ನ್ಯೂಸ್

ವಂಶಿಕಾ ಹೆಸರಲ್ಲಿ ವಂಚನೆ ಪ್ರಕರಣ: ನಿಶಾಳ ಬ್ಯಾಂಕ್​ ಖಾತೆಯನ್ನು ನೋಡಿ ಪೊಲೀಸರೇ ದಂಗು!

ಬೆಂಗಳೂರು: ಮಾಸ್ಟರ್​ ಆನಂದ್​ ಪುತ್ರಿ ಹಾಗೂ ಬಾಲ ನಟಿ ವಂಶಿಕಾ ಹೆಸರನ್ನು ಬಳಸಿ ಹಲವರಿಗೆ ವಂಚನೆ ಎಸಗಿರುವ ಪ್ರಕರಣದಲ್ಲಿ ಬಂಧನವಾಗಿರುವ ಆರೋಪಿ ನಿಶಾ ನರಸಪ್ಪಳ ಕುರಿತಾದ ಒಂದೊಂದೆ ರೋಚಕ ಸಂಗತಿ ಪೊಲೀಸ್​ ತನಿಖೆಯಲ್ಲಿ ಬಯಲಾಗುತ್ತಿದೆ.

ಹುಬ್ಬೇರಿಸಿದ ಪೊಲೀಸರು

ಹೈಫೈ ಶೋಕಿಗೆ ಬಿದ್ದಿದ್ದ ನಿಶಾಳ ವಂಚನೆ ಪ್ರಕರಣಕ್ಕೆ ಇದೀಗ ಮತ್ತೊಂದು ಟ್ವಿಸ್ಟ್​ ಸಿಕ್ಕಿದೆ. ಈವರೆಗೂ 40 ಲಕ್ಷ ರೂಪಾಯಿ ಮೋಸ ಆಗಿದೆ ಎಂದು ಮಾತ್ರ ದೂರು ದಾಖಲಾಗಿದೆ. ಆದರೆ 2 ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆದಿರುವುದು ಇದೀಗ ತನಿಖೆಯಲ್ಲಿ ಪತ್ತೆಯಾಗಿದೆ. ನಿಶಾಳ ಬ್ಯಾಂಕ್ ಖಾತೆಯನ್ನು ಪರಿಶೀಲನೆ ಮಾಡಿದ ಪೊಲೀಸರೇ ಹುಬ್ಬೇರಿಸಿದ್ದಾರೆ.

8 ಸಾವಿರ ರೂಪಾಯಿ ಮಾತ್ರ

2 ಕೋಟಿ ರೂಪಾಯಿಗೂ ಅಧಿಕ ಮೋಸ ಮಾಡಿದರೂ ನಿಶಾ ಬ್ಯಾಂಕ್​ ಖಾತೆಯಲ್ಲಿ ಇದ್ದಿದ್ದು ಮಾತ್ರ ಕೇವಲ 8 ಸಾವಿರ ರೂಪಾಯಿ. ಆದ್ರೆ ಬ್ಯಾಂಕ್​ ವಹಿವಾಟು ನಡೆದಿರುವುದು 2 ಕೋಟಿ ರೂಪಾಯಿಗೂ ಅಧಿಕ. ಇದುವರೆಗೂ 40 ಲಕ್ಷ ರೂಪಾಯಿ ವಂಚನೆ ಆಗಿದೆ ಎಂದು ಮಾತ್ರ ದೂರು ದಾಖಲಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಬಡ್ಡಿಗೆ ಹಣ ಪಡೆದು ವಂಚನೆ

ಈ ನಿಶಾ ನರಸಪ್ಪ ತುಂಬಾ ಹೈಫೈ ಶೋಕಿಗೆ ಬಿದ್ದಿದ್ದಳು. ಪೋಷಕರನ್ನು ವಂಚಿಸಿ ಹಣ ಕಬಳಿಸಿ, ಬಾರ್, ಪಬ್, ಹೈಫೈ ಹೋಟೇಲ್​​ಗಳಲ್ಲೇ ಪಾರ್ಟಿ ಮಾಡುತ್ತಾ ವಿಲಾಸಿ ಜೀವನವನ್ನು ನಡೆಸುತ್ತಿದ್ದಳು. ಇಷ್ಟೇ ಅಲ್ಲದೇ ಅಧಿಕ ಬಡ್ಡಿಗೆ ಹಣ ಪಡೆದು ಸಾಕಷ್ಟು ಜನರಿಗೆ ವಂಚನೆ ಮಾಡಿರುವ ಆರೋಪವಿದೆ. 20% ಬಡ್ಡಿ ನೀಡುತ್ತೇನೆ ಎಂದು ನಂಬಿಸಿ ಲಕ್ಷ ಲಕ್ಷ ರೂಪಾಯಿ ಪಡೆದು ಪಂಗನಾಮ ಹಾಕಿದ್ದಾಳೆ. ಆದ್ರೆ ಈ ಬಗ್ಗೆ ಯಾವುದೇ ದೂರು ಇದುವರೆಗೂ ದಾಖಲಾಗದಿರುವುದು ಬಹಳ ಅಚ್ಚರಿಗೆ ಕಾರಣವಾಗಿದೆ. ಸದ್ಯ ಸದಾಶಿವನಗರ ಪೊಲೀಸರು ತಮ್ಮ ತನಿಖೆಯನ್ನು ಚುರುಕುಗೊಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)