ಹಾವೇರಿ: ಸಿದ್ದರಾಮಯ್ಯ ನೇತೃತ್ವದ ನೂತನ ಕಾಂಗ್ರೆಸ್ ಸರ್ಕಾರ ಸಾಕಷ್ಟು ಸರ್ಕಸ್ ಮಾಡಿ ಕೊನೆಗೂ ನೂತನ ಸಚಿವರನ್ನು ಆಯ್ಕೆ ಮಾಡಿ ಖಾತೆ ಹಂಚಿಕೆಯನ್ನೂ ಮುಗಿಸಿದೆ. ಈ ನಡುವೆ ಸಚಿವ ಸ್ಥಾನ ಸಿಗದ ಕುರಿತು ಅಲ್ಲಲ್ಲಿ ಬೇಸರ ವ್ಯಕ್ತವಾಗುತ್ತಿದ್ದು, ಶಾಸಕರೊಬ್ಬರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಶಾಸಕ ರುದ್ರಪ್ಪ ಲಮಾಣಿ ತಮಗೆ ಸಚಿವ ಸ್ಥಾನ ಸಿಗದ ಕಾರಣಕ್ಕೆ ಬೇಸರವಾಗಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಹಾವೇರಿಯಲ್ಲಿ ಇಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ಬಂಜಾರ ಸಮುದಾಯದಿಂದ ಐವರಿಗೆ ಟಿಕೆಟ್ ನೀಡಿದ್ದರು, ಆ ಪೈಕಿ ನಾನು ಮಾತ್ರ ಗೆದ್ದಿದ್ದೆ. ಹೀಗಾಗಿ ನನಗೆ ಸಚಿವ ಸ್ಥಾನ ಕೊಡಬೇಕು ಅಂತ ತೀರ್ಮಾನಿಸಿದ್ದರು. ಸಿದ್ದರಾಮಯ್ಯ ಕೂಡ ಭರವಸೆ ನೀಡಿದ್ದರು, ಹೀಗಾಗಿ ನಾನು ಆಯ್ಕೆ ಸುಲಭದಲ್ಲಿ ಆಗಲಿದೆ ಅಂತ ಭಾವಿಸಿದ್ದಾಗಿ ಹೇಳಿದರು.
"ತಾಂಡಾ ಬಚಾವೊ, ಬಿಜೆಪಿ ಹಠಾವೊ" ಎಂಬ ಸಂದೇಶದೊಂದಿಗೆ ನಾವು ಚುನಾವಣೆ ಎದುರಿಸಿದ್ದೇವೆ. ಇಡೀ ನಮ್ಮ ಸಮುದಾಯ ಪಕ್ಷಕ್ಕೆ ಬೆಂಬಲ ಕೊಟ್ಟಿದೆ. ಹೀಗಾಗಿ ನನಗೆ ಸಚಿವ ಸ್ಥಾನ ಸಿಗದ್ದಕ್ಕೆ ನಮ್ಮ ಸಮಾಜದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಬದಲಾವಣೆ ಮಾಡುವುದಾಗಿ ಸಿಎಂ-ಡಿಸಿಎಂ ಕರೆದು ಮಾತಾಡಿದ್ದಾರೆ. ಅಲ್ಲಿಯತನಕ ನಮ್ಮ ಸಮಾಜದವರನ್ನು ಸಮಾಧಾನ ಮಾಡಬೇಕಾಗಿದೆ ಎಂದೂ ಲಮಾಣಿ ಹೇಳಿದ್ದಾರೆ.
ನಿಗಮ ಮಂಡಳಿ ಅಧ್ಯಕ್ಷಗಿರಿ ಕೊಡುವುದಾಗಿ ಸಿಎಂ ಹೇಳಿದ್ದಾರೆ. ಆದರೆ ನಮ್ಮ ಸಮುದಾಯ ಅದಕ್ಕೆ ಒಪ್ಪುವುದಿಲ್ಲ. ಮಂತ್ರಿಸ್ಥಾನ ಸಿಗದಿದ್ದಕ್ಕೆ ನನಗೆ ಬಹಳ ಮುಜುಗರ ಆಗಿದೆ. ಕಾಂಗ್ರೆಸ್ ಸರ್ಕಾರ ಬಂದಾಗ ಹಾವೇರಿಗೆ ಅನ್ಯಾಯ ಆಗುತ್ತಿರುವುದು ದುರದೃಷ್ಟಕರ, ಇನ್ನೊಬ್ಬರು ಇಲ್ಲಿಗೆ ಉಸ್ತುವಾರಿ ಆಗಿ ಬರುತ್ತಾರೆ ಎಂಬುದು ಬೇಸರದ ಸಂಗತಿ. ಸಚಿವ ಸ್ಥಾನ ಸಿಗದ ಬೇಸರದಿಂದಾಗಿ ನಾನು ಯಾವ ಸಭೆಗೂ ಹೋಗಿಲ್ಲ ಎಂಬುದಾಗಿ ಲಮಾಣಿ ಹೇಳಿಕೊಂಡಿದ್ದು, ಇದಕ್ಕೆಲ್ಲ ಹೈಕಮಾಂಡ್ ಬೇಗ ಇತಿಶ್ರೀ ಹಾಡಬೇಕು ಎಂದೂ ಹೇಳಿದ್ದಾರೆ.