Missing Doctor: ರಾತ್ರಿ ಊಟಕ್ಕೆ ಮನೆಗೆ ಬರುತ್ತೀನಿ ಎಂದು ತಾಯಿಗೆ ದೂರವಾಣಿ ಕರೆ ಮಾಡಿದ್ದ ವೈದ್ಯ, ಕಾಲ್ ಮಾಡಿದ ಕೆಲವೇ ಗಂಟೆಗಳಲ್ಲಿ ಅಟಲ್ ಸೇತುವೆ ಬಳಿ ಕಾರು ನಿಲ್ಲಿಸಿ ನೀರಿಗೆ ಜಿಗಿದಿರುವ ಘಟನೆ ಮುಂಬೈನಲ್ಲಿ ವರದಿಯಾಗಿದೆ.
ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್‌ನಲ್ಲಿ ತನ್ನ ಕಾರನ್ನು ನಿಲ್ಲಿಸಿದ ವೈದ್ಯ, ಸೇತುವೆಯಿಂದ ನೀರಿಗೆ ಜಿಗಿದು ಆತ್ಮಹತ್ಯೆಗೆ ಶರಣಾಗಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಕಳೆದ ಎರಡು ದಿನಗಳಿಂದ ಪೊಲೀಸರು ಮತ್ತು ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ವೈದ್ಯನ ಸುಳಿವಿಗಾಗಿ ಶೋಧ ನಡೆಸುತ್ತಿದ್ದಾರೆ. ಆದರೆ, ಇಲ್ಲಿಯವರೆಗೆ ಯಾವುದೇ ಮಾಹಿತಿ ಅಥವಾ ಸುಳಿವು ಲಭಿಸಿಲ್ಲ.
ನಾಪತ್ತೆಯಾಗಿರುವ ವೈದ್ಯನನ್ನು ಡಾ. ಓಂಕಾರ್ ಕವಿಟ್ಕೆ ಎಂದು ಗುರುತಿಸಲಾಗಿದೆ. ಮುಂಬೈನ ಜೆಜೆ ಆಸ್ಪತ್ರೆಯಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ ಓಂಕಾರ್, ಜುಲೈ 7ರಂದು ತನ್ನ ಕಾರಿನಲ್ಲಿ ಆಸ್ಪತ್ರೆಯಿಂದ ಹೊರ ಹೋಗಿದ್ದಾರೆ. ಈ ವೇಳೆ ತನ್ನ ತಾಯಿಗೆ ಕರೆ ಮಾಡಿ, ರಾತ್ರಿ ಮನೆ ಊಟಕ್ಕೆ ಬರುತ್ತೀನಿ ಎಂದು ಹೇಳಿರುವುದಾಗಿ ವರದಿಯಾಗಿದೆ. ಆದಾಗ್ಯೂ, ರಾತ್ರಿ 9.43ರ ಸುಮಾರಿಗೆ, ಮುಂಬೈ ಮತ್ತು ನವಿ ಮುಂಬೈಯನ್ನು ಸಂಪರ್ಕಿಸುವ ಅಟಲ್ ಸೇತು ಸೇತುವೆ ಬಳಿ ಕಾರು ನಿಲ್ಲಿಸಿರುವುದು ಪೊಲೀಸ್ ಕಂಟ್ರೋಲ್ ರೂಮ್ಗೆ ಮಾಹಿತಿ ದೊರೆತಿದೆ.
ಇದನ್ನೂ ಓದಿ: ಕೃಷಿ ಗದ್ದೆಯಲ್ಲಿ ತುಂಬಿದ ಕೆಸರು ಎಡಪದವಿನ ಸನಿಲದಲ್ಲಿ ಅವೈಜ್ಞಾನಿಕ ಕಾಮಗಾರಿ : ರಸ್ತೆ ಬಿರುಕು, ಮನೆಗೆ ಅಪಾಯ
ವೈದ್ಯ ನಾಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರಿಗೆ ಅಟಲ್ ಸೇತುವೆ ಪಕ್ಕದಲ್ಲಿದ್ದ ಕಾರು ಮತ್ತು ಐಫೋನ್ ಪತ್ತೆಯಾಗಿದೆ. ಈ ವೇಳೆ ಕಾರು ಮತ್ತು ಫೋನ್ ಡಾ. ಕವಿಟ್ಕೆ ಅವರದ್ದೇ ಎಂದು ಖಚಿತಪಡಿಸಿಕೊಳ್ಳಲು ಫೋನ್‌ನಲ್ಲಿರುವ ಕಾರಿನ ಸಂಖ್ಯೆ ಮತ್ತು ವಿವರಗಳನ್ನು ಟ್ರೇಸ್ ಮಾಡಲಾಗಿದೆ. ಎರಡು ದಿನಗಳು ಕಳೆದರೂ ವೈದ್ಯನ ಸುಳಿವು ಸಿಗದ ಹಿನ್ನಲೆ ಖಾಕಿ ಪಡೆ, ಓಂಕಾರ್ ಬಗ್ಗೆ ಯಾವುದೇ ಮಾಹಿತಿಯಿದ್ದರೂ ಅದನ್ನು ತಮ್ಮೊಂದಿಗೆ ಹಂಚಿಕೊಳ್ಳುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ,(ಏಜೆನ್ಸೀಸ್).