ತಮಿಳುನಾಡು: 'ಸೀತಾ ರಾಮಂ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಮೃಣಾಲ್ ಠಾಕೂರ್ ಇದೀಗ ತಮಿಳು ಚಿತ್ರರಂಗಕ್ಕೆ ಹೊಸ ಸಿನಿಮಾದ ಮುಖೇನ ಎಂಟ್ರಿ ಕೊಡುತ್ತಿದ್ದು, ಇದು ಯಾವ ಸಿನಿಮಾ? ಚಿತ್ರದ ನಾಯಕ ಯಾರು? ಎಂಬ ಹಲವು ಪ್ರಶ್ನೆಗಳು ನಟಿಯ ಅಭಿಮಾನಿಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಮೃಣಾಲ್ ಠಾಕೂರ್ ಅಭಿನಯಿಸಿದ 'ಸೀತಾ ರಾಮಂ' ಚಿತ್ರವು ಟಾಲಿವುಡ್ನಲ್ಲಿ ಬ್ಲಾಕ್ಬಸ್ಟರ್ ಲವ್ ಸ್ಟೋರಿ ಚಿತ್ರವಾಗಿ ಹೊರಹೊಮ್ಮಿತು. ಈ ಸಿನಿಮಾದ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡ ನಟಿಗೆ ಇದೀಗ ಮತ್ತೊಂದು ಚಿತ್ರದ ಮುಖೇನ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಅವಕಾಶ ಒದಗಿ ಬಂದಿದೆ.
ಎ.ಆರ್. ಮುರುಗದಾಸ್ ನಿರ್ದೇಶನದಲ್ಲಿ ಮೂಡಿಬರಲು ಸಜ್ಜಾಗಿರುವ ಚಿತ್ರದಲ್ಲಿ, ಮೃಣಾಲ್ ನಾಯಕಿಯಾಗಿ ನಟಿಸಲಿದ್ದು, ಶಿವಕಾರ್ತಿಕೇಯನ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಇತ್ತೀಚಿನ ವರದಿಗಳು ಉಲ್ಲೇಖಿಸಿವೆ. ಸದ್ಯ ವದಂತಿಗಳು, ವರದಿಗಳು ನಿಜವಾಗಿದ್ದು, ಈ ಸಿನಿಮಾದಲ್ಲಿ ಮೃಣಾಲ್ ಅಭಿನಯಿಸಲಿದ್ದಾರೆ ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಕೂಡ ಹೊರಬಿದ್ದಿದೆ.
ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡಲಿದ್ದು, ಶಿವಕಾರ್ತಿಕೇಯನ್-ಅನಿರುದ್ಧ್ ಕಾಂಬಿನೇಷನ್ ಮತ್ತೊಮ್ಮೆ ಸಿನಿಪ್ರೇಕ್ಷಕರನ್ನು ಮನರಂಜಿಸಲು ಸಜ್ಜಾಗಿದೆ. ಇದೀಗ ತಮ್ಮ ಚೊಚ್ಚಲ ತಮಿಳು ಚಿತ್ರದೊಂದಿಗೆ ಟಾಲಿವುಡ್ಗೆ ಎಂಟ್ರಿ ಕೊಡಲಿರುವ ಮೃಣಾಲ್, ಮತ್ತೊಮ್ಮೆ ಸಿನಿಪ್ರೇಕ್ಷಕರ ಮನವನ್ನು ಗೆಲ್ಲುತ್ತಾರೆ ಎಂಬುದನ್ನು ಕಾದುನೋಡಬೇಕು,(ಏಜೆನ್ಸೀಸ್).