ, ಮುಂಬೈನ ನಿವಾಸಿಯೊಬ್ಬರು ಡೆಲಿವರಿ ಬಾಯ್ ಮುಸ್ಲಿಂ ಎಂಬ ಕಾರಣಕ್ಕೆ ದಿನಸಿ ಸ್ವೀಕರಿಸದ ಕಾರಣ ಅರೆಸ್ಟ್ ಆಗಿದ್ದಾರೆ.
ಡೆಲಿವರಿ ಬಾಯ್ ಬರ್ಕತ್ ಪಟೇಲ್ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಆರೋಪ ಮಾಡಿದ್ದು, ಘಟನೆಗೆ ಸಂಬಂಧಿಸಿ ತಾನು ವಿವರಣೆ ನೀಡಿದ ವಿಡಿಯೋವನ್ನೂ ಅಪ್ಲೋಡ್ ಮಾಡಿಕೊಂಡಿದ್ದಾರೆ. ಇದು ವೈರಲ್ ಆದ ಕಾರಣ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ಗ್ರೋಫರ್ಸ್ ಎಂಬ ಗ್ರೋಸರಿ ಸರ್ವೀಸ್ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುವ ಬರ್ಕತ್ ಪಟೇಲ್(31) ಈ ವಿಡಿಯೋವನ್ನು ಚಿತ್ರೀಕರಿಸಿ, ಪೊಲೀಸರಿಗೆ ನೀಡಿದ್ದಾರೆ. ಅಲ್ಲದೆ, ಕಾಶ್ಮೀರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಂಗಳವಾರ ಬೆಳಗ್ಗೆ ಜಯಾ ಪಾರ್ಕ್ನಲ್ಲಿರುವ ಸುಪ್ರಿಯಾ ಚತುರ್ವೇದಿ ಎಂಬುವವರ ಮನೆಗೆ ಡೆಲಿವರಿ ನೀಡಲು ಹೋಗಿದ್ದಾಗ, ಇನ್ನೇನು ಆಕೆ ಈ ಪಾರ್ಸೆಲ್ ತೆಗೆದುಕೊಳ್ಳಬೇಕು ಎನ್ನುವ ಹೊತ್ತಿಗೆ ಅಲ್ಲಿಗೆ ಆಗಮಿಸಿದ ಆಕೆಯ ತಂದೆ ಗಜಾನನ ಚತುರ್ವೇದಿ ಆಕೆಯನ್ನು ತಡೆದಿದ್ದರು. ಯಾಕೆ ಎಂದು ಆಕೆ ಪ್ರಶ್ನಿಸಿದಾಗ ಗಜಾನನ ಅವರು, ಆತ ಮುಸ್ಲಿಂ. ಪಾರ್ಸೆಲ್ ತಗೋಬೇಡ ಎಂದಿದ್ದಾರೆ. ಹೀಗೆ ಹೇಳುತ್ತಿದ್ದಂತೆ ನಾನು ವಿಡಿಯೋ ಮಾಡಲಾರಂಭಿಸಿದೆ ಎಂದು ಬರ್ಕತ್ ಪಟೇಲ್ ಪೊಲೀಸರಿಗೆ ತಿಳಿಸಿದ್ದಾನೆ.
ಈ ಸಂಬಂಧ ಪೊಲೀಸರು ವಿಚಾರಣೆ ಆರಂಭಿಸಿದ್ದು, ಮುಸ್ಲಿಂ ಡೆಲಿವರಿ ಬಾಯ್ ಯಾರು ಎಂಬುದನ್ನು ಪತ್ತೆ ಹಚ್ಚಲು ಪ್ರಯತ್ನಿಸಿದ್ದಾರೆ. ಅಲ್ಲದೆ ಜನಾಂಗೀಯ ನಿಂದನೆ ಕಾರಣಕ್ಕೆ ಗಜಾನನ ಚತುರ್ವೇದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. (ಏಜೆನ್ಸೀಸ್)