ತಂದೆಗಿದ್ದದ್ದು ಒಂದೇ ಕಾಳಜಿ...! ಮಗನ ಒಂದು ವರ್ಷದ ಶೈಕ್ಷಣಿಕ ವರ್ಷ ಹಾಳಾಗಬಾರದು. ಇದಕ್ಕಾಗಿ ಆತನ ಪರೀಕ್ಷೆ ಬರೆಯಲೇ ಬೇಕು. ಆದರೆ, ಕೋವಿಡ್19ನಿಂದಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯೇ ಇಲ್ಲದಿರುವಾಗ ಹಾಜರಾಗುವುದಾದರೂ ಹೇಗೆ?
ಮಧ್ಯಪ್ರದೇಶದ ಧಾರ್ ಜಿಲ್ಲೆಯ ಮನವಾರ್ ತಾಲೂಕಿನ ಬೇಡಿಪುರ ಗ್ರಾಮದ ನಿವಾಸಿ ಶೋಭ್ರಾಮ್ ಮಗನನ್ನು ತನ್ನೂರಿನಿಂದ 105 ಕಿ.ಮೀ. ದೂರದಲ್ಲಿದ್ದ ಜಿಲ್ಲಾಕೇಂದ್ರವಾದ ಧಾರ್ಗೆ ಸೈಕಲ್ನಲ್ಲಿಯೇ ಕರೆತಂದಿದ್ದಾರೆ. ಈ ದೂರವನ್ನು ಅವರು ಎರಡು ದಿನಗಳಲ್ಲಿ ಕ್ರಮಿಸಿದ್ದಾರೆ.
ಊರಿನಿಂದ ಹೊರಟು ರಾತ್ರಿ ಮನ್ವಾರ್ ಪಟ್ಟಣದಲ್ಲಿ ತಂಗಿದ್ದರು. ಅಲ್ಲಿಂದ ಬೆಳಗ್ಗೆ ಸೈಕಲ್ ತುಳಿಯುವುದನ್ನು ಮುಂದುವರಿಸಿದ ತಂದೆ, ಪರೀಕ್ಷೆ ಆರಂಭವಾಗುವ ಹೊತ್ತಿಗೆ ಎಕ್ಸಾಂ ಸೆಂಟರ್ ತಲುಪಿಕೊಂಡಿದ್ದಾರೆ.
ಊರಿನಿಂದ ಬರೋಕೆ ಬಸ್ಗಳಿಲ್ಲ. ಬೇರೆ ವಾಹನಗಳಲ್ಲಿ ಬರಲು ದುಡ್ಡಿರಲಿಲ್ಲ. ಹೀಗಾಗಿ ಮಗನನ್ನು ಸೈಕಲ್ನಲ್ಲಿ ಕರೆ ತಂದಿದ್ದೇನೆ ಎನ್ನುತ್ತಾರೆ 38 ವರ್ಷದ ಶೋಭ್ರಾಮ್. ನನಗೆ ಶಿಕ್ಷಣದ ಮಹತ್ವದ ಅರಿವಿದೆ. ಆತನ ಒಂದು ಹಾಳಾಗುವುದು ಬೇಡ ಎಂಬುದು ನನ್ನ ಉದ್ದೇಶ. ಆದ್ದರಿಂದ ಅಷ್ಟು ದೂರದಿಂದ ಸೈಕಲ್ ತುಳಿದುಕೊಂಡು ಬಂದಿದ್ದೇನೆ ಎಂದು ಹೇಳುತ್ತಾರೆ.
ಬೇರಾರಿಂದಲೂ ಸಹಾಯ ಸಿಗಲಿಲ್ಲ ಎಂದು ನೋಮದು ನುಡಿಯುವ ಶೋಭ್ರಾಮ್, ಪರೀಕ್ಷೆ ಮುಗಿಯುವ ತನಕ 2-3 ದಿನ ತಂಗಬೇಕಾದ ಅನಿವಾರ್ಯತೆ ಇರುವುದರಿಂದ ಊಟವನ್ನು ಊರಿನಿಂದಲೇ ಕಟ್ಟಿಕೊಂಡು ಬಂದಿದ್ದಾರೆ. ತಂದೆ ತನಗಾಗಿ ಇಷ್ಟು ಕಷ್ಟಪಟ್ಟಿದ್ದನ್ನು ಹೇಳಿಕೊಳ್ಳುವ ಮಗ ಆಶೀಷ್, ಈ ಬಾರಿ 10ನೇ ತರಗತಿಯನ್ನು ಪೂರಕ ಪರೀಕ್ಷೆಯಲ್ಲಿ ಖಂಡಿತ ಪಾಸ್ ಮಾಡಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾನೆ.