ಕತಾರ್: ಬಹುತೇಕ ರಾಷ್ಟ್ರಗಳಿಗೆ ಪಸರಿಸಿರುವ ಕರೊನಾ ವೈರಸ್ ಕತಾರ್ನಲ್ಲೂ ಕಾಣಿಸಿಕೊಂಡಿದ್ದು, ಇದುವರೆಗೆ 490ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದ್ದು ವರದಿಯಾಗಿದೆ.
ನೌಕರ ವರ್ಗ ಅಧಿಕವಾಗಿರುವ ಪ್ರದೇಶಗಳಲ್ಲಿ ಕರೊನಾ ಸೋಂಕು ಪ್ರಸರಣದ ಪ್ರಮಾಣ ಹೆಚ್ಚಾಗಿದ್ದು ಅಂತಹ ಕಡೆಗಳಲ್ಲಿ ಹೆಚ್ಚಿನ ನಿಗಾ ಇಡಲಾಗಿದೆ.
ಶೇ.80ರಷ್ಟು ಸರ್ಕಾರಿ ಕೆಲಸಗಳು ಮನೆಯಿಂದಲೇ ನಡೆಯುತ್ತಿವೆ. ಹಾಗೇ ಉದ್ಯಮವಲಯದಲ್ಲೂ ಕೂಡ ವರ್ಕ್ ಫ್ರಾಂ ಹೋಂಗೇ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಕತಾರ್ನಲ್ಲಿ ಭಾರತೀಯರು ಅನೇಕರಿದ್ದಾರೆ. ಅದರಲ್ಲೂ ಸುಮಾರು 25-30 ಸಾವಿರ ಜನರು ಕನ್ನಡಿಗರೇ ಇದ್ದಾರೆ. ಅವರೆಲ್ಲರೂ ಸ್ವಚ್ಛತಾ ಕ್ರಮಗಳನ್ನು ಅನುಸರಿಸುತ್ತಿದ್ದು, ಕರೊನಾ ಬಾರದಂತೆ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ.
ಕತಾರ್ನಲ್ಲಿ ಇರುವ ಬೇರೆ ದೇಶದವರು ಕೆಲವರು ಸಾರ್ವಜನಿಕವಾಗಿ ಹೆಚ್ಚಾಗಿ ಓಡಾಡಿದ್ದರಿಂದ ಅವರನ್ನೆಲ್ಲ ಅವರವರ ದೇಶಕ್ಕೆ ಕಳಿಸಲಾಗಿದೆ ಎಂದೂ ವರದಿಯಾಗಿದೆ.
ಕರೊನಾ ಸೋಂಕಿನ ವಿರುದ್ಧ ಹೋರಾಡಲು ಕತಾರ್ ಸರ್ಕಾರ ಸಕಲ ಕ್ರಮಗಳನ್ನೂ ಕೈಗೊಂಡಿದೆ. ಇದುವರೆಗೂ ಸಾವಿನ ವರದಿಯಾಗಿಲ್ಲ.
ಕತಾರ್ನಲ್ಲಿ ಕರೊನಾ ನಿಯಂತ್ರಣಕ್ಕೆ ತೆಗೆದುಕೊಂಡ ಮುನ್ನೆಚ್ಚರಿಕಾ ಕ್ರಮಗಳು ಹೀಗಿವೆ...
- ಸಾರ್ವಜನಿಕ ಸಭೆಗಳು, ಆಚರಣೆಗಳು, ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಹೆಚ್ಚು ಜನರು ಒಂದು ಸ್ಥಳದಲ್ಲಿ ಸೇರುವಂತಿಲ್ಲ.
- ಸಾರ್ವಜನಿಕ ಸಾರಿಗೆ, ಮೆಟ್ರೋ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
- ಶಾಲಾ, ಕಾಲೇಜುಗಳಿಗೆ ಅನಿರ್ದಿಷ್ಟ ಕಾಲ ರಜಾ ಘೋಷಿಸಲಾಗಿದೆ. ಆದರೆ ಮನೆಯಿಂದಲೇ ಅಂತರ್ಜಾಲದ ಮೂಲಕ ಪಠ್ಯಕ್ರಮ ಮುಂದುವರೆಯುತ್ತಿದೆ.
- ಉದ್ಯಾನವನ, ಹೊರಾಂಗಣ ಮತ್ತು ಒಳಾಂಗಣ ಮೈದಾನಗಳಿಗೆ ಪ್ರವೇಶವಿಲ್ಲ.
- ಕಾರ್ನಿಷ್ (ಸಮುದ್ರದಡ), ದೊಡ್ಡ ಮಳಿಗೆಗಳು, ಕ್ಷೌರಿಕ ಅಂಗಡಿಗಳನ್ನು ಮುಚ್ಚಲಾಗಿದೆ.
- ಆದಷ್ಟು ಕಾರ್ಯಾಲಯದಲ್ಲೇ ಕುಳಿತು ಕೆಲಸ ಮಾಡುವ ಕಛೇರಿಗಳಿಗೆ ಮತ್ತು ಸಂಸ್ಥೆಗಳಿಗೆ, ತಮ್ಮಕಾರ್ಮಿಕರು ಹಾಗೂ ಕೆಲಸಗಾರರು ಮನೆಯಿಂದಲೇ ಕೆಲಸ ಮಾಡಲು ನಿರ್ದೇಶಿಸಲಾಗಿದೆ.
- ಆಹಾರ, ಇತರೆ ಸರಕು, ಸರಂಜಾಮುಗಳ ಅಂಗಡಿ-ಮುಂಗಟ್ಟುಗಳನ್ನು ತೆರೆಯಲಾಗಿದ್ದು, ಜನರಿಗೆ ದಿನನಿತ್ಯದ ಅವಶ್ಯಕತೆಗಳು ಸಾಧಾರಣವಾಗಿ ಲಭ್ಯವಿದೆ.
- ಬುಧವಾರ, ದಿನಾಂಕ 18.03.2020 ರಿಂದಲೇ ಯಾವುದೇ ಬೇರೆ ದೇಶದ ವಿಮಾನದಿಂದ ಬರುವವರನ್ನು ಕತಾರಿನೊಳಗೆ ಪ್ರವೇಶದಂತೆ ರದ್ದುಗೊಳಿಸಲಾಗಿದ್ದು, ಆಯಾ ದೇಶಗಳ ರಾಯಭಾರಿಗಳಿಗೆ ಸೂಚನೆ ನೀಡಲಾಗಿದೆ.
- ಉಪಾಹಾರ ಕೇಂದ್ರಗಳಲ್ಲಿ ಕುಳಿತು ಆಹಾರ ಸ್ವೀಕರಿಸುವಂತಿಲ್ಲ. ತಿಂಡಿ, ತಿನಿಸುಗಳನ್ನು ಒಯ್ದು, ಅಂದರೆ 'ಪಾರ್ಸಲ್' ಮಾತ್ರರವಾನಿಸಲಾಗುತ್ತಿದೆ. ಅಲ್ಲಿಯೇ ಊಟ ಬಡಿಸಲಾಗುವುದಿಲ್ಲ.