ನ್ಯೂಸ್

175 ಕೋಟಿ ರೂ. ಬಜೆಟ್​; 15 ಮಲಯಾಳಂ ಚಿತ್ರಗಳಲ್ಲಿ 'ಎಂಪುರಾನ್' ಬಿಟ್ಟು ಇನ್ನೆಲ್ಲವೂ ಫ್ಲಾಪ್​ ​ ​| Mollywood

Mollywood: ರಿಲೀಸ್​ಗೂ ಮುನ್ನವೇ ಭಾರೀ ವಿವಾದಕ್ಕೆ ಗುರಿಯಾಗಿದ್ದ ದಿಗ್ಗಜ ನಟ ಮೋಹನ್​ ಲಾಲ್ ಅಭಿನಯದ ಮಲಯಾಳಂನ ಬಹುನಿರೀಕ್ಷಿತ ಚಿತ್ರ 'ಎಂಪುರಾನ್'​, ಮಾ.27ರಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಂಡಿತು. ವಿವಾದದ ಅಲೆಯಲ್ಲಿ ಸಿಲುಕಿದ್ದರೂ ಉತ್ತಮ ಓಪನಿಂಗ್ ಪಡೆದಿರುವ ಮೋಹನ್ ಲಾಲ್ ಚಿತ್ರ, 15 ಮಲಯಾಳಂ ಸಿನಿಮಾಗಳ ಪೈಕಿ ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಗಳಿಕೆ ಕಂಡಿದೆ.

ಮೋಹನ್ ಲಾಲ್-ಪೃಥ್ವಿರಾಜ್ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ 'ಎಂಪುರಾನ್' ಚಿತ್ರದ ಬಜೆಟ್ ಇಲ್ಲಿಯವರೆಗೆ ಅಷ್ಟಾಗಿ ಎಲ್ಲಿಯೂ ಬಹಿರಂಗಪಡಿಸಿರಲಿಲ್ಲ. ಆದರೆ, ಇತ್ತೀಚೆಗಷ್ಟೇ ನಿರ್ಮಾಪಕರು ಮಾಹಿತಿ ಹಂಚಿಕೊಂಡಿದ್ದು, 175 ಕೋಟಿ ರೂ. ವೆಚ್ಚದಲ್ಲಿ ಚಿತ್ರವನ್ನು ನಿರ್ಮಿಸಲಾಗಿದೆ. ಇದುವರೆಗೆ ನಿರ್ಮಿಸಿರುವ ಮಲಯಾಳಂ ಚಿತ್ರಗಳ ಪೈಕಿ ಇದು ಅತ್ಯಂತ ದುಬಾರಿ ಬಜೆಟ್​ನ ಸಿನಿಮಾ ಎನ್ನಲಾಗಿದೆ. 'ಎಂಪುರಾನ್' ಚಿತ್ರದ ನಿರ್ಮಾಣ ವೆಚ್ಚವು 175 ಕೋಟಿ ರೂ. ತಗುಲಿದೆ ಎಂದು ನಿರ್ಮಾಪಕರ ಸಂಘವು ಅಧಿಕೃತವಾಗಿ ತಿಳಿಸಿದೆ.

ಕೇರಳ ಚಲನಚಿತ್ರ ನಿರ್ಮಾಪಕರ ಸಂಘದ ಪ್ರಕಾರ, ಮಾರ್ಚ್‌ನಲ್ಲಿ ಬಿಡುಗಡೆಯಾದ ಒಟ್ಟು 15 ಮಾಲಿವುಡ್​ ಚಿತ್ರಗಳ ಪೈಕಿ ಎಂಪುರಾನ್​ ಹೊರತುಪಡಿಸಿ ಉಳಿದೆಲ್ಲ ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ಕಮಾಲ್ ಮಾಡಲು ವಿಫಲವಾಗಿವೆ. ಹೊಸಬರ ಚಿತ್ರಗಳೂ ಭಾರೀ ನಷ್ಟ ಅನುಭವಿಸಿದ್ದು, ಎಂಪುರಾನ್ ಮಾತ್ರ ನಷ್ಟದ ಹೊಡೆತದಿಂದ ತಪ್ಪಿಸಿಕೊಂಡಿದೆ. ಮೊದಲ ಐದು ದಿನಗಳಲ್ಲಿ ಚಿತ್ರಮಂದಿರಗಳ ಷೇರುಗಳಲ್ಲಿ 24 ಕೋಟಿ ರೂ.ಗಳಿಗಿಂತ ಅಧಿಕ ಲಾಭವನ್ನು ಚಿತ್ರತಂಡ ಗಳಿಸಿದೆ.

ಇತ್ತೀಚೆಗಷ್ಟೇ ಕೇರಳ ಚಲನಚಿತ್ರ ನಿರ್ಮಾಪಕರ ಸಂಘವು ಮಾರ್ಚ್‌ನಲ್ಲಿ ಬಿಡುಗಡೆಯಾದ 15 ಚಿತ್ರಗಳ ಬಜೆಟ್ ಮತ್ತು ಅದರ ಕಲೆಕ್ಷನ್‌ಗಳ ವಿವರವನ್ನು ಬಿಡುಗಡೆಗೊಳಿಸಿದೆ. 15 ಸಿನಿಮಾಗಳ ಒಟ್ಟು ಹೂಡಿಕೆ 194 ಕೋಟಿ ರೂ.ಗಿಂತ ಹೆಚ್ಚಿದ್ದು, ಅದರಿಂದ ನಿರ್ಮಾಪಕರಿಗೆ ಬಂದ ಒಟ್ಟು ಥಿಯೇಟರ್ ಪಾಲು ಕೇವಲ 25.88 ಕೋಟಿ ರೂ. ಮಾತ್ರ ಎಂಬುದು ಗಮನಾರ್ಹ. ಕಡಿಮೆ ಬಜೆಟ್‌ನ ಚಿತ್ರಗಳು ಸಹ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಪರದಾಡಿವೆ,(ಏಜೆನ್ಸೀಸ್).