ನ್ಯೂಸ್

ಮೌಲಾನಾ ಸಾದ್‌ ಒಂದು ಕೋಟಿ ರೂ. ದೇಣಿಗೆ ಸುದ್ದಿ ಹಿಂದಿನ ಅಸಲಿಯತ್ತು ಫ್ಯಾಕ್ಟ್‌ ಚೆಕ್‌ನಿಂದ ಬಹಿರಂಗ

ನವದೆಹಲಿ: ಕರೊನಾ ವೈರಸ್‌ ವಿರುದ್ಧದ ಹೋರಾಟಕ್ಕೆ ಈಗಾಗಲೇ ದೇಶದ ಹಲವಾರು ಕಡೆಗಳಿಂದ ಪಿಎಂ ಕೇರ್ಸ್‌ ನಿಧಿಗೆ ದೇಣಿಗೆ ಹರಿದುಬರುತ್ತಲೇ ಇದೆ. ತಮ್ಮ ಶಕ್ತ್ಯಾನುಸಾರ ಹಲವಾರು ಮಂದಿ ಧನಸಹಾಯ ಮಾಡುತ್ತಿದ್ದು, ಕಳೆದ ಮಾರ್ಚ್‌ 28ರವರೆಗೆ 6,500 ಕೋಟಿ ರೂಪಾಯಿ ಸಂಗ್ರಹವಾಗಿದೆ.

ಅದೇ ಇನ್ನೊಂದೆಡೆ, ಕರೊನಾ ವೈರಸ್‌ ಹರಡಲು ಅತಿ ದೊಡ್ಡ ಕಾರಣ ಎಂಬ ಆರೋಪ ಹೊತ್ತ ತಬ್ಲಿಘಿಗಳ ರಂಪಾಟದ ಸುದ್ದಿಯೂ ವರದಿಯಾಗುತ್ತಲೇ ಇದೆ. ಈ ನಡುವೆಯೇ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ತಬ್ಲಿಘಿ ಜಮಾತ್‌ನ ಮುಖ್ಯಸ್ಥ ಮೌಲಾನಾ ಸಾದ್‌ ಕರೊನಾ ವೈರಸ್‌ ವಿರುದ್ಧದ ಹೋರಾಟಕ್ಕೆ ಪಿಎಂ ಕೇರ್ಸ್‌ ನಿಧಿಗೆ ಒಂದು ಕೋಟಿ ರೂಪಾಯಿ ಧನಸಹಾಯ ಮಾಡಿದ್ದಾನೆ ಎಂಬ ಸುದ್ದಿ ಹರಡಿದೆ! ದೆಹಲಿಯ ನಿಜಾಮುದ್ದೀನ್‌ನಲ್ಲಿ ನಡೆದ ಸಭೆಯ ನಂತರ ಸದ್ಯ ತಲೆ ಮರೆಸಿಕೊಂಡಿರುವ ಈತ ಹಣ ಸಹಾಯ ಮಾಡಿರುವುದಾಗಿ ‘ ನ್ಯೂಸ್‌ ಲೆಟರ್‌’ ಎಂಬ ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗಿದೆ ಎಂದು ಬಿಂಬಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಕಳೆದ ಮಾರ್ಚ್‌ 20ರಂದು ಮೌಲಾನಾ ಸಾದ್‌ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ಎಂದು ಅದರಲ್ಲಿ ಪ್ರಕಟವಾಗಿದೆ.

ಆದರೆ ಇದರ ಸತ್ಯಾಸತ್ಯತೆಯ ಕುರಿತು ಪರಿಶೀಲಿಸಿದಾಗ, ಇದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ. ಅಜೀಂ ಪ್ರೇಮ್‌ಜಿ ಫೌಂಡೇಷನ್‌ ಪರಿಹಾರ ನಿಧಿಗೆ 1,125 ಕೋಟಿ ರೂಪಾಯಿಗಳನ್ನು ನೀಡಿರುವ ಬಗ್ಗೆ ಈ ಪತ್ರಿಕೆಯಲ್ಲಿ ವರದಿಯಾಗಿದೆ. ಅದೇ ವರದಿಯ ಪಕ್ಕದಲ್ಲಿಯೇ ಮೌಲಾನಾ ಸಾದ್‌ ಒಂದು ಕೋಟಿ ನೀಡಿರುವುದಾಗಿ ಹೇಳಲಾಗಿದ್ದು. ಅದರ ಬಗ್ಗೆ ಖುರೇಷಿ ಎಂಬುವವರು ಟ್ವೀಟ್‌ ಮಾಡಿದ್ದಾರೆ.

ಆದರೆ ಇದು ಸಂಪೂರ್ಣ ತಿರುಚಿದ ಸುದ್ದಿ ಎಂದು ಫ್ಯಾಕ್ಟ್‌ ಚೆಕ್‌ನಲ್ಲಿ ತಿಳಿದುಬಂದಿದೆ. ನ್ಯೂಸ್‌ ಲೆಟರ್‌ ಪತ್ರಿಕೆಯ ಹಳೆಯ ಮುಖಪುಟವೊಂದನ್ನು ಇಟ್ಟುಕೊಂಡು ಅದರಲ್ಲಿರುವ ಮುಖ್ಯ ವರದಿಯನ್ನು ತಿರುಚಿ ಆ ಜಾಗದಲ್ಲಿ ಮೌಲಾನಾ ಸಾದ್‌ ಹಣ ನೀಡಿರುವ ಕ್ಲಿಪ್ಪಿಂಗ್‌ ಇಟ್ಟು ಅದನ್ನೇ ನಿಜವೆಂದು ಬಿಂಬಿಸಲಾಗಿದೆ.

ಮೌಲಾನಾ ಸಾದ್‌ ಪತ್ತೆಗೆ ಹಲವಾರು ನೋಟಿಸ್‌ಗಳನ್ನು ಪೊಲೀಸರು ನೀಡಿದ್ದರೂ, ಅನೇಕ ಸ್ಥಳಗಳಲ್ಲಿ ಆತನನ್ನು ಹುಡುಕಿದರೂ ಸದ್ಯ ಕಣ್ಣು ತಪ್ಪಿಸಿಕೊಂಡು ಓಡಾಡುತ್ತಿರುವ ಮೌಲಾನಾ ಈಗ ದೇಣಿಗೆ ನೀಡಿರುವ ಸುದ್ದಿಯ ಮೂಲಕ ಮತ್ತೆ ಮುನ್ನೆಲೆಗೆ ಬಂದಿದ್ದಾನೆ. ಸದ್ಯ ಈತನ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಪೊಲೀಸರು ಪತ್ತೆ ನಡೆಸುತ್ತಿದ್ದಾರೆ. (ಏಜನ್ಸೀಸ್)