ರಷ್ಯಾ-ಯೂಕ್ರೇನ್ ಯುದ್ಧ ಹಾಗೂ ಚೀನಾದ ಆಕ್ರಮಣಕಾರಿ ಧೋರಣೆ ಪರಿಣಾಮವಾಗಿ 2022ನೇ ಸಾಲಿನಲ್ಲಿ ಒಟ್ಟು ಜಾಗತಿಕ ರಕ್ಷಣಾ ವೆಚ್ಚವು ದಾಖಲೆಯ ಮಟ್ಟಕ್ಕೆ ತಲುಪಿದೆ. ಜಗತ್ತಿನ ಎಲ್ಲ ರಾಷ್ಟ್ರಗಳ ಮಿಲಿಟರಿ ವೆಚ್ಚವು ಸರಾಸರಿ ಶೇ. 3.7ರಷ್ಟು ಹೆಚ್ಚಳವನ್ನು ಕಂಡು ಅಭೂತಪೂರ್ವ ಗರಿಷ್ಠ ಮಟ್ಟವಾದ 2.24 ಲಕ್ಷ ಕೋಟಿ ಡಾಲರ್ (183.75 ಲಕ್ಷ ಕೋಟಿ ರೂಪಾಯಿ)ತಲುಪಿದೆ ಎಂದು ಸ್ಟಾಕ್ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (ಸಿಪ್ರಿ) ವರದಿ ತಿಳಿಸಿದೆ.
ಭಾರತವು 81.4 ಶತಕೋಟಿ ಡಾಲರ್ (6,67,743 ಕೋಟಿ ರೂಪಾಯಿ) ಶಸ್ತ್ರಾಸ್ತ್ರಗಳ ಬಜೆಟ್ನೊಂದಿಗೆ ವಿಶ್ವದ ಅಗ್ರ ಐದು ಮಿಲಿಟರಿ ಖರ್ಚು ಮಾಡುವ ರಾಷ್ಟ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಅಮೆರಿಕವು 877 ಶತಕೋಟಿ ಡಾಲರ್ (71,94,237 ಕೋಟಿ ರೂಪಾಯಿ) ವೆಚ್ಚದೊಂದಿಗೆ ಮೊದಲ ಸ್ಥಾನದಲ್ಲಿದೆ. ಚೀನಾ 292 ಶತಕೋಟಿ ಡಾಲರ್ (23,95,345 ಕೋಟಿ ರೂಪಾಯಿ) ವ್ಯಯಿಸಿ ಎರಡನೇ ಸ್ಥಾನದಲ್ಲಿದೆ.
86.4 ಶತಕೋಟಿ ಡಾಲರ್ (7,08,760 ಕೋಟಿ ರೂಪಾಯಿ) ರಕ್ಷಣಾ ಬಜೆಟ್ನೊಂದಿಗೆ ರಷ್ಯಾ ಮೂರನೇ ಸ್ಥಾನದಲ್ಲಿದೆ. ಇದು ಪ್ರತಿಸ್ಪರ್ಧಿಯಾದ ಅಮೆರಿಕದ ವೆಚ್ಚಕ್ಕೆ ಹೋಲಿಸಿದರೆ ಹತ್ತನೆಯ ಒಂದು ಭಾಗಕ್ಕಿಂತಲೂ ಕಡಿಮೆ ಇದೆ. ರಷ್ಯಾದ ನಂತರ ನಾಲ್ಕನೇ ಸ್ಥಾನದಲ್ಲಿ ಭಾರತ ಇದೆ.
ಸೌದಿ ಅರೇಬಿಯಾವು 75 ಶತಕೋಟಿ ಡಾಲರ್ (6,15,243 ಕೋಟಿ ರೂಪಾಯಿ) ಖರ್ಚು ಮಾಡುವುದರೊಂದಿಗೆ ಅಗ್ರ ಐದು ಸ್ಥಾನಗಳಲ್ಲಿ ಮುಂದುವರಿದಿದೆ. 2022ರಲ್ಲಿ ಅಮೆರಿಕ, ಚೀನಾ ಮತ್ತು ರಷ್ಯಾ.. ಈ ಮೂರು ದೇಶಗಳ ಒಟ್ಟು ಮಿಲಿಟರಿ ವೆಚ್ಚವು ಇಡೀ ಜಗತ್ತು ಮಾಡಿದ ಒಟ್ಟಾರೆ ಖರ್ಚಿನ ಶೇ. 56ರಷ್ಟಾಗಿದೆ.
ಅಮೆರಿಕವು ವಿಶ್ವದಲ್ಲಿಯೇ ಮಿಲಿಟರಿಗಾಗಿ ಅತಿಹೆಚ್ಚು ಹಣ ಮೀಸಲಿಡುವ ದೇಶವಾಗಿ ಮುಂದುವರಿದಿದೆ. ಈ ದೇಶದ ಮಿಲಿಟರಿ ವೆಚ್ಚವು 2022ರಲ್ಲಿ 877 ಶತಕೋಟಿ ಡಾಲರ್ ತಲುಪಿದ್ದು, ಇದು ಒಟ್ಟು ಜಾಗತಿಕ ಮಿಲಿಟರಿ ವೆಚ್ಚದ 39 ಪ್ರತಿಶತವಾಗಿದೆ. ವಿಶ್ವದಲ್ಲಿಯೇ ಎರಡನೇ ಅತಿ ಹೆಚ್ಚು ಖರ್ಚು ಮಾಡುವ ಚೀನಾಗಿಂತ ಈ ಖರ್ಚು ಮೂರು ಪಟ್ಟು ಹೆಚ್ಚಾಗಿದೆ. 1981ರ ನಂತರದ ಅವಧಿಯಲ್ಲಿ ಅಮೆರಿಕವು ಈಗ ಅತಿಹೆಚ್ಚಿನ ಹಣದುಬ್ಬರ (ಬೆಲೆ ಏರಿಕೆ) ಸಮಸ್ಯೆಯನ್ನು ಎದುರಿಸುತ್ತಿದೆ. ಒಂದು ವೇಳೆ ಈ ಸಮಸ್ಯೆ ಇಲ್ಲದಿದ್ದರೆ ಅಮೆರಿಕದ ಮಿಲಿಟರಿ ವೆಚ್ಚವು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಸ್ಪಷ್ಟವಾಗಿತ್ತು.
2022ರಲ್ಲಿ ಯೂಕ್ರೇನ್ಗೆ ಅಮೆರಿಕದ ಆರ್ಥಿಕ ಮತ್ತು ಮಿಲಿಟರಿ ನೆರವು ಒಟ್ಟು 19.9 ಶತಕೋಟಿ ಡಾಲರ್ (1,62,695 ಲಕ್ಷ ಕೋಟಿ ರೂಪಾಯಿ) ಆಗಿತ್ತು. ಶೀತಲ ಸಮರದ ನಂತರದ ದಿನಗಳಲ್ಲಿ ಯಾವುದೇ ವರ್ಷದಲ್ಲಿ ಯಾವುದೇ ಒಂದು ದೇಶಕ್ಕೆ ಅಮೆರಿಕ ನೀಡಿದ ಅತಿದೊಡ್ಡ ಸೇನಾ ಬೆಂಬಲ ಇದಾಗಿದೆ. ಈ ಮೊತ್ತವು ಅಮೆರಿಕ ಒಟ್ಟು ಮಿಲಿಟರಿ ವೆಚ್ಚದ 2.3 ಪ್ರತಿಶತ ಮಾತ್ರವಾಗಿದೆ. ಏಷ್ಯಾ ಮತ್ತು ಓಷಿಯಾನಾ ದೇಶಗಳ ಸಂಯೋಜಿತ ಸೇನಾ ವೆಚ್ಚವು 575 ಬಿಲಿಯನ್ ಡಾಲರ್ ಆಗಿದೆ. ಇದು 2021ಕ್ಕಿಂತ 2.7 ರಷ್ಟು ಹೆಚ್ಚು ಮತ್ತು 2013ಕ್ಕಿಂತ ಶೇ. 45 ರಷ್ಟು ಅಧಿಕವಾಗಿದೆ. ಚೀನಾ ವಿಶ್ವದ ಎರಡನೇ ಅತಿದೊಡ್ಡ ಮಿಲಿಟರಿ ಖರ್ಚು ಮಾಡುವ ದೇಶವಾಗಿ ಮುಂದುವರಿದಿದ್ದು, 2022 ರಲ್ಲಿ ಅಂದಾಜು 292 ಶತಕೋಟಿ ಡಾಲರ್ ವ್ಯಯಿಸಿದೆ. 2021ಕ್ಕೆ ಹೋಲಿಸಿದರೆ ಇದು ಶೇ. 4.2 ಮತ್ತು 2013ಕ್ಕೆ ಹೋಲಿಸಿದರೆ ಶೇ. 63ರಷ್ಟು ಅಧಿಕವಾಗಿದೆ. ಚೀನಾದ ಸೇನಾ ವೆಚ್ಚವು ಸತತ 28 ವರ್ಷಗಳಿಂದ ಹೆಚ್ಚುತ್ತಲೇ ಸಾಗಿದೆ. ಹಿಮಾಲಯದ ಗಡಿಯಲ್ಲಿ ಭಾರತ- ಚೀನಾ ನಡುವೆ ಉದ್ವಿಗ್ನತೆ ಹೆಚ್ಚಿದ ಸಮಯದಲ್ಲಿ ಚೀನಾದ ಮಿಲಿಟರಿ ವೆಚ್ಚವು ಭಾರತಕ್ಕಿಂತ ಮೂರೂವರೆ ಪಟ್ಟು ಹೆಚ್ಚಾಗಿದೆ.
ಸಮರದಿಂದ ರಷ್ಯಾ ಖರ್ಚು ಹೆಚ್ಚಳ: ರಷ್ಯಾದ ಮಿಲಿಟರಿ ವೆಚ್ಚವು 2022ರಲ್ಲಿ ಶೇಕಡಾ 9.2ರಷ್ಟು ಹೆಚ್ಚಳವಾಗಿ 86.4 ಶತಕೋಟಿ ಡಾಲರ್ಗೆ ಏರಿದೆ. ಇದು 2022ರಲ್ಲಿ ರಷ್ಯಾದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) 4.1 ಪ್ರತಿಶತಕ್ಕೆ ಸಮನಾಗಿದೆ. 2021ರಲ್ಲಿ ರಷ್ಯಾವು ತನ್ನ ಜಿಡಿಪಿಯ 3.7 ಪ್ರತಿಶತದಷ್ಟು ಹಣವನ್ನು ಮಿಲಿಟರಿಗೆ ವ್ಯಯಿಸಿತ್ತು. 2021ರಲ್ಲಿ ರೂಪಿಸಲಾದ ಬಜೆಟ್ ಯೋಜನೆಗಿಂತ ಶೇಕಡಾ 34ರಷ್ಟು ಹೆಚ್ಚು ಹಣವನ್ನು ಮಿಲಿಟರಿಗೆ ವ್ಯಯಿಸಿರುವುದನ್ನು 2022ರ ಕೊನೆಯಲ್ಲಿ ರಷ್ಯಾ ಬಿಡುಗಡೆ ಮಾಡಿರುವ ಅಂಕಿಅಂಶಗಳು ತೋರಿಸುತ್ತವೆ.
ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ಮಿಲಿಟರಿ ವೆಚ್ಚದಲ್ಲಿ ನಿರಂತರ ಏರಿಕೆಯು ನಾವು ಹೆಚ್ಚು ಅಸುರಕ್ಷಿತ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ ಎಂಬುದರ ಸಂಕೇತವಾಗಿದೆ. ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಗೆ ಪ್ರತಿಕ್ರಿಯೆಯಾಗಿ ದೇಶಗಳು ಮಿಲಿಟರಿ ಶಕ್ತಿಯನ್ನು ಹೆಚ್ಚಿಸುತ್ತಿವೆ. ಮುಂದಿನ ದಿನಗಳಲ್ಲಿ ಸುಧಾರಣೆಯನ್ನು ನಿರೀಕ್ಷಿಸಲಾಗದು. | ಡಾ. ನ್ಯಾನ್ ಟಿಯಾನ್ ಸಿಪ್ರಿಯ ಮಿಲಿಟರಿ ವೆಚ್ಚ ಮತ್ತು ಶಸ್ತ್ರಾಸ್ತ್ರ ಉತ್ಪಾದನಾ ಕಾರ್ಯಕ್ರಮದ ಹಿರಿಯ ಸಂಶೋಧಕ
ಗಡಿ ಉದ್ವಿಗ್ನತೆ ಕಾರಣ: ಚೀನಾ ಮತ್ತು ಪಾಕಿಸ್ತಾನದೊಂದಿ ಗಿನ ಗಡಿ ಉದ್ವಿಗ್ನತೆಯ ಪರಿಣಾಮ ವಾಗಿ ಭಾರತವು ತನ್ನ ರಕ್ಷಣಾ ವೆಚ್ಚವನ್ನು 2021ರಿಂದ 6 ಪ್ರತಿಶತ ಮತ್ತು 2013ರಿಂದ ಶೇ. 47ರಷ್ಟು ಹೆಚ್ಚಿಸಿದೆ. ಸಶಸ್ತ್ರ ಪಡೆಗಳಿಗೆ ಉಪ ಕರಣಗಳನ್ನು ನವೀಕರಿಸಲು ಮತ್ತು ಚೀನಾದೊಂದಿಗಿನ ವಿವಾದಿತ ಗಡಿಯಲ್ಲಿ ಸೇನಾ ಮೂಲ ಸೌಕರ್ಯ ಕಲ್ಪಿಸಲು ಮಾಡಲಾದ ಬಂಡ ವಾಳದ ವೆಚ್ಚವು 2022ರಲ್ಲಿ ಒಟ್ಟು ಮಿಲಿಟರಿ ವೆಚ್ಚದ 23 ಪ್ರತಿಶತದಷ್ಟಿದೆ ಎಂದು ವರದಿ ಹೇಳಿದೆ.
ಯೂಕ್ರೇನ್ ಆರ್ಥಿಕತೆಗೆ ಹಾನಿ ಮಿಲಿಟರಿ ಖರ್ಚು ಆರು ಪಟ್ಟು ಅಧಿಕ: ಯೂಕ್ರೇನ್ನ ಮಿಲಿಟರಿ ವೆಚ್ಚವು 2022ರಲ್ಲಿ 44 ಶತಕೋಟಿ ಡಾಲರ್ಗೆ (3,59,727 ಕೋಟಿ ರೂಪಾಯಿ) ತಲುಪಿದೆ. 2021ನೇ ಸಾಲಿಗೆ ಹೋಲಿಸಿದರೆ ಈ ವೆಚ್ಚವು 640 ಪ್ರತಿಶತದಷ್ಟು ಹೆಚ್ಚಳವಾಗಿದೆ. ಅಂದರೆ, 6.4 ಪಟ್ಟು ಜಾ ಸ್ತಿ. ಒಂದು ವರ್ಷದ ಮಿಲಿಟರಿ ವೆಚ್ಚ ಏರಿಕೆಯಲ್ಲಿ ಯೂಕ್ರೇನ್ ಈಗ ಜಾಗತಿಕವಾಗಿ ಮುಂಚೂಣಿಯಲ್ಲಿದೆ. ಯುದ್ಧದ ಪರಿಣಾಮವಾಗಿ ಯೂಕ್ರೇನ್ ಆರ್ಥಿಕತೆಗೆ ಅಪಾರ ಹಾನಿಯುಂಟಾಗಿದೆ. ಹೀಗಾಗಿ, 2022ರಲ್ಲಿ ಮಿಲಿಟರಿ ವೆಚ್ಚದ ಹೊರೆಯು ಆ ದೇಶದ ಒಟ್ಟಾರೆ ಜಿಡಿಪಿಯ ಶೇ. 34ಕ್ಕೆ ಏರಿದೆ. 2021ರಲ್ಲಿ ಮಿಲಿಟರಿ ವೆಚ್ಚವು ಜಿಡಿಪಿಯ 3.2 ಪ್ರತಿಶತದಷ್ಟು ಇತ್ತು ಎಂಬುದು ಗಮನಾರ್ಹವಾಗಿದೆ.