More

    ಹಳ್ಳಿಗಳ ಕಡೆಗೆ ಸಚಿವರ ನಡಿಗೆ: ಬಿಜೆಪಿ ಆಡಳಿತ ರಾಜ್ಯಗಳ ಸಚಿವರಿಗೆ ಸೂಚನೆ, ನಮೋ ಸರ್ಕಾರಕ್ಕೆ ಏಳು ವರ್ಷ

    ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಆಡಳಿತ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಏಳು ವರ್ಷ ಪೂರ್ಣಗೊಳ್ಳುತ್ತಿದೆ. ಈ ನಿಮಿತ್ತ ಕೇಂದ್ರ ಸಚಿವರು ಮತ್ತು ಬಿಜೆಪಿ ಆಡಳಿತ ಇರುವ ರಾಜ್ಯಗಳ ಸಚಿವರು ಕನಿಷ್ಠ ಎರಡು ಗ್ರಾಮಗಳನ್ನು ಸಂರ್ಪಸಬೇಕು ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೂಚನೆ ನೀಡಿದ್ದಾರೆ. ವಿವಿಧ ರಾಜ್ಯಗಳ ಘಟಕದ ಮುಖಂಡ ರೊಂದಿಗೆ ಸೋಮವಾರ ಸಭೆ ನಡೆಸಿದ ವೇಳೆ ನಡ್ಡಾ ಈ ನಿರ್ದೇಶನ ನೀಡಿದ್ದಾರೆ.

    ಪ್ರತಿಯೊಬ್ಬ ಸಚಿವ ಕನಿಷ್ಠ 2 ಗ್ರಾಮಗಳಿಗೆ ಖುದ್ದಾಗಿ ಭೇಟಿ ನೀಡಬೇಕು. ಸಾಧ್ಯವಾಗದೇ ಹೋದರೆ, ವಿಡಿಯೋ ಕಾನ್ಪರೆನ್ಸ್ ಮೂಲಕ ಗ್ರಾಮಸ್ಥರ ಜತೆಗೆ ಮಾತುಕತೆ ನಡೆಸಬೇಕು. ದೇಶಾದ್ಯಂತ ಒಟ್ಟು 1 ಲಕ್ಷ ಹಳ್ಳಿಗಳನ್ನು ಈ ಅವಧಿಯಲ್ಲಿ ತಲುಪಬೇಕು. ಕರೋನಾ ಸಂಕಷ್ಟದ ಈ ಅವಧಿಯಲ್ಲಿ ಜನರ ಬವಣೆಗಳನ್ನು ಅರಿತು ಅದಕ್ಕೆ ಸ್ಪಂದಿಸುವ ಕೆಲಸ ಮಾಡಬೇಕು. ಕೇಂದ್ರ ಮತ್ತು ಬಿಜೆಪಿ ಆಡಳಿತದ ರಾಜ್ಯಗಳ ಪ್ರತಿ ಸಚಿವರು ಕನಿಷ್ಠ 2 ಹಳ್ಳಿಗಳಿಗೆ ಭೇಟಿ ನೀಡಿ, ರೇಷನ್, ಸ್ಯಾನಿಟೈಸರ್, ಫೇಸ್ ಮಾಸ್ಕ್ ಮತ್ತು ಆಕ್ಸಿಮೀಟರ್​ಗಳನ್ನು ಮನೆ ಸದಸ್ಯರಿಗೆ ಹಂಚಬೇಕು. ಹಳ್ಳಿಗಳಿಗೆ ಭೇಟಿ ಕೊಡಲು ಸಾಧ್ಯವಾಗದ ಮುಖಂಡರು ಆನ್​ಲೈನ್ ಸಭೆ ಮೂಲಕ ತಮ್ಮ ಹಾಜರಿಯನ್ನು ಖಾತರಿಪಡಿಸಬೇಕು.

    ಇಮೇಜ್ ವೃದ್ಧಿಯ ಕ್ರಮ: 2014ರ ಮೇ 30ರಂದು ಅಧಿಕಾರಕ್ಕೆ ಬಂದಿದ್ದ ಎನ್​ಡಿಎ, 2019ರ ಚುನಾವಣೆಯಲ್ಲೂ ಅಭೂತಪೂರ್ವ ಗೆಲುವು ಸಾಧಿಸಿತ್ತು. ಕರೊನಾ ಎರಡನೇ ಅಲೆ ನಿರ್ವಹಣೆಯಲ್ಲಿನ ವೈಫಲ್ಯ ದೇಶಾದ್ಯಂತ ಬಿಜೆಪಿ ಇಮೇಜ್​ಗೆ ತೀವ್ರ ಹಾನಿಮಾಡಿರುವುದು ಬಿಜೆಪಿ ಮತ್ತು ಆರ್​ಎಸ್​ಎಸ್​ನ್ನು ಚಿಂತೆಗೀಡು ಮಾಡಿದೆ. ಕೆಲ ದಿನಗಳ ಹಿಂದೆ ಬಿಜೆಪಿ-ಆರ್​ಎಸ್​ಎಸ್ ಉನ್ನತ ನಾಯಕರ ಸಭೆಯಲ್ಲೂ ಇದು ಚರ್ಚೆಯಾಗಿತ್ತು.

    ರಕ್ತದಾನ ಶಿಬಿರಗಳ ಆಯೋಜನೆ: ಕರೊನಾ ಸಮಯದಲ್ಲಿ 7ನೇ ವರ್ಷದ ಸಂಭ್ರಮಾಚರಣೆಯಲ್ಲಿ ತೊಡಗುವುದು ಬೇಡ. ಇದು ಸಂಭ್ರಮ ಪಡುವ ಸಮಯವೂ ಅಲ್ಲ. ಹಾಗೆ ಮಾಡಿದಲ್ಲಿ ಅದು ನಮಗೇ ತಿರುಗು ಬಾಣವಾಗಲಿದೆ ಮತ್ತು ವಿನಾಕಾರಣ ಮಾಧ್ಯಮ ಚರ್ಚೆಗೆ ಆಹ್ವಾನ ಮಾಡಿದಂತೆ. ಹೀಗಾಗಿ, ಯಾರೂ ಸಾರ್ವಜನಿಕ ಸಂಭ್ರಮಾಚರಣೆ ಏರ್ಪಡಿಸಬಾರದು. ಬದಲು ಜನರಿಗೆ ನೆರವಾಗುವ ಕೆಲಸಗಳನ್ನು ಮಾಡಬೇಕು. ಇದೇ ಕಾರಣಕ್ಕೆ, ದೇಶಾದ್ಯಂತ ಪಕ್ಷದ ವತಿಯಿಂದ 50 ಸಾವಿರ ರಕ್ತದಾನ ಶಿಬಿರ ಏರ್ಪಡಿಸಲೂ ಉದ್ದೇಶಿಸಲಾಗಿದೆ. ಕರೊನಾ ಪೀಡಿತ ಕುಟುಂಬಗಳಿಗೆ ನೆರವಾಗಲು ಸಂಸದರು ಸಕ್ರಿಯವಾಗಿ ಕೆಲಸ ಮಾಡಬೇಕು ಎಂದು ನಡ್ಡಾ ಸೂಚಿಸಿದ್ದಾರೆ.

    •  ಕೇಂದ್ರ ಮತ್ತು ಬಿಜೆಪಿ ಆಡಳಿತದ ರಾಜ್ಯಗಳ ಸಚಿವರಿಂದ ಕನಿಷ್ಠ 2 ಗ್ರಾಮ ಭೇಟಿ
    •  ಕೋವಿಡ್ ಸಂಕಷ್ಟದಲ್ಲಿ ಜನರ ನೆರವಿಗೆ ನೆರವಾಗಲು ಸಂಸದರಿಗೂ ಸೂಚನೆ
    • ರಕ್ತದಾನ ಶಿಬಿರ ಆಯೋಜನೆ, ರೇಶನ್ ಮತ್ತು ಕೋವಿಡ್ ತಡೆಗೆ ನೆರವು ಒದಗಿಸಲು ಕ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts