ನವದೆಹಲಿ: ದೇಶದಲ್ಲಿ ಹೊಸ ಶಿಕ್ಷಣ ನೀತಿಯನ್ನು (ಎನ್ಇಪಿ) ತರಲಾಗಿದೆ. ಈ ನೀತಿಯ ಅನುಸಾರ ಶಾಲೆಗೆ ಮಕ್ಕಳು ತೆಗೆದುಕೊಂಡು ಹೋಗುವ ಬ್ಯಾಗಿನ ತೂಕವೂ ಇಳಿಯಲಿದೆ. ಅದರ ಜತೆ ಹೋಂ ವರ್ಕ್ನಲ್ಲೂ ಸಾಕಷ್ಟು ಸಡಿಲಿಕೆ ಮಾಡಲಾಗಿದೆ. ಈ ಕುರಿತಾಗಿ ಕೇಂದ್ರ ಶಿಕ್ಷಣ ಸಚಿವಾಲಯವು ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಇದನ್ನೂ ಓದಿ: ಹನುಮ ದೇವಸ್ಥಾನಕ್ಕೆ 50 ಲಕ್ಷ ಮೌಲ್ಯದ ಜಾಗ ದಾನ ಮಾಡಿದ ಮುಸ್ಲಿಂ ವ್ಯಕ್ತಿ! ಭಕ್ತರ ಕಷ್ಟ ನೋಡಲಾಗದೆ ದಾನ ಮಾಡಿದರಂತೆ
1ರಿಂದ 10ನೇ ತರಗತಿ ವಿದ್ಯಾರ್ಥಿಗಳ ಶಾಲಾ ಚೀಲಗಳ ತೂಕವನ್ನು ವಿದ್ಯಾರ್ಥಿಗಳ ತೂಕದ ಶೇಕಡಾ 10 ಕ್ಕೆ ನಿಗದಿಪಡಿಸಲಾಗಿದೆ. ಪ್ರತಿ ಶಾಲೆಯಲ್ಲಿ ಬ್ಯಾಗ್ ತೂಕ ಮಾಡಲೆಂದೇ ಡಿಜಿಟಲ್ ತಕ್ಕಡಿ ಇಡಲಾಗುವುದು. ಹಾಗೆಯೇ 2 ತರಗತಿವರೆಗಿನ ಮಕ್ಕಳಿಗೆ ಹೋಂ ವರ್ಕ್ ಕೊಡುವಂತಿಲ್ಲ. ಆ ಮಕ್ಕಳು ಶಾಲೆಯಲ್ಲಿ ಮಾತ್ರ ಕಲಿಯಲಿದ್ದಾರೆ ಎಂದು ತಿಳಿಸಲಾಗಿದೆ.
ಶಾಲಾ ಆವರಣದಲ್ಲಿ ಲಾಕರ್ಗಳು, ಡಿಜಿಟಲ್ ತಕ್ಕಡಿ, ಕುಡಿಯುವ ನೀರನ್ನು ಇಡುವುದು ಅತ್ಯಗತ್ಯ. ಟ್ರಾಲಿ ಬ್ಯಾಗ್ ಬಳಕೆಗೆ ನಿಷೇಧ ಹೇರಲಾಗಿದೆ. ಎರಡು ಬಗಲಿಗೆ ಹಾಕುವಂತ ಬ್ಯಾಗ್ಗಳನ್ನು ಮಾತ್ರವೇ ಅವಕಾಶ. ಟ್ರಾಲಿ ಬ್ಯಾಗ್ಗಳನ್ನು ಮೆಟ್ಟಿಲಿನಲ್ಲಿ ಎತ್ತಿಕೊಂಡು ಹೋಗುವಾಗ ವಿದ್ಯಾರ್ಥಿಗಳಿಗೆ ಹಾನಿ ಆಗಬಹುದು ಎಂದು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಂತರರಾಷ್ಟ್ರೀಯ ಸಂಸ್ಥೆಗಳ ಶಿಫಾರಸುಗಳನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.
ಇದರ ಜತೆಗೆ ಮಕ್ಕಳಿಗೆ ನೀಡಲಾಗುವ ಪುಸ್ತಕದ ತೂಕವನ್ನು ಪರಿಗಣಿಸಬೇಕಿದೆ. ಪ್ರತಿ ಪುಸ್ತಕದ ತೂಕವನ್ನು ಪ್ರತಿ ಚದರ ಮೀಟರ್ (ಜಿಎಸ್‌ಎಂ) ಲೆಕ್ಕದಲ್ಲಿ ಪ್ರಕಾಶಕರು ಪುಸ್ತಕದಲ್ಲಿ ಮುದ್ರಿಸಬೇಕು ಎಂದು ಹೇಳಲಾಗಿದೆ. (ಏಜೆನ್ಸೀಸ್)