ಮೇಡಕ್: ಬಕ್ರೀದ್ ಹಬ್ಬದ ಪ್ರಯುಕ್ತ ಹಸುಗಳನ್ನು ಬಲಿ ಕೊಡಲು ಮುಂದಾಗಿದ್ದಾರೆ ಎಂದು ಆರೋಪಿಸಿ ಗುಂಪೊಂದು ಮದರಸಾ ಮೇಲೆ ದಾಳಿ ಮಾಡಿರುವ ಘಟನೆ ತೆಲಂಗಾಣದ ಮೇಡಕ್ನಲ್ಲಿ ನಡೆದಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಕ್ರೀದ್ ಹಬ್ಬದ ಪ್ರಯುಕ್ತ ಮಿರಾಜ್ ಉಲ್ ಉಲೂಮ್ ಮದರಸಾದ ಆಡಳಿತ ಮಂಡಳಿಯು ಬಕ್ರೀದ್ ನಿಮಿತ್ತ ಹಸುಗಳನ್ನು ಬಲಿಗಾಗಿ ಖರೀದಿಸಿತ್ತು. ಅವರು ದನಗಳನ್ನು ಕರೆತಂದ ಕೂಡಲೇ ಮದರಸಾದ ಸುತ್ತಲೂ ಗುಂಪು ಜಮಾಯಿಸಿ ಬಲಿಯನ್ನು ವಿರೋಧಿಸಿ ಪ್ರತಿಭಟನೆಯನ್ನು ನಡೆಸಿದ್ದರು. ವಿಚಾರ ತಿಳಿದು ಪೊಲೀಸರು ಸ್ಥಳಕ್ಕಾಗಮಿಸಿ ಗುಂಪನ್ನು ಚದರಿಸಿದರು.
ಈ ಕುರಿತು ಪ್ರತಿಕ್ರಿಯಿಸಿರುವ ಎಐಎಂಐಎಂ ಶಾಸಕ ಕೌಸರ್ ಮೊಹಿಯುದ್ದೀನ್, ಬಕ್ರೀದ್ ಪ್ರಯುಕ್ತ ಹಸುಗಳನ್ನು ಬಲಿ ಕೊಡುತ್ತಿದ್ದಾರೆ ಎಂದು ಆರೋಪಿಸಿ ಆರ್‌ಎಸ್‌ಎಸ್ ಹಾಗೂ ಬಿಜೆಪಿಯ ಸಾವಿರಾರು ಜನರು ಮದರಸಾ ಮೇಲೆ ದಾಳಿ ಮಾಡಿದ್ದಾರೆ. ಗಾಯಾಳುಗಳನ್ನು ದಾಖಲಿಸಿದ ಆಸ್ಪತ್ರೆ ಮೇಲೂ ದಾಳಿ ಮಾಡಿ ಧ್ವಂಸ ಮಾಡಿದ್ದಾರೆ.
ಹನುಮ ಜಯಂತಿ ವೇಳೆ ಇದೇ ರೀತಿಯ ಘಟನೆ ನಡೆದಿದ್ದು, ಹಲವು ಮುಸ್ಲಿಮರ ಮೇಲೆ ದಾಳಿ ನಡೆಸಿ ಅವರ ಅಂಗಡಿಗಳನ್ನು ಧ್ವಂಸ ಮಾಡಲಾಗಿದೆ. ಬಿಜೆಪಿ, ಆರ್‌ಎಸ್‌ಎಸ್ ಮತ್ತು ಹಿಂದೂ ವಾಹಿನಿ ರಾಜ್ಯದಲ್ಲಿ ಹಿಂಸಾಚಾರವನ್ನು ಪ್ರಚೋದಿಸುತ್ತದೆ ಮತ್ತು ಶಾಂತಿ ಕದಡುತ್ತಿದೆ ಎಂದು ಎಐಎಂಐಎಂ ಶಾಸಕ ಕೌಸರ್ ಮೊಹಿಯುದ್ದೀನ್ ಆರೋಪಿಸಿದ್ದಾರೆ.
ಇತ್ತ ಪ್ರಕರಣ ದಾಖಲಿಸಿಕೊಂಡಿರುವ ತನಿಖೆ ನಡೆಸುತ್ತಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆಯನ್ನು ವಹಿಸಿದ್ದಾರೆ. ಘಟನೆ ಸಂಬಂಧ ಹಲವರನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.