ಆರೋಗ್ಯ ಸೇವೆಗೆ ಗ್ರಹಣ! : ಈಶ್ವರಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಮುಗಿಯದ ಸಮಸ್ಯೆ : ಹಲವು ಹುದ್ದೆಗಳೂ ಖಾಲಿ

New Project (21)
Published on

ಶಶಿ ಕುತ್ಯಾಳ ಈಶ್ವರಮಂಗಲ

ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಬೇಕಾಗಿರುವುದು ಸರ್ಕಾರದ ಜವಾಬ್ದಾರಿ. ಕೇವಲ ಆಸ್ಪತ್ರೆ ಕಟ್ಟಡ ನಿರ್ಮಿಸಿದ ಮಾತ್ರಕ್ಕೆ ಜನರಿಗೆ ಆರೋಗ್ಯ ಸೌಲಭ್ಯ ಸಿಗಲು ಸಾಧ್ಯವಿಲ್ಲ. ವೈದ್ಯರ ಮತ್ತು ಸಿಬ್ಬಂದಿ ವ್ಯವ್ಯಸ್ಥೆ ಕಲ್ಪಿಸುವುದು ಅಗತ್ಯ. ಈ ವ್ಯವಸ್ಥೆಗಳು ಸಮರ್ಪಕವಾಗಿ ಇಲ್ಲದಿದ್ದರೆ ಆರೋಗ್ಯ ಸೇವೆಗೆ ಗ್ರಹಣ ಹಿಡಿಯುತ್ತದೆ ಎಂಬುದಕ್ಕೆ ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ಥಿತಿಯೇ ಸಾಕ್ಷಿ.

ಈಶ್ವರಮಂಗಲದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸುವ್ಯವಸ್ಥಿತ ಕಟ್ಟಡ, ತುರ್ತು ನಿಗಾ ಘಟಕ, 6 ಬೆಡ್‌ಗಳ ವ್ಯವಸ್ಥೆ ಇದೆ. ಆದರೆ ಇಲ್ಲಿ ಹೆಸರಿಗೆ ಮಾತ್ರ ಪೂರ್ಣಾವಧಿ ನೆಲೆಯ ಕಾಯಂ ವೈದ್ಯರಿದ್ದಾರೆ. ಇದೇ ಆಸ್ಪತ್ರೆ ಹೆಸರಿನಲ್ಲಿ ಅವರು ಸಂಬಳ ಕೂಡ ಪಡೆಯುತ್ತಿದ್ದಾರೆ. ಅವರೇ ಇಲ್ಲಿನ ಆಡಳಿತ ವೈದ್ಯಾಧಿಕಾರಿ ಚಾರ್ಜ್ ಹೊಂದಿದ್ದಾರೆ. ಆದರೆ ಅವರು ವಾರದ ಹೆಚ್ಚಿನ ದಿನಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಮಾತ್ರ ಉಳ್ಳಾಲದ ನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ..!

ಇತ್ತೀಚೆಗೆ ಕೆಡಿಪಿ ಸಭೆಯಲ್ಲಿ ಶಾಸಕ ಅಶೋಕ್‌ಕುಮಾರ್ ರೈ ಅವರು ಈಶ್ವರಮಂಗಲ ಆಸ್ಪತ್ರೆ ವೈದ್ಯಾಧಿಕಾರಿ ಉಳ್ಳಾಲದ ಆಸ್ಪತ್ರೆಗೆ ನಿಯೋಜನೆಗೊಂಡು ಕರ್ತವ್ಯ ನಿರ್ವಹಿಸುತ್ತಿರುವುದನ್ನು ಹಾಗೂ ಹೇಗೆ ನೀವು ನಿಯೋಜನೆ ಮಾಡಿದ್ದೀರಿ ಎಂಬುದನ್ನು ಅಧಿಕಾರಿಗಳಲ್ಲಿ ಪ್ರಶ್ನಿಸಿದ್ದರು. ಉಳ್ಳಾಲದಲ್ಲಿ ಕರ್ತವ್ಯ ನಿರ್ವಹಿಸುದಾದರೆ ಇಲ್ಲಿ ಸಂಬಳ ಪಡೆಯುವುದು ಬೇಡ. ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಿ ಎಂದು ತಾಲೂಕು ಆರೋಗ್ಯಾಧಿಕಾರಿಗೆ ಸೂಚಿಸಿದ್ದರು. ಆದರೆ ಈ ತನಕ ಏನೂ ಪ್ರಯೋಜನವಾಗಿಲ್ಲ.

ಬಹಳಷ್ಟು ಜನಸಂಖ್ಯೆ ಹೊಂದಿರುವ ನೆಟ್ಟಣಿಗೆ ಮುಡ್ನೂರು, ಪಡುವನ್ನೂರು, ಬಡಗನ್ನೂರು, ಮಾಡ್ನೂರು ವ್ಯಾಪ್ತಿ ಮಾತ್ರವಲ್ಲದೆ ಕೇರಳ ಗಡಿ ಭಾಗದ ಬಹಳಷ್ಟು ಮಂದಿ ಆರೋಗ್ಯ ಸೌಲಭ್ಯಕ್ಕಾಗಿ ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅವಲಂಬಿಸಿದ್ದಾರೆ. ಆದರೆ ಇಲ್ಲಿ ವಾರದ ಎರಡು ಮೂರು ದಿನಗಳನ್ನು ಹೊರತುಪಡಿಸಿ ಉಳಿದೆಲ್ಲಾ ದಿನಗಳಲ್ಲಿ ವೈದ್ಯರು ಇಲ್ಲದಿರುವುದರಿಂದ ಆರೋಗ್ಯ ಸೇವೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆಯೂ ಇಳಿಮುಖವಾಗುತ್ತಿದೆ.

ಸಿಬ್ಬಂದಿ ಕೊರತೆ

ಪ್ರಸ್ತುತ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯೂ ಇದೆ. ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಹುದ್ದೆ ಖಾಲಿಯಿದ್ದು, ಪುತ್ತೂರಿನಲ್ಲಿ ವಾರದಲ್ಲಿ 5 ದಿನಗಳ ಕಾಲ ಕರ್ತವ್ಯ ನಿರ್ವಹಿಸುತ್ತಿರುವವರು ವಾರದಲ್ಲಿ ಒಂದು ದಿನ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೆಲ್ತ್ ಇನ್‌ಸ್ಪೆಕ್ಟರ್ 2 ಹುದ್ದೆಗಳೂ ಖಾಲಿ ಇವೆ. ಲ್ಯಾಬ್ ಟೆಕ್ನಿಷಿಯನ್ 1 ಹುದ್ದೆ, ಗುಮಾಸ್ತ ಹುದ್ದೆ ಖಾಲಿ ಇವೆ. ಡಿ ಗ್ರೂಪ್ ನೌಕರರ 2 ಹುದ್ದೆಗಳು ಖಾಲಿ ಇದ್ದು, ಪ್ರಸ್ತುತ ಗುತ್ತಿಗೆ ಆಧಾರದಲ್ಲಿ ಇಬ್ಬರು ಕಾರ್ಯನಿರ್ವಹಿಸುತ್ತಿದ್ದಾರೆ. ಸ್ಟಾಫ್ ನರ್ಸ್ ಒಬ್ಬರು ಪರ್ಮನೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಯಂ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರು ನಿಯೋಜನೆಗೊಂಡು ಉಳ್ಳಾಲದಲ್ಲಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿಯೇ ಸಂಬಳ ಪಡೆಯುತ್ತಿರುವ ಅವರು ಕಾಯಂ ಆಗಿ ಇಲ್ಲಿಯೇ ಕರ್ತವ್ಯ ನಿರ್ವಹಿಸಬೇಕು. ಇಲ್ಲವೇ ಅವರನ್ನು ವರ್ಗಾವಣೆಗೊಳಿಸಿ ಬೇರೆ ವೈದ್ಯಾಧಿಕಾರಿ ನೇಮಕ ಮಾಡಬೇಕು ಎಂದು ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯಿತಿಯಲ್ಲಿ ಎರಡು ಬಾರಿ ನಿರ್ಣಯ ಮಾಡಿ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ರಾಮ ಮೇನಾಲ ನೆಟ್ಟಣಿಗೆ ಮುಡ್ನೂರು ಗ್ರಾಪಂ ಉಪಾಧ್ಯಕ್ಷ

ಈಶ್ವರಮಂಗಲದಲ್ಲಿ ಕಾಯಂ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ನಿಖಿಲ್ ಅವರನ್ನು ಉಳ್ಳಾಲ ಆಸ್ಪತ್ರೆಗೆ ನಿಯೋಜನೆ ಮಾಡಿರುವುದರಿಂದ ಸಮಸ್ಯೆಯಾಗಿದೆ. ಈ ಕುರಿತು ಸಂಬಂಧಪಟ್ಟವರಿಗೆ ಬರೆಯಲಾಗಿದೆ. ಪ್ರಸ್ತುತ ಡಾ.ನಿಖಿಲ್ ವಾರದಲ್ಲಿ 2 ದಿನ ಮತ್ತು ಪಾಣಾಜೆ ಆಸ್ಪತ್ರೆಯ ವೈದ್ಯರು ವಾರದಲ್ಲಿ 2 ದಿನ ಈಶ್ವರಮಂಗಲ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಡಾ.ನಿಖಿಲ್ ಅವರು ಈಶ್ವಮಂಗಲ ಆಸ್ಪತ್ರೆಯಲ್ಲಿ ಸಂಬಳ ಪಡೆಯುತ್ತಿರುವ ಕಾಯಂ ವೈದ್ಯರಾಗಿರುವುದರಿಂದ ಹೊಸ ವೈದ್ಯರ ನೇಮಕಕ್ಕೂ ಸಮಸ್ಯೆಯಾಗಿದೆ. ಡಾ.ದೀಪಕ್ ರೈ ಪುತ್ತೂರು ತಾಲೂಕು ಆರೋಗ್ಯಾಧಿಕಾರಿ https://www.vijayavani.net/honoring-to-achievers https://www.vijayavani.net/samvada-3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net