

Virat Kohli: ಇತ್ತೀಚೆಗಷ್ಟೇ ರಾಜಸ್ಥಾನ ರಾಯಲ್ಸ್ ವಿರುದ್ಧ ತವರಿನಲ್ಲಿ ಚೊಚ್ಚಲ ಗೆಲುವು ದಾಖಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಐಪಿಎಲ್ ಅಂಕಪಟ್ಟಿಯ ಟಾಪ್ 4ರಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಇದೇ ಸಂದರ್ಭದಲ್ಲಿ ಪಂಜಾಬ್ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ಗೆ ಟಕ್ಕರ್ ಕೊಟ್ಟ ಕೊಹ್ಲಿ, ಈ ಹಿಂದೆ ಅಯ್ಯರ್ ಬೆಂಗಳೂರು ಮೈದಾನದಲ್ಲಿ ನಡೆದುಕೊಂಡಿದ್ದ ರೀತಿಯನ್ನು ಪಂಜಾಬ್ ನೆಲದಲ್ಲಿ ನೆನಪಿಸಿ, ಉತ್ತರಿಸಿದರು. ಅದೇ ರೀತಿ ಈಗ ಕೆ.ಎಲ್. ರಾಹುಲ್ಗೆ ಉತ್ತರ ಕೊಡುವ ಸಮಯ ಎಂದು ಫ್ಯಾನ್ಸ್ಗಳು ನಿರೀಕ್ಷಿಸಿದ್ದಾರೆ.
ಇದೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಆಡಿದ್ದ ಆರ್ಸಿಬಿ, ಕನ್ನಡಿಗ ಕೆ.ಎಲ್. ರಾಹುಲ್ ಆರ್ಭಟಕ್ಕೆ ತತ್ತರಿಸಿತ್ತು. ಪಂದ್ಯ ಗೆದ್ದ ಖುಷಿಯಲ್ಲಿ ‘ಇದು ನನ್ನ ನೆಲ, ನನ್ನ ತವರು. ಇತರರಿಗಿಂತ ಇಲ್ಲಿನ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ’ ಎಂದು ‘ಕಾಂತಾರ’ ಚಿತ್ರದ ಕ್ಲೈಮ್ಯಾಕ್ಸ್ ನೆನಪಿಸಿದ ಕೆ.ಎಲ್. ರಾಹುಲ್, ತಮ್ಮ ಬ್ಯಾಟ್ನಿಂದ ವೃತ್ತಾಕಾರ ಬರೆದು, ಇದು ನನ್ನದು ಎಂಬ ಸಂದೇಶವನ್ನು ಸಾರಿದ್ದರು. ಇಂದು ಅರುಣ್ ಜೆಟ್ಲಿ ಸ್ಟೇಡಿಯಂನಲ್ಲಿ ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕೆ.ಎಲ್. ರಾಹುಲ್ಗೆ ಕೊಹ್ಲಿ ತಕ್ಕ ಉತ್ತರ ಕೊಡಲಿದ್ದಾರೆ ಎಂದು ಆರ್ಸಿಬಿ ಫ್ಯಾನ್ಸ್ಗಳು ಮಾತ್ರವಲ್ಲದೇ ಹಿರಿಯ ಕ್ರಿಕೆಟಿಗರು ಕೂಡ ಅಪೇಕ್ಷಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಟೀಮ್ ಇಂಡಿಯಾ ಮಾಜಿ ಹಿರಿಯ ಆಟಗಾರ ಸಂಜಯ್ ಬಂಗಾರ್, "ದೆಹಲಿಯ ಹುಡುಗ ವಿರಾಟ್ ಕೊಹ್ಲಿ. ಇಂದಿನ ಪಂದ್ಯದಲ್ಲಿ ಅವರು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲಿದ್ದಾರೆ. ನನ್ನ ಪ್ರಕಾರ, ಇಲ್ಲಿನ ಪಿಚ್ನಲ್ಲಿ 'ವಿರಾಟ ರೂಪ' ಬೇರೆಯೇ ಆಗಿರಲಿದೆ. ನೀವು ಕುಳಿತಿರುವ ಪೆವಿಲಿಯನ್ ನನ್ನದು. ಯಾರು ಬಾಸ್? ಇಲ್ಲಿಗೆ ವಿರಾಟ್ ಕೊಹ್ಲಿಯೇ ಬಾಸ್" ಎಂದು ಹೇಳಿದ್ದಾರೆ. ಅಸಲಿಗೆ ಇಂದಿನ ಪಂದ್ಯದ ಗೆಲುವು ಯಾರ ಪಾಲಾಗಲಿದೆ? ಫ್ಯಾನ್ಸ್ಗಳ ನಿರೀಕ್ಷೆಯಂತೆ ಕೊಹ್ಲಿ ರಾಹುಲ್ಗೆ ಟಕ್ಕರ್ ಕೊಡ್ತಾರಾ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).