ಹೊಸಕೋಟೆ: ಹೊಸಕೋಟೆ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸಚಿವ ಎಂ.ಟಿ.ಬಿ.ನಾಗರಾಜ್ ಸೋಮವಾರ ತಮ್ಮ ಉಮೇದುವಾರಿಕೆಯನ್ನು ಬೃಹತ್ ಬೈಕ್ ರ್‍ಯಾಲಿ ಹಾಗೂ ಸಾವಿರಾರು ಕಾರ್ಯಕರ್ತರೊಂದಿಗೆ ತೆರಳಿ ಸಲ್ಲಿಸಿದ್ದಾರೆ.
ಇನ್ನು ಕರ್ನಾಟಕದಲ್ಲಿ ಸಿರಿವಂತ ರಾಜಕಾರಣಿಗಳ ಪೈಕಿ ಒಬ್ಬರಾದ ಎಂಟಿಬಿ. ನಾಗರಾಜ್ ತಮ್ಮ ಆಸ್ತಿ ಮೌಲ್ಯವನ್ನು 1510 ಕೋಟಿ ಎಂದು ಘೋಷಿಸಿದ್ದಾರೆ. 2019ರಲ್ಲಿ ನಡೆದ ಉಪಚುನಾವಣೆ ವೇಳೆ ಅವರ ಆಸ್ತಿ ಮೌಲ್ಯವನ್ನು 1015 ಕೋಟಿ ರೂ ಎಂದು ಘೋಷಿಸಿದ್ದರು. ಕಳೆದ ಮೂರುವರೆ ವರ್ಷಗಳಲ್ಲಿ ಅವರ ಆಸ್ತಿ ಮೌಲ್ಯ 495 ಕೋಟಿ ರೂಪಾಯಿ ಏರಿಕೆ ಆಗಿದೆ.
ಸಚಿವ ಎಂಟಿಬಿ. ನಾಗರಾಜ್ ಅವರ ಹೆಸರಲ್ಲಿ 372 ಕೋಟಿ ರೂ ಮೌಲ್ಯದ ಚರಾಸ್ತಿ, 792 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ ಶಾಂತಮ್ಮ ನಾಗರಾಜ್ ಹೆಸರಲ್ಲಿ 163 ಕೋಟಿ ರೂ ಮೌಲ್ಯದ ಚರಾಸ್ತಿ ಹಾಗೂ 274 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.
ಎಂಟಿಬಿ ಹೆಸರಲ್ಲಿ ವಿವಿಧ ಬ್ಯಾಂಕುಗಳಲ್ಲಿ ಒಟ್ಟು 71 ಕೋಟಿ ರೂ ಸಾಲ ಇದ್ದು ಅವರ ಪತ್ನಿ ಶಾಂತಮ್ಮ ಹೆಸರಲ್ಲಿ 27 ಕೋಟಿ ರೂ ಸಾಲ ಇದೆ. ಇವರಿಬ್ಬರ ಒಟ್ಟು ಸಾಲದ ಮೌಲ್ಯ 98 ಕೋಟಿ ರೂ ಎಂದು ಘೋಷಿಸಿದ್ದಾರೆ.
ಸಚಿವ ಎಂಟಿಬಿ ನಾಗರಾಜ್ ಹೆಸರಲ್ಲಿ ಹ್ಯುಂಡೈ ಐ10, ಲ್ಯಾಂಡ್ ರೋವರ್ ಡಿಫೆಂಡರ್, ಮಹಿಂದ್ರಾ ಬೊಲೆರೋ ವಾಹನಗಳಿದ್ದು ಇದರ ಒಟ್ಟು ಮೌಲ್ಯ 1.72 ಕೋಟಿ ರೂ.
ಪತ್ನಿ ಶಾಂತಮ್ಮ ಹೆಸರಿನಲ್ಲಿ ಪೋರ್ಶ್ ಮತ್ತು ಇನ್ನೋವಾ ಕ್ರಿಸ್ಟಾ ಕಾರು ಇದ್ದು ಇದರ ಒಟ್ಟು ಮೌಲ್ಯ 1.33 ಕೋಟಿ ರೂ ಎಂದು ನಾಮಪತ್ರದ ಜೊತೆಗೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ತಿಳಿಸಲಾಗಿದೆ.
ಎಂ.ಟಿ.ಬಿ ನಾಗರಾಜ್ ಬಳಿ 64 ಲಕ್ಷ ರೂ ನಗದು ಇದ್ದು ಪತ್ನಿ ಶಾಂತಮ್ಮ ಬಳಿ 34 ಲಕ್ಷ ರೂ ನಗದು ಹೊಂದಿರುವುದಾಗಿ ತಿಳಿಸಲಾಗಿದೆ.
38 ಲಕ್ಷ ರೂ ಮೌಲ್ಯದ 996 ಗ್ರಾಂ ಚಿನ್ನ, 98 ಲಕ್ಷ ರೂ ಮೌಲ್ಯದ 78.28 cent ಡೈಮೆಂಡ್ , 2 ಲಕ್ಷ 20 ಸಾವಿರ ರೂ ಮೌಲ್ಯದ 100.71 ಗ್ರಾಂ ಪ್ಲಾಟಿನಂ , 1 ಕೋಟಿ 1 ಲಕ್ಷ ರೂ ಮೌಲ್ಯದ 214 ಕೆಜಿ 500 ಗ್ರಾಂ ಬೆಳ್ಳಿ. ಎಂಟಿಬಿ ಬಳಿ ಇರುವ ಒಟ್ಟು ಆಭರಣ ಮೌಲ್ಯ 2 ಕೋಟಿ 41 ಲಕ್ಷ ರೂ.
84 ಲಕ್ಷ ರೂ ಮೌಲ್ಯದ 2 ಕೆಜಿ 879 ಗ್ರಾಂ ಚಿನ್ನ, 63.5 ಲಕ್ಷ ರೂ ಮೌಲ್ಯದ 76.01 cent ಡೈಮಂಡ್, 2 ಲಕ್ಷ 63 ಸಾವಿರ ರೂ ಮೌಲ್ಯದ ಪ 74.550 ಗ್ರಾಂ ಪ್ಲಾಟಿನಂ, 13 ಲಕ್ಷ 34 ಸಾವಿರ ರೂ ಮೌಲ್ಯದ 26 ಕೆಜಿ 483 ಗ್ರಾಂ ಬೆಳ್ಳಿ. ಆಭರಣದ ಒಟ್ಟು ಮೌಲ್ಯ 1 ಕೋಟಿ 64 ಲಕ್ಷ ರೂ ಮೌಲ್ಯದ ಆಭರಣ ತಮ್ಮ ಪತ್ನಿ ಶಾಂತಮ್ಮ ಬಳಿ ಇದೆ ಎಂದು ಎಂ.ಟಿ.ಬಿ.ನಾಗರಾಜ್ ತಮ್ಮ ನಾಮಪತ್ರದಲ್ಲಿ ಉಲ್ಲೇಖಿಸಿದ್ಧಾರೆ.