ಜೈಪುರ: ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿ ದುಷ್ಕರ್ಮಿಗಳ ಗುಂಪೊಂದು ಹೋಟೆಲ್ ಒಂದರ ಮೇಲೆ ಗುಂಡಿನ ದಾಳಿ ನಡೆಸಿ 50 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ಅಲ್ವಾರ್ನಲ್ಲಿ ನಡೆದಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚುನಾವಣೆಯ ಹೊಸ್ತಿಲಲ್ಲಿ ಈ ರೀತಿಯ ಘಟನೆ ನಡೆದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇತ್ತ ಘಟನೆಯು ಆಡಳಿತರೂಢ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಹೋಟೆಲ್ಗೆ ಆಗಮಿಸುವ ಮುಸುಕುಧಾರಿಗಳಿಬ್ಬರು ಏಕಾಏಕಿ ಗಾಳಿಯಲ್ಲಿ ಗುಂಡು ಹಾರಿಸಲು ಶುರು ಮಾಡುತ್ತಾರೆ. ಈ ವೇಳೆ ಅಲ್ಲಿದ್ದ ಜನರು ಭಯದಿಂದ ಓಡಿ ಹೋಗಲು ಶುರು ಮಾಡಿದ್ದು, ವ್ಯಕ್ತಿಗಳಿಬ್ಬರು ಚೀಟಿ ಒಂದನ್ನು ಎಸೆದು ಪರಾರಿಯಾಗುತ್ತಾರೆ. ಬಳಿಕ ಚೀಟಿ ತೆಗೆದು ಪರಿಶೀಲಿಸಿದಾಗ ಅದರಲ್ಲಿ 50 ಲಕ್ಷ ರೂಪಾಯಿ ಹಣ ಕೊಡುವಂತೆ ಬೇಡಿಕೆ ಇಟ್ಟಿರುವುದು ಕಂಡು ಬರುತ್ತದೆ.
ಇದನ್ನೂ ಓದಿ: ಬಿಜೆಪಿಯ ಇಂದಿನ ಸ್ಥಿತಿ ಚಿಂತಿಸಿ ಮಾಜಿ ಸಿಎಂ ಬೊಮ್ಮಾಯಿಗೆ ಹಾರ್ಟ್ ಅಟ್ಯಾಕ್ ಆಗಿದೆ; ಕಾಂಗ್ರೆಸ್ ಶಾಸಕ ಕೋನರೆಡ್ಡಿ ವ್ಯಂಗ್ಯ
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಇಬ್ಬರು ದುಷ್ಕರ್ಮಿಗಳು ಹೋಟೆಲ್ ಒಂದರ ಮುಂಭಾಗ ಐದು ಸುತ್ತು ಗುಂಡು ಹಾರಿಸಿದ್ದು, ನಿರ್ದಿಷ್ಟ ಅವಧಿಯೊಳಗೆ 50 ಲಕ್ಷ ರೂಪಾಯಿ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ತಂಡ ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತ ಘಟನೆ ಬೆಳಕಿಗೆ ಬರುತ್ತಿದ್ದಂತೆ ಆಡಳಿತರೂಢ ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿರುವ ಬಿಜೆಪಿ ಇದೊಂದು ನಾಚಿಕೆಗೇಡಿನ ಸಂಗತಿಯಾಗಿದ್ದು, ಇಡೀ ರಾಜ್ಯವೇ ತಲೆತಗ್ಗಿಸುವಂತಾಗಿದೆ. ರಾಜಸ್ಥಾನವನ್ನು ಅಪರಾಧದ ರಾಜ್ಯವನ್ನಾಗಿಸಿದ ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.