ನ್ಯೂಸ್

ತೆಲುಗು ನಟ ಮೋಹನ್​ ಬಾಬುಗೆ ಕೊಲೆ ಬೆದರಿಕೆ ಹಾಕಿದವರ ಸ್ಥಿತಿ ಇದೀಗ ಏನಾಗಿದೆ ಗೊತ್ತಾ?

ಸಿನಿಮಾ ಕಲಾವಿದರಿಗೆ ಇತ್ತೀಚಿನ ದಿನಗಳಲ್ಲಿ ಒಂದಲ್ಲ ಒಂದು ರೀತಿ ಬೆದರಿಕೆ ಕರೆಗಳು ಬರುತ್ತಿವೆ. ರಜನಿಕಾಂತ್​ ಮನೆಯಲ್ಲಿ ಬಾಂಬ್​ ಇಟ್ಟಿರುವ ಸುಳ್ಳು ಸುದ್ದಿ ಕಳೆದ ತಿಂಗಳು ಹರಿದಾಡಿತ್ತು. ದಳಪತಿ ವಿಜಯ್​ ಸೇರಿ ಇನ್ನೂ ಹಲವು ನಟರಿಗೆ ಈ ರೀತಿ ಬೆದರಿಕೆ ಹಾಕಲಾಗಿತ್ತು. ಹೀಗಿರುವಾಗಲೇ ಶನಿವಾರ ರಾತ್ರಿ ತೆಲುಗು ನಟ ಮೋಹನ್​ ಬಾಬು ಮನೆಗೇ ನುಗ್ಗಿ ಕೊಲೆ ಬೆದರಿಕೆ ಹಾಕಿದ ಗುಂಪನ್ನು ಪೊಲೀಸರು ಕೆಲವೇ ಗಂಟೆಯಲ್ಲಿ ವಶಕ್ಕೆ ಪಡೆದಿದ್ದಾರೆ.

ಶಂಶಾಬಾದ್​ ವಿಮಾನ ನಿಲ್ದಾಣದ ಬಳಿ ಮೋಹನ್​ ಬಾಬು ನಿವಾಸವಿದೆ. ರಾತ್ರೋರಾತ್ರಿ ನಾಲ್ವರು ಇನೋವಾ ಕಾರಿನಲ್ಲಿ ಆಗಮಿಸಿ, ಭದ್ರತಾ ಸಿಬ್ಬಂದಿಗೆ ಬೆದರಿಸಿ, ಮನೆಯ ಗೇಟ್​ ಗುದ್ದಿಕೊಂಡು ಗಲಾಟೆ ಮಾಡಿತ್ತು. ಮನೆಗೆ ನುಗ್ಗಿ ಕೊಲೆ ಬೆದರಿಕೆ ಸಹ ಹಾಕಿತ್ತು. ಕೂಡಲೇ ಪಹಡಿ ಶರೀಫ್​ ಪೊಲೀಸ್​ ಠಾಣೆಗೆ ಕರೆ ಮಾಡಿ, ಘಟನೆ ಬಗ್ಗೆ ವಿವರಿಸಿ ದೂರು ನೀಡಿದ್ದರು.

ಅದರಂತೆ ಬೆಳಗಾಗುವಷ್ಟರಲ್ಲಿಯೇ ಸಿಸಿಟಿವಿ ಆಧರಿಸಿ, ಕೆಲವೇ ಗಂಟೆಗಳಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ರಾಘವೇಂದ್ರ, ಆನಂದ್​, ಗೌತಮ್​, ಡೇವಿಡ್​ ಬಂಧಿತರಾಗಿದ್ದು, ವಿಜಯಲಕ್ಷ್ಮೀ ಎಂಬುವವರ ಹೆಸರಿನಲ್ಲಿ ವಾಹನ ನೋಂದಣಿಯಾಗಿರುವ ಮಾಹಿತಿ ಲಭ್ಯವಾಗಿದೆ. (ಏಜೆನ್ಸೀಸ್​)