ನ್ಯೂಸ್

18 ತಿಂಗಳ ಮಗುವಿನಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆ: ದೇಶದಲ್ಲಿ ಕಂಡುಬಂದ ಮೊದಲ ಪ್ರಕರಣ

ನವದೆಹಲಿ: ರಾಜಸ್ಥಾನದ ಬಿಕನೇರ್​ನಲ್ಲಿ 18 ತಿಂಗಳ ಮಗುವಿಗೆ ಅಪಾಯಕಾರಿ ಕಪ್ಪು ಶಿಲೀಂದ್ರ (ಬ್ಲ್ಯಾಕ್ ಫಂಗಸ್) ಸೋಂಕು ತಗುಲಿದೆ. ಮಕ್ಕಳಲ್ಲಿ ಬ್ಲ್ಯಾಕ್ ಫಂಗಸ್ ಕಂಡುಬಂದ ಮೊದಲ ಪ್ರಕರಣ ಇದಾಗಿದೆ.

ಕರೊನಾ ಪ್ರಕರಣಗಳ ಜತೆಗೆ ಭಾರತದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ಕೋವಿಡ್​ನಿಂದ ಗುಣವಾದವರಲ್ಲಿ ಬ್ಲ್ಯಾಕ್ ಫಂಗಸ್ ಕಂಡುಬರುತ್ತಿದ್ದು, ವೈದ್ಯಲೋಕಕ್ಕೆ ಹೊಸ ಸವಾಲಾಗಿ ಪರಿಣಮಿಸಿದೆ.

ಮ್ಯೂಕೋರ್ಮೈಕೋಸಿಸ್ ಎಂದು ಕರೆಯಲ್ಪಡುವ ಮೌಲ್ಡ್​ಗಳ ಗುಂಪಿನಿಂದ ಬ್ಲ್ಯಾಕ್​ ಫಂಗಸ್​ ಉಂಟಾಗುತ್ತದೆ. ಮೂಗಿನಿಂದ ಹರಡುವ ಈ ಫಂಗಸ್​ ಕಣ್ಣುಗಳು ಸೇರಿದಂತೆ ದೇಹದ ಇತರೆ ಭಾಗಗಳಿಗೂ ಹರಡುತ್ತದೆ.

ಕರೊನಾ, ಮದುಮೇಹ, ಕಿಡ್ನಿ ಸಮಸ್ಯೆ, ಲಿವರ್​ ಅಥವಾ ಹೃದಯ ಸಂಬಂಧಿ ಮತ್ತು ವಯೋಸಹಜ ಆರೋಗ್ಯ ಸಮಸ್ಯೆ ಹಾಗೂ ಸಂಧಿವಾತದಂತಹ ಸ್ವಯಂ-ಪ್ರತಿರಕ್ಷಣಾ ಕಾಯಿಲೆಗಳಿಗೆ ಔಷಧಗಳನ್ನು ಹೊಂದಿರುವ ಮತ್ತು ಇಮ್ಯುನಿಟಿ ಕಡಿಮೆ ಇರುವವರಲ್ಲಿ ಈ ಬ್ಲ್ಯಾಕ್​ ಫಂಗಸ್​ ಕಂಡುಬರುತ್ತದೆ.

ಇಂತಹ ರೋಗಿಗಳಿಗೆ ಪ್ರತಿರಕ್ಷೆಯ ಸ್ಟೀರಾಯ್ಡ್​ಗಳನ್ನು ನೀಡಿದ ಬಳಿಕ ಇಮ್ಯುನಿಟಿ ಮತ್ತಷ್ಟು ದುರ್ಬಲಗೊಳ್ಳುತ್ತದೆ. ಇದು ಶಿಲೀಂಧ್ರವನ್ನು ಹರಡಲು ಮತ್ತು ಅಭಿವೃದ್ಧಿ ಹೊಂದಲು ಅನುವು ಮಾಡಿಕೊಡುತ್ತದೆ. ಫಂಗಸ್​ ಕಣ್ಣಿಗೆ ಹರಡಿದರೆ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಇದೆ.

ಇದೀಗ 18 ತಿಂಗಳ ಮಗುವಿನಲ್ಲಿ ಬ್ಲ್ಯಾಕ್​ ಫಂಗಸ್​ ಕಂಡುಬಂದಿರುವುದು ಆಘಾತದ ಜತೆಗೆ ಆತಂಕವನ್ನು ಉಂಟುಮಾಡಿದೆ. ಮಗುವಿಗೆ ಚಿಕಿತ್ಸೆ ಮುಂದುವರಿದಿದೆ. (ಏಜೆನ್ಸೀಸ್​)