ಭೋಪಾಲ್: ಆಘಾತಕಾರಿ ಘಟನೆಯೊಂದರಲ್ಲಿ ವ್ಯಕ್ತಿಯೋರ್ವ ತನ್ನ ಇಬ್ಬರು ಮಕ್ಕಳನ್ನು ಉಲ್ಟಾ ನೇತು ಹಾಕಿ ಮನಬಂದಂತೆ ಥಳಿಸಿ ವಿಡಿಯೋ ಮಾಡಿ ವಿಕೃತಿ ಮೆರೆದಿರುವ ಘಟನೆ ಮಧ್ಯಪ್ರದೇಶದ ಅಶೋಕ್ನಗರ ಜಿಲ್ಲೆಯ ಚಂದೇರಿ ಗ್ರಾಮದಲ್ಲಿ ನಡೆದಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ 4-5 ವರ್ಷ ಆಸುಪಾಸಿನ ಇಬ್ಬರು ಮಕ್ಕಳನ್ನು ಉಲ್ಟಾ ನೇತು ಹಾಕಿರುವ ವ್ಯಕ್ತಿ ಅವರನ್ನು ಮನಬಂದಂತೆ ಥಳಿಸುತ್ತಿದ್ದು, ಬಳಿಕ ಅದರ ವಿಡಿಯೋವನ್ನು ತನ್ನಿಂದ ಪ್ತತ್ಯೇಕವಾಗಿ ವಾಸಿಸುತ್ತಿರುವ ಪತ್ನಿಗೆ ಕಳುಹಿಸುತ್ತಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಅಶೋಕ್ನಗರ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಭಗವಾನ್ ದಾಸ್ ಎಂಬ ವ್ಯಕ್ತಿಯು ರಾಧಾ ಎಂಬುವವರನ್ನು ಮದುವೆಯಾಗಿದ್ದ. ರಾಧಾಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದು, ಭಗವಾನ್ ದಾಸ್ ಎರಡನೇ ಪತಿ ಎಂದು ತಿಳಿದು ಬಂದಿದೆ. ಭಗವಾನ್ ದಾಸ್ನಿಂದ ರಾಧಾ ಕಳೆದ ಒಂದು ವರ್ಷದಿಂದ ದೂರ ಉಳಿದಿದ್ದು, ಮಕ್ಕಳನ್ನು ಪತಿಯ ಬಳಿ ಬಿಟ್ಟು ಹೋಗಿದ್ದಳು.
ಯಾವ ಕಾರಣಕ್ಕೆ ಮಕ್ಕಳ ಮೇಲೆ ಈ ರೀತಿ ಹಲ್ಲೆ ಮಾಡಲಾಗಿದೆ ಎಂಬುದು ತಿಳಿದು ಬಂದಿಲ್ಲ. ದೂರವಾಗಿರುವ ಹೆಂಡತಿಯನ್ನು ಹತ್ತಿರ ಮಾಡಿಕೊಳ್ಳಲು ಈ ರೀತಿ ಮಾಡಿದ್ದಾನಾ ಎಂಬುದು ತಿಳಿದು ಬಂದಿಲ್ಲ. ವಿಡಿಯೋವನ್ನು ನೋಡುತ್ತಿದ್ದಂತೆ ಪತ್ನಿ ಪತಿಯ ವಿರುದ್ಧ ದೂರು ದಾಖಲಿಸಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ನಡೆಯುತ್ತಿದ್ದು, ಹೇಳಿಕೆಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.