ನ್ಯೂಸ್

ಮಂಡ್ಯದಲ್ಲಿ ಬಂಕ್​ಗೆ ನುಗ್ಗಿ 10 ಲಕ್ಷ ರೂ. ಮೌಲ್ಯದ ಪೆಟ್ರೋಲ್​, ಡೀಸೆಲ್​ ರಸ್ತೆಗೆ ಹರಿಬಿಟ್ಟ ದುಷ್ಕರ್ಮಿಗಳು!

ಮಂಡ್ಯ: ರಾತ್ರೋರಾತ್ರಿ ಪೆಟ್ರೋಲ್​ ಬಂಕ್​ಗೆ ನುಗ್ಗಿದ ದುಷ್ಕರ್ಮಿಗಳು ಪಂಪ್​ನಿಂದ ಪೆಟ್ರೋಲ್​ ಹೊರಬಿಟ್ಟು, ಸುಮಾರು 10 ಲಕ್ಷ ರೂ. ಮೌಲ್ಯದ ಇಂಧನ ವ್ಯರ್ಥ ಮಾಡುವ ಮೂಲಕ ಅಟ್ಟಹಾಸವನ್ನು ಮೆರೆದಿದ್ದಾರೆ.

ಈ ಘಟನೆ ಪಾಂಡವಪುರ ತಾಲ್ಲೂಕಿನ ಬೇಬಿ ಗ್ರಾಮದ ಬಳಿಯ ಇಂಡಿಯನ್ ಪೆಟ್ರೋಲ್​ ಬಂಕ್​ನಲ್ಲಿ ನಡೆದಿದೆ. ಬಂಕ್​ನ ಸಿಬ್ಬಂದಿ, ರಾತ್ರಿ ಊಟಕ್ಕೆ ತೆರಳಿದ ಸಮಯದಲ್ಲಿ ಬಂಕ್​ಗೆ ನುಗ್ಗಿದ ದುಷ್ಕರ್ಮಿಗಳು ಜನರೇಟರ್ ಆನ್ ಮಾಡಿ, ಪೆಟ್ರೋಲ್ ಹಾಗೂ ಡೀಸೆಲ್ ಪಂಪ್​ ಓಪನ್​ ಮಾಡಿ ಹೊರಗೆ ಬಿಟ್ಟು ಪರಾರಿಯಾಗಿದ್ದಾರೆ.

ಭಸ್ತಿರಂಗಪ್ಪ ಎಂಬುವವರಿಗೆ ಸೇರಿದ ಪೆಟ್ರೋಲ್ ಬಂಕ್​ನಲ್ಲಿ ಕಿಡಿಗೇಡಿಗಳು ಈ ಅಟ್ಟಹಾಸ ಮೆರೆದಿದ್ದಾರೆ. ಕಳೆದ ಎರಡು ತಿಂಗಳ ಹಿಂದೆಯಷ್ಟೆ ಪೆಟ್ರೋಲ್ ಬಂಕ್ ಶುರುಮಾಡಿದ್ದರು. ಸುಮಾರು 10 ಲಕ್ಷ ರೂ. ಮೌಲ್ಯದ ಪೆಟ್ರೋಲ್ ಹಾಗೂ ಡೀಸೆಲ್​, ರಸ್ತೆಗೆ ಹರಿದು ಹೋಗಿದೆ.

ಎಂಟು ಸಾವಿರ ಲೀಟರ್ ಪೆಟ್ರೋಲ್ ಹಾಗೂ ಎರಡು ಸಾವಿರ ಲೀಟರ್ ಡೀಸೆಲ್ ಸಂಪೂರ್ಣ ನಾಶವಾಗಿದೆ. ಸ್ವಲ್ಪ ಬೆಂಕಿ ಹಚ್ಚಿದರೂ ಭಾರೀ ಅನಾಹುತ ಸಂಭವಿಸುತ್ತಿತ್ತು. ಈ ಘಟನೆ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್​)