ಬೆಂಗಳೂರು: ಸೇಫ್ ಆಗಿರಲಿ ಎಂದು ಹಣ-ಆಭರಣ, ಮಹತ್ವದ ದಾಖಲೆ ಮುಂತಾದ ಬೆಲೆಬಾಳುವ ವಸ್ತುಗಳನ್ನು ಬ್ಯಾಂಕ್ ಲಾಕರ್ನಲ್ಲಿ ಕೆಲವರು ಇಡುತ್ತಾರೆ. ಆದರೆ ಹಾಗಿಟ್ಟ ಹಣ ಕೂಡ ಈಗ ಅಲ್ಲಿ ಸೇಫ್ ಅಲ್ಲ ಎನ್ನುವಂಥ ಪ್ರಕರಣವೊಂದು ಜರುಗಿದೆ. ಸೇಫ್ ಆಗಿರಲಿ ಎಂದು ಶುಲ್ಕ ಕಟ್ಟಿ ಲಾಕರ್ನಲ್ಲಿಟ್ಟ ಹಣವೂ ಇಲ್ಲದಂತಾಗಿರುವುದು ಗ್ರಾಹಕರೊಬ್ಬರನ್ನು ನಷ್ಟಕ್ಕೆ ಒಳಗಾಗಿಸಿದ್ದಷ್ಟೇ ಅಲ್ಲ, ಬೇರೆ ಗ್ರಾಹಕರೂ ಹಣವನ್ನು ಬ್ಯಾಂಕ್ ಲಾಕರ್ನಲ್ಲಿ ಇಡುವ ಮುಂಚೆ ಒಮ್ಮೆ ಯೋಚನೆ ಮಾಡುವಂತಾಗಿದೆ.
ಬ್ಯಾಂಕ್ವೊಂದರ ಗ್ರಾಹಕರೊಬ್ಬರು 2.2 ಲಕ್ಷ ರೂಪಾಯಿಯನ್ನು ಬ್ಯಾಂಕ್ ಲಾಕರ್ನಲ್ಲಿ ಇಟ್ಟು ಈಗ ಕೈಕೈ ಹಿಸುಕಿಕೊಳ್ಳುವಂತಾಗಿದೆ. ಏಕೆಂದರೆ ಅವರಿಗೆ ನಷ್ಟವಾದ ಹಣಕ್ಕೆ ಬ್ಯಾಂಕ್ ಅಧಿಕಾರಿಗಳು ತಾವು ಜವಾಬ್ದಾರರಲ್ಲ ಎಂದು ಹೇಳಿದ್ದರೆ, ರಿಸರ್ವ್ ಬ್ಯಾಂಕ್ ನಿಯಮಗಳು ಕೂಡ ಅವರ ಹೇಳಿಕೆಗೆ ಪೂರಕವಾಗಿಯೇ ಇದೆ.
ಇದನ್ನೂ ಓದಿ: ಬೈಕ್ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ; ಬಿದ್ದರೂ ಬಿಡದೆ ಮತ್ತೆ ಮತ್ತೆ ಇರಿದು ಸಾಯಿಸಿದಳು!
ಗುಜರಾತ್ನ ವಡೋದರದಲ್ಲಿರುವ ಬ್ಯಾಂಕ್ ಆಫ್ ಬರೋಡದಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ಅಲ್ಲಿನ ಬ್ಯಾಂಕ್ನ ಲಾಕರ್ ನಂಬರ್ 252ನಲ್ಲಿ ಗ್ರಾಹಕರೊಬ್ಬರು 2.2 ಲಕ್ಷ ರೂಪಾಯಿ ಇಟ್ಟಿದ್ದರು. ಆದರೆ ಕೆಲ ದಿನಗಳ ಬಳಿಕ ಹೋಗಿ ಲಾಕರ್ ತೆರೆದಾಗ ಅಲ್ಲಿದ್ದ ಹಣಕ್ಕೆ ಗೆದ್ದಲು ಹಿಡಿದಿದ್ದು, ನೋಟುಗಳೆಲ್ಲ ಛಿದ್ರವಾಗಿದ್ದವು. ಅದನ್ನು ನೋಡಿ ಆಘಾತಗೊಂಡ ಗ್ರಾಹಕ ಬ್ಯಾಂಕ್ನವರನ್ನು ಪ್ರಶ್ನಿಸಿದರೂ ನ್ಯಾಯ ಸಿಗಲಿಲ್ಲ. ಜತೆಗೆ ಬ್ಯಾಂಕ್ ಆಫ್ ಬರೋಡದ ಭದ್ರತಾ ವ್ಯವಸ್ಥೆ ಬಗ್ಗೆಯೇ ಹಲವಾರು ಅನುಮಾನಗಳು ವ್ಯಕ್ತವಾಗಿವೆ.
ಮತ್ತೊಂದೆಡೆ ಭಾರತೀಯ ರಿಸರ್ವ್ ಬ್ಯಾಂಕ್ ನಿಯಮ ಕೂಡ ಇಂಥ ಸಂದರ್ಭದಲ್ಲಿ ಗ್ರಾಹಕರಿಗೆ ಅನನುಕೂಲವಾಗುವಂತೆಯೇ ಇದೆ. ಆರ್ಬಿಐ ನಿಯಮಗಳ ಪ್ರಕಾರ ಲಾಕರ್ನಲ್ಲಿಟ್ಟ ಹಣ ಅಥವಾ ಯಾವುದೇ ಬೆಲೆಬಾಳುವ ವಸ್ತುಗಳ ನಷ್ಟ ಇಲ್ಲವೇ ಕಳವು ಇತ್ಯಾದಿಗೆ ಬ್ಯಾಂಕ್ ಹೊಣೆಯಲ್ಲ ಎಂಬುದಾಗಿ ಇದೆ. ಅದರಲ್ಲೂ ಈ ಪ್ರಕರಣದಲ್ಲಿ ಹಣವನ್ನು ಗೆದ್ದಲು ತಿಂದಿರುವುದರಿಂದ ಅದಕ್ಕೆ ಬ್ಯಾಂಕ್ ಜವಾಬ್ದಾರಿಯಲ್ಲ ಎಂಬ ಉತ್ತರ ಸಿಕ್ಕಿದ್ದು, ಹಣ ಕಳೆದುಕೊಂಡಿರುವ ಗ್ರಾಹಕ ದಿಕ್ಕುತೋಚದಂತಾಗಿದ್ದಾರೆ. (ಏಜೆನ್ಸೀಸ್)