ರಾಯಚೂರು: ಲೋಕಸಭೆ ಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ರಾಜ್ಯದಲ್ಲಿ ಎರಡನೇ ಹಂತದ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವ ಸಮಯದಲ್ಲಿ ರಾಜಕೀಯ ಪಕ್ಷಗಳ ನಾಯಕರು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹ್ಮದ್ ನೀಡಿರುವ ಹೇಳಿಕೆ ಸಖತ್ ವೈರಲ್ ಆಗುತ್ತಿದ್ದು, ಪರ-ವಿರೋಧದ ಚರ್ಚೆ ನಡೆಯುತ್ತಿದೆ.
ರಾಯಚೂರಿನಲ್ಲಿ ಇತ್ತೀಚಿಗೆ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಕೆಲವರು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಸಚಿವ ಜಮೀರ್ ರಾಯಚೂರಿನ ಸಿಂಧನೂರಿನಲ್ಲಿ ಪ್ರತಿಕ್ರಿಯಿಸಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಆತ ಅದ್ಭುತ ಆಟಗಾರ ಆದರೆ…; ಕೆ.ಎಲ್. ರಾಹುಲ್ರನ್ನು ಆಯ್ಕೆ ಮಾಡದಿರುವ ಕುರಿತು ಅಜಿತ್ ಅಗರ್ಕರ್ ನೀಡಿದ ಸ್ಪಷ್ಟನೆ ಹೀಗಿದೆ
ಸಾರ್ವಜನಿಕ ಪ್ರದೇಶಗಳಲ್ಲಿ ಯಾರಾದರು ಪಾಕಿಸ್ತಾನ ಜಿಂದಾಬಾದ್ ಅಂದರೆ ನಮಗೆ ತಿಳಿಸಿ ನಾವು ಅವರನ್ನ ಗಲ್ಲಿಗೇರಿಸಲ್ಲ, ಬದಲಿಗೆ ನಾವೇ ಡಿಶುಂ ಡಿಶುಂ ಎಂದು ಶೂಟ್ ಮಾಡಿ ಸಾಯಿಸುತ್ತೇವೆ. ಬಿಜೆಪಿಯವರಿಗೆ ಇದೇ ಬೇಕಾಗಿರುವುದು, ಹಾಗಾಗಿ ಇನ್ಮುಂದೆ ಯಾರಾದರೂ ಪಾಕಿಸ್ತಾನ ಪರ ಘೋಷಣೆ ಕೂಗಿದರೆ ಸರ್ಕಾರವೇ ಅವರನ್ನು ಗುಂಡಿಟ್ಟು ಸಾಯಿಸಲಿದೆ ಎಂದು ಹೇಳಿದ್ಧಾರೆ.
ಕೆಲ ದಿನಗಳ ಹಿಂದೆ ಬೆಳಗಾವಿಯ ಗೋಕಾಕ್ನಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡುವ ವೇಳೆ ಪೋಡಿಯಂ ಹೊಡೆದುಹಾಕುವ ಮೂಲಕ ಸಚಿವ ಜಮೀರ್ ಸುದ್ದಿಯಾಗಿದ್ದರು. ಇದೀಗ ಶೂಟ್ ಮಾಡುತ್ತೇವೆ ಎಂದು ಹೇಳುವ ಮೂಲಕ ಸಚಿವ ಜಮೀರ್ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಫೆಬ್ರವರಿ ತಿಂಗಳಲ್ಲಿ ನಡೆದ ರಾಜ್ಯಸಭೆ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಸದಸ್ಯ ನಾಸೀರ್ ಹುಸೇನ್ ಬೆಂಬಲಿಗರು ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರು. ಪ್ರಕರಣ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು.