ನ್ಯೂಸ್

ಉಸಿರುಗಟ್ಟಿಯೇ ಬಹುತೇಕ ಜನರ ಸಾವು; ಮೃತರಲ್ಲಿ ಮಹಿಳೆಯರೇ ಅಧಿಕ

ಹಾಥರಸ್: ಸಮತಟ್ಟಾಗಿರದ ರಸ್ತೆಯಲ್ಲಿ ನೂರಾರು ಜನರು ಸಾಗುವಾಗ ಸಂಭವಿಸಿದ ಕಾಲ್ತುಳಿತದ ವೇಳೆ ಒಬ್ಬರ ಮೇಲೊಬ್ಬರು ಬಿದ್ದಿದ್ದರಿಂದ ಬಹಳಷ್ಟು ಭಕ್ತರು ಉಸಿರುಗಟ್ಟಿ ಸಾವಿಗೀಡಾದರು ಎಂಬುದು ಹಾಥರಸ್ ದುರಂತದ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಫುಲ್ರಾಯ್ ಗ್ರಾಮದಲ್ಲಿ ಧಾರ್ವಿುಕ ಸತ್ಸಂಗದ ವೇಳೆ ನಡೆದ ಭೀಕರ ದುರಂತ ಸ್ಥಳದಲ್ಲಿ ಹಾಗೂ ಶವ ಮತ್ತು ಗಾಯಾಳುಗಳನ್ನು ಸಾಗಿಸಿದ ಆಸ್ಪತ್ರೆಗಳ ಬಳಿ ಸಂಬಂಧಿಕರ ಗೋಳು ಮುಗಿಲು ಮುಟ್ಟಿದ್ದು ನೋಡುಗರ ಕರುಳನ್ನು ಹಿಂಡುವಂತಿತ್ತು.

‘ಅಲ್ಲಿ ಭೋಲೇ ಬಾಬಾನ ಸತ್ಸಂಗ ನಡೆಯುತ್ತಿತ್ತು. ಸತ್ಸಂಗ ಮುಗಿದ ತಕ್ಷಣವೇ ಜನರು ಅಲ್ಲಿಂದ ವಾಪಸಾಗಲು ಆರಂಭಿಸಿದರು. ರಸ್ತೆ ತೀರಾ ಹದಗೆಟ್ಟಿದ್ದು ಸಮತಟ್ಟಾಗಿ ಇಲ್ಲದ್ದರಿಂದ ಜನರು ಒಬ್ಬರ ಮೇಲೊಬ್ಬರು ಬಿದ್ದು ಕಾಲ್ತುಳಿತ ಸಂಭವಿಸಿತು’ ಎಂದು ಪ್ರತ್ಯಕ್ಷದರ್ಶಿ ಶಕುಂತಲಾ ದೇವಿ ಎನ್ನುವವರು ಹೇಳಿದ್ದಾರೆ.

15 ವರ್ಷದ ಮಗಳು ಕಾಣೆ: ದುರಂತದ ಸಂದರ್ಭದಲ್ಲಿ ಅನೇಕ ಜನರ ಬಂಧುಗಳು ಪ್ರಾಣ ಕಳೆದುಕೊಂಡಿದ್ದು ಇನ್ನು ಹಲವರ ಸಂಬಂಧಿಕರು ನಾಪತ್ತೆಯಾಗಿದ್ದು ಅವರನ್ನು ಹುಡುಕಲು ಪರದಾಡುತ್ತಿದ್ದಾರೆ. ತನ್ನ 15 ವರ್ಷದ ಮಗಳು ನಾಪತ್ತೆಯಾಗಿದ್ದಾಳೆ ಎಂದು ಆಗ್ರಾದಿಂದ ಸತ್ಸಂಗಕ್ಕೆ ಆಗಮಿಸಿದ್ದ ತಾಯಿಯೊಬ್ಬಳು ಗೋಳಾಡುತ್ತಿದ್ದಾಳೆ. ಆದರೆ, ತಮಗೆ ಏನೂ ಗೊತ್ತಿಲ್ಲವೆಂದು ಪೊಲೀಸರು ಹೇಳುತ್ತಿದ್ದಾರೆಂದು ಇನ್ನೊಬ್ಬ ಪ್ರತ್ಯಕ್ಷದರ್ಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಿಳೆಯರೇ ಅಧಿಕ: ಭೋಲೇ ಬಾಬಾನ ಸತ್ಸಂಗದಲ್ಲಿ ಮಹಿಳೆಯರೇ ಹೆಚ್ಚಾಗಿ ಪಾಲ್ಗೊಳ್ಳುತ್ತಾರೆ. ಹೀಗಾಗಿ, ಮಂಗಳವಾರ ಸಂಭವಿಸಿದ ಅನಾಹುತದಲ್ಲಿ ಮೃತಪಟ್ಟವರಲ್ಲಿ ಸಹಜವಾಗಿಯೇ ಮಹಿಳೆಯರು ಅಧಿಕವಿದ್ದರು. ಮೃತರ ಸಂಬಂಧಿಕರನ್ನು ಪತ್ತೆ ಮಾಡಲು ಆದ್ಯತೆ ನೀಡುತ್ತಿರುವುದಾಗಿ ಆಗ್ರಾ ವಲಯದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕಿ (ಎಡಿಜಿ) ಅನುಪಮಾ ಕುಲಶ್ರೇಷ್ಠ ಹೇಳಿದ್ದಾರೆ. ಇದೊಂದು ದುರದೃಷ್ಟಕರ ಘಟನೆ ಎಂದು ಹಾಥರಸ್​ನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದ ಅನುಪಮಾ ಹೇಳಿದರು.

ಒಬ್ಬನೇ ವೈದ್ಯ: ನೂರರಿಂದ ಇನ್ನೂರರಷ್ಟು ಗಾಯಾಳುಗಳು ಬಂದಿದ್ದು ಆಸ್ಪತ್ರೆಯಲ್ಲೇ ಒಬ್ಬರೇ ವೈದ್ಯರಿರುವುದು ಚಿಕಿತ್ಸೆ ಒದಗಿಸುವುದು ಸವಾಲಾಗಿದೆ. ಆಮ್ಲಜನಕದ ವ್ಯವಸ್ಥೆಯೂ ಆಸ್ಪತ್ರೆಯಲ್ಲಿ ಇಲ್ಲ. ಕೆಲವರು ಇನ್ನೂ ಉಸಿರಾಡುತ್ತಿದ್ದು ಚಿಕಿತ್ಸೆಗೆ ಸೂಕ್ತ ವ್ಯವಸ್ಥೆಗಳಿಲ್ಲ ಎಂದು ಯುವಕನೊಬ್ಬ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಹೆಣಗಳ ರಾಶಿ ಮುಂದೆ ಆಕ್ರಂದನ: ಹಾಥರಸ್​ನ ಸಿಕಂದರ ರಾವ್ ಟ್ರಾಮಾ ಕೇಂದ್ರದ ಮುಂದೆ ಸಂತ್ರಸ್ತರ ಹೆಣಗಳನ್ನು ರಾಶಿ ಹಾಕಲಾಗಿದ್ದು ಅದರ ಮುಂದೆ ಸಂಬಂಧಿಕರ ಗೋಳಾಟ, ಆಕ್ರಂದನ ಎಂಥವರದ್ದೇ ಕರುಳನ್ನು ಕಿವಿಚುವಂತಿತ್ತು. ಒಬ್ಬರಿಗೊಬ್ಬರು ಪರಸ್ಪರರನ್ನು ಸಂತೈಸುತ್ತಿರುವ ದೃಶ್ಯ ದುರಂತದ ನಡುವೆಯೂ ಮಾನವತೆಗೆ ಹಿಡಿದ ಕನ್ನಡಿಯಂತಿತ್ತು. ಟ್ರಕ್ಕೊಂದರಲ್ಲಿ ಐದಾರು ಹೆಣಗಳ ಜತೆ ಕುಳಿತಿದ್ದ ಮಹಿಳೆಯೊಬ್ಬಳು ತನ್ನ ಮಗಳ ದೇಹವನ್ನು ಕೆಳಗಿಳಿಸಲು ನೆರವಾಗುವಂತೆ ಅಂಗಲಾಚುತ್ತಿದ್ದುದು ಕಂಡು ಬಂತು. ಗಾಯಾಳುಗಳಲ್ಲಿ ಅನೇಕರಿಗೆ ಆಸ್ಪತ್ರೆಯೊಳಗೆ ಸ್ಥಳ ಸಾಲದೆ ಪ್ರವೇಶ ದ್ವಾರದಲ್ಲೇ ಬಿದ್ದು ನರಳಾಡುತ್ತಿದ್ದುದು ಕೂಡ ಕಾಣಿಸಿತು.

ಮುಖ್ಯಮಂತ್ರಿಗಳ ಸಂತಾಪ: ಹಲವು ರಾಜಕೀಯ ಪಕ್ಷಗಳ ಮುಖಂಡರು, ನಾನಾ ರಾಜ್ಯಗಳ ಸಿಎಂಗಳು ಹಾಥರಸ್ ದುರಂತಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ. ಮಮತಾ ಬ್ಯಾನರ್ಜಿ (ಬಂಗಾಳ), ಚಂಪಾಯ್ ಸೊರೇನ್ (ಝಾರ್ಖಂಡ್), ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಬಿಜೆಡಿ ನಾಯಕ ನವೀನ್ ಪಟ್ನಾಯಕ್, ಬಹುಜನ ಸಮಾಜ ಪಕ್ಷದ (ಬಿಎಸ್​ಪಿ) ನಾಯಕಿ ಮಾಯಾವತಿ ಮೊದಲಾದವರು ಶೋಕ ವ್ಯಕ್ತಪಡಿಸಿದವರಲ್ಲಿ ಸೇರಿದ್ದಾರೆ.

ಶವಗಳ ರಾಶಿ ಕಂಡು ಹೃದಯಾಘಾತ ಪೊಲೀಸ್ ಕಾನ್​ಸ್ಟೆಬಲ್ ಸಾವು: ಹಾಥರಸ್ ದುರಂತದಲ್ಲಿ ಮಡಿದವರ ಶವಗಳನ್ನು ಇಟಾ ವೈದ್ಯಕೀಯ ಕಾಲೇಜ್ ಬಳಿ ರಾಶಿ ಹಾಕಿದ್ದನ್ನು ಕಂಡು ಒಬ್ಬ ಕಾನ್​ಸ್ಟೆಬಲ್ ಮೃತಪಟ್ಟ ದಾರುಣ ಪ್ರಕರಣ ದುರಂತದ ನಡುವೆಯೇ ದಾಖಲಾಗಿದೆ. ಅವಗಢ್​ನಲ್ಲಿ ತುರ್ತು ಸ್ಪಂದನಾ ತಂಡದ (ಕ್ಯೂಆರ್​ಟಿ) ಭಾಗವಾಗಿದ್ದ ಈ ಪೊಲೀಸ್ ಸಿಬ್ಬಂದಿಯನ್ನು ತುರ್ತು ಕರ್ತವ್ಯಕ್ಕಾಗಿ ಇಟಾಗೆ ಕರೆಸಿಕೊಳ್ಳಲಾಗಿತ್ತು. ಆದರೆ, ಅದು ಅವರ ಪ್ರಾಣಕ್ಕೇ ಎರವಾಗಿ ಪರಿಣಮಿಸಿತು.

ಇದರಲ್ಲಿ ರಾಜಕೀಯ ಬೇಡವೆಂದ ಸಂಸದ: ಹಾಥರಸ್ ಕಾಲ್ತುಳಿತ ದುರಂತದ ಬಗ್ಗೆ ಯಾರೂ ರಾಜಕೀಯ ಮಾಡಬಾರದೆಂದು ಬಿಜೆಪಿ ಸಂಸದ ಅನೂಪ್ ಪ್ರಧಾನ್ ಮನವಿ ಮಾಡಿದ್ದಾರೆ. ಯಾವ ಸರ್ಕಾರದಲ್ಲಾದರೂ ದುರಂತಗಳು ಸಂಭವಿಸುತ್ತವೆ. ಆ ರೀತಿ ಏನೂ ಆಗಬಾರದು. ಪ್ರಸ್ತುತ ದುರಂತ ದುರದೃಷ್ಟಕರವಾದುದು ಎಂದಿದ್ದಾರೆ.

ಹೊಣೆ ನಿಗದಿಗೆ ಆಗ್ರಹ: ನೂರಾರು ಜನರ ಸಾವಿನ ದುರಂತಕ್ಕೆ ಕಾರಣರಾದವರನ್ನು ಹುಡುಕಿ ಹೊಣೆಯನ್ನು ನಿಗದಿ ಪಡಿಸಬೇಕೆಂದು ಸಮಾಜವಾದಿ ಪಕ್ಷದ ನಾಯಕ ಶಿವಪಾಲ್ ಸಿಂಗ್ ಆಗ್ರಹಿಸಿದ್ದಾರೆ.

ಸಂಸತ್ತಿನಲ್ಲಿ ಮಿಡಿದ ಮೋದಿ: ಸಂಸತ್ತಿನಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸುತ್ತಿದ್ದ ವೇಳೆ ಪ್ರಧಾನಿ ಮೋದಿ ಹಾಥರಸ್ ದುರಂತವನ್ನು ಪ್ರಸ್ತಾಪಿಸಿ ದುಃಖ ವ್ಯಕ್ತಪಡಿಸಿದರು. ‘ಚರ್ಚೆಯ ನಡುವೆಯೇ ನನಗೆ ದುಃಖದ ವಿಚಾರ ತಿಳಿಯಿತು. ಹಾಥರಸ್ ಕಾಲ್ತುಳಿತ ದುರಂತದಲ್ಲಿ ಅನೇಕ ಜನರು ಬಲಿ ಆಗಿರುವುದು ನನ್ನ ಗಮನಕ್ಕೆ ಬಂದಿದೆ’ ಎಂದು ಲೋಕಸಭೆಯಲ್ಲಿ ಮೋದಿ ಹೇಳಿದರು.

್ಝೕಘ್ರವೇ ವೈದ್ಯಕೀಯ ತಂಡ: ಕಾಲ್ತುಳಿತ ಅವಘಡಕ್ಕೆ ದುಃಖ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ, ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯ (ಎನ್​ಡಿಆರ್​ಎಫ್) ವೈದ್ಯಕೀಯ ತಂಡ ಬೇಗನೇ ದುರಂತ ಸ್ಥಳವನ್ನು ತಲುಪಲಿದೆ ಎಂದು ಎಕ್ಸ್​ನಲ್ಲಿ ಹೇಳಿದ್ದಾರೆ.

ಕಾರ್ಯಕರ್ತರಿಗೆ ರಾಹುಲ್ ಮನವಿ: ಹಾಥರಸ್ ದುರಂತದ ಸಂತ್ರಸ್ತರಿಗೆ ನೆರವಾಗುವಂತೆ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಇಂಡಿಯಾ ಕೂಟದ ಪಕ್ಷಗಳ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ. ಪರಿಹಾರ ಮತ್ತು ರಕ್ಷಣೆ ಕಾರ್ಯದಲ್ಲಿ ಅಧಿಕಾರಿಗಳೊಂದಿಗೆ ಸಹಕರಿಸುವಂತೆಯೂ ಅವರು ಕೋರಿದ್ದಾರೆ.

ಖರ್ಗೆ ಸಂತಾಪ: ನೂರಾರು ಭಕ್ತರ ಸಾವು-ನೋವಿಗೆ ಕಾರಣವಾದ ದುರಂತಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಕೂಡ ನೋವು ಹಂಚಿಕೊಂಡಿದ್ದಾರೆ.

ಗುಪ್ತಚರ ದಳದಲ್ಲಿದ್ದ ಭೋಲೇ ಬಾಬಾ!: ಉತ್ತರ ಪ್ರದೇಶದ ಇಟಾ ಜಿಲ್ಲೆಯ ಬಹಾದೂರ್ ನಗರಿ ಗ್ರಾಮದಲ್ಲಿ ಜನಿಸಿದ್ದ ಸ್ವಘೋಷಿತ ಗುರುವಾದ ಭೋಲೇ ಬಾಬಾ ಆಲಿಯಾಸ್ ನಾರಾಯಣ ಸಾಕರ್ ಹರಿ, ತಾನು ಗುಪ್ತಚರ ದಳದಲ್ಲಿ (ಇಂಟೆಲಿಜೆನ್ಸ್ ಬ್ಯೂರೋ) ಕೆಲಸ ಮಾಡುತ್ತಿದ್ದೆ ಎಂದು ಆಗಾಗ ಹೇಳಿಕೊಳ್ಳುತ್ತಿರುತ್ತಾನೆ. ತಾನು ಹರಿಯ ಭಕ್ತ ಎಂದು ಹೇಳಿಕೊಂಡಿರುವ ಭೋಲೇ ಬಾಬಾ, ಉದ್ಯೋದಲ್ಲಿದ್ದಾಗಲೇ ಆಧ್ಯಾತ್ಮಿಕತೆಯತ್ತ ತನಗೆ ಒಲವಿತ್ತು ಎಂದಿದ್ದಾನೆ. 1990ರ ದಶಕದಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ ಸಂಪೂರ್ಣವಾಗಿ ಆಧ್ಯಾತ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾಗಿ ಹೇಳಿದ್ದಾನೆ. ಪಶ್ಚಿಮ ಉತ್ತರ ಪ್ರದೇಶದಲ್ಲಿ ನಾರಾಯಣ ಹರಿಗೆ ಹೆಚ್ಚಿನ ಭಕ್ತರಿದ್ದಾರೆ.

ಕಾವಿಧಾರಿಯಲ್ಲ: ಕಾವಿ ಬಟ್ಟೆಗಳನ್ನು ಧರಿಸದಿರುವುದು ನಾರಾಯಣ ಹರಿಯ ಒಂದು ವಿಶೇಷವಾಗಿದೆ. ಆತ ಹೆಚ್ಚಾಗಿ ಸದಾ ಬಿಳಿ ಸೂಟ್ ಹಾಗೂ ಟೈ ಧರಿಸುತ್ತಾನೆ. ಕುರ್ತಾ-ಪೈಜಾಮಾ ಆತನ ಇನ್ನೊಂದು ಮೆಚ್ಚಿನ ಉಡುಪಾಗಿದೆ.